ಎಲ್.ಮಂಜುನಾಥ
ಹುಬ್ಬಳ್ಳಿ: ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆಗಳು, ರಸ್ತೆ ಬದಿಯಲ್ಲಿ ರಾಶಿ ರಾಶಿ ತ್ಯಾಜ್ಯ, ರಸ್ತೆಯಲ್ಲಿ ಹರಿಯುವ ಚರಂಡಿ ನೀರು, ಗುಂಡಿ ಬಿದ್ದ ರಸ್ತೆಗಳಲ್ಲಿಯೇ ಮಕ್ಕಳು, ಮಹಿಳೆಯರ ಸಂಚಾರ, ಸರಿಯಾದ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲ. ಮಕ್ಕಳ ಮೇಲೆ ಎರಗುವ ಬೀದಿ ನಾಯಿಗಳ ಹಿಂಡು...
ಇಂತಹ ಹಲವು ಸಮಸ್ಯೆಗಳ ನಡುವೆಯೇ ಹಳೇ ಹುಬ್ಬಳ್ಳಿ ಪ್ರದೇಶದ ಇಸ್ಲಾಂಪುರ, ಇಬ್ರಾಹಿಂಪುರ ಹಾಗೂ ಎಸ್.ಎಂ.ಕೃಷ್ಣ ನಗರದ ನಿವಾಸಿಗಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಇಸ್ಲಾಂಪುರ ರಸ್ತೆ ಬದಿಯಲ್ಲಿಯೇ ಮನೆಯ ಹಾಗೂ ಹೋಟೆಲ್ ತ್ಯಾಜ್ಯವನ್ನು ಸುರಿಯಲಾಗಿದೆ. ಇದರ ಜೊತೆಗೆ ವಿಲೇವಾರಿಯಾಗದೇ ರಾಶಿ ರಾಶಿಯಾಗಿ ಬಿದ್ದಿರುವ ರಾಜಕಾಲುವೆಯ ಹೊಳು. ಇದು ಇಲ್ಲಿನ ಚರಂಡಿ ಹಾಗೂ ರಾಜಕಾಲುವೆಗೆ ಮತ್ತೆ ಬೀಳುತ್ತಿದೆ. ಇದರಿಂದಾಗಿ ಚರಂಡಿಯಲ್ಲಿ ಹಾಗೂ ರಾಜಕಾಲುವೆಯಲ್ಲಿ ಎಂದಿನಂತೆ ಹೊಳು ತುಂಬಿಕೊಂಡು, ಅದರ ಕೊಳಚೆ ನೀರು ಹತ್ತಿರ ಮನೆಯ ಅಂಗಳಕ್ಕೆ ನುಗ್ಗುತ್ತದೆ. ಮಳೆಗಾಲದ ವೇಳೆಯಲ್ಲಿ ಕೆಲವೊಮ್ಮೆ ಮನೆಯೊಳಗೆಯೇ ಹರಿಯುತ್ತದೆ ಎನ್ನುವುದು ಸ್ಥಳೀಯರ ಆರೋಪವೂ ಇದೆ.
ಇಲ್ಲಿನ ರಾಜಕಾಲುವೆ ಉದ್ದಕ್ಕೂ ಕೆಲವರು ಕಾಲುವೆಯ ಗೋಡೆಗೆ ತಾಗಿಕೊಂಡೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ನಿವಾಸಿಗಳ ಸ್ಥಳಾಂತರಕ್ಕೆ ಈ ಹಿಂದೆ ಚಿಂತನೆಯನ್ನೂ ನಡೆಸಲಾಗಿತ್ತು. ಅದೂ ಸಹ ಜಾರಿಯಾಗಿಲ್ಲ.
ಕೋಳಿ ಮಾಂಸ ಮಾರಾಟ ಮಾಡುವ ಇಲ್ಲಿನ ಕೆಲ ಅಂಗಡಿಯವರು ಹಾಗೂ ಹೋಟೆಲ್‌ನವರು ತ್ಯಾಜ್ಯವನ್ನು ರಾಜಕಾಲುವೆಯಲ್ಲಿಯೇ ಎಸೆಯುತ್ತಾರೆ. ಇದನ್ನು ತಿನ್ನುವುದಕ್ಕಾಗಿಯೇ ಇಸ್ಲಾಂಪುರ, ಇಬ್ರಾಹಿಂಪುರ ಹಾಗೂ ಎಸ್.ಎಂ.ಕೃಷ್ಣ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದ್ದುಗಳ ಹಾರಾಟವೂ ಹೆಚ್ಚಾಗಿದೆ.
ಬೀದಿ ನಾಯಿಗಳ ಹಾವಳಿ ಹಾಗೂ ಹದ್ದುಗಳ ಹಾರಾಟದಿಂದಾಗಿ ಇಲ್ಲಿನ ಜನರು ನೆಮ್ಮದಿಯಾಗಿ ಸಂಚರಿಸುವುದು ಕಷ್ಟವಾಗಿದೆ. ಕೆಲವೊಮ್ಮೆ ಬೀದಿ ನಾಯಿಗಳು ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡುತ್ತವೆ.
ಹಾಳಾದ ರಸ್ತೆಗಳ: ಇಸ್ಲಾಂಪುರ, ಇಬ್ರಾಹಿಂಪುರ ಹಾಗೂ ರಜಾಟೌನ್ ಪ್ರದೇಶದ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತುಕೊಂಡು ಜನರ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ರಾತ್ರಿ ವೇಳೆಯಲ್ಲಿ ಇಲ್ಲಿ ಸಂಚಾರ ದುಸ್ತರವಾಗಿದೆ.
ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿಕೊಡಿ ಎಂದು ಹಲವು ಬಾರಿ ಇಲ್ಲಿನ ಜನರು ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ, ಅವರ ಸಮಸ್ಯೆ ಬಗೆಹರಿದಿಲ್ಲ. ಗುಂಡಿ ಬಿದ್ದಿರುವ ರಸ್ತೆ ಬದಿಯಲ್ಲಿಯೇ ಬೃಹತ್ ಕಾಲುವೆ ಇರುವುದರಿಂದಾಗಿ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ.
’ಸ್ಥಳೀಯ ನಿವಾಸಿಗಳು ಹಾಗೂ ಹೋಟೆಲ್‌ನವರು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಗೂ ರಾಜಕಾಲುವೆಯಲ್ಲಿ ಸುರಿಯುತ್ತಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಬೀದಿ ನಾಯಿಗಳು ಹಾಗೂ ಹದ್ದುಗಳ ಹಾರಾಟ ಹೆಚ್ಚಾಗಿದೆ. ಎಲ್ಲಂದರಲ್ಲಿ ಕಸ ಸುರಿಯಬೇಡಿ‘ ಎಂದು ಮನವಿ ಮಾಡಿದರೂ ಯಾರೂ ಕೇಳುತ್ತಿಲ್ಲ‘ ಎಂದು ಎಸ್.ಎಂ.ಕೃಷ್ಣ ನಗರದ ನಿವಾಸಿ ಅಬ್ದುಲ್ ಅಸಮಾಧಾನ ವ್ಯಕ್ತಪಡಿಸಿದರು.
ಇಸ್ಲಾಂಪುರ ಬಳಿಯ ರಸ್ತೆ ಬದಿ ಬಿದ್ದಿರುವ ರಾಜಕಾಲುವೆ ಹೊಳನ್ನು ವಿಲೇವಾರಿ ಮಾಡಲಾಗುವುದು. ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ. ನಗರ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು. –ಡಾ.ಈಶ್ವರ ಉಳ್ಳಾಗಡ್ಡಿ ಪಾಲಿಕೆ ಆಯುಕ್ತ
ಜೋರು ಮಳೆ ಬಂದರೆ ರಾಜಕಾಲುವೆ ಬಳಿಯ 50ಕ್ಕೂ ಅಧಿಕ ಮನೆಗಳಿಗೆ ತೊಂದರೆಯಾಗುತ್ತದೆ. ಸಮಸ್ಯೆ ಬಗೆಹರಿಸಬೇಕು. ರಸ್ತೆ ಹಾಳಾಗಿದ್ದು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು.–ಅಲ್ತಾಫ್ ಬೆಟಗೇರಿ ಇಬ್ರಾಹಿಂಪುರ ನಿವಾಸಿ
₹80 ಕೋಟಿ ಅನುದಾನಕ್ಕೆ ಪ್ರಸಾವ ರಾಜಕಾಲುವೆಯ ಉದ್ದಕ್ಕೂ ನೂರಾರು ಮನೆಗಳನ್ನು ನಿರ್ಮಿಸಲಾಗಿದೆ. ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ ನಾಲೆಯ ಉದ್ದಕ್ಕೂ ಕಾಂಪೌಂಡ್ ನಿರ್ಮಿಸಲಾಗುವುದು. ಇದಕ್ಕಾಗಿ ₹80 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. –ಪ್ರಸಾದ ಅಬ್ಬಯ್ಯ ಶಾಸಕ ಹುಬ್ಬಳ್ಳಿ ಪೂರ್ವ ‘ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮ’ ವಾರ್ಡ್‌ನ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ₹ 89 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅನುದಾನದ ಕೊರತೆಯಿಂದ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. –ಹುಸೇನ್‌ಬಿ ಇರ್ಫಾನ್ ನಲವತವಾಡ 77ನೇ ವಾರ್ಡ್‌ನ ಸದಸ್ಯೆ ಪಾಲಿಕೆ ತ್ಯಾಜ್ಯ ವಿಲೇವಾರಿಗೆ ಕ್ರಮ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಒತ್ತುವರಿಯಾಗಿರುವ ರಾಜಕಾಲುವೆ ಮಾರ್ಗವನ್ನು ತೆರವುಗೊಳಿಸಿ ರಾಜಕಾಲುವೆ ಉದ್ದಕ್ಕೂ ಬೃಹತ್ ಕಾಂಪೌಂಡ್ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯ ಅನುದಾನ ಮೀಸಲಿಡಲಾಗಿದೆ. –ಪಮೀದಾ ಕರಡಗಿ 79ನೇ ವಾರ್ಡ್‌ನ ಸದಸ್ಯೆ ಪಾಲಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.