ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಉತ್ಪನ್ನಗಳ ಬ್ರ್ಯಾಂಡ್‌ ರೂಪಿಸಿ: ಶೆಟ್ಟರ್

ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ
Last Updated 12 ಮಾರ್ಚ್ 2022, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಖಾದಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ ಆಗಿ ರೂಪಿಸಬೇಕು. ಬಣ್ಣ, ವಿನ್ಯಾಸದಲ್ಲಿ ಹೊಸತನವನ್ನು ನೇಕಾರರು ಹಾಗೂ ಮಾರಾಟಗಾರರು ಮೈಗೂಡಿಸಿಕೊಳ್ಳಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್ ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವಾಲಯ(ಎಂಎಸ್‌ಎಂಇ) ಹಾಗೂ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಆಶ್ರಯದಲ್ಲಿ ನಗರದ ಗೋಕುಲ ಗಾರ್ಡನ್‌ನಲ್ಲಿ ಆಯೋಜಿಸಿರುವ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸಿದ್ಧ ಕಂಪನಿಗಳು ನೇಕಾರರಿಂದ ಬಟ್ಟೆ ಖರೀದಿಸಿ ತಮ್ಮ ಕಂಪನಿಯ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡುತ್ತವೆ. ಇದರಿಂದ ಉತ್ಪಾದಕರಿಗೆ ಹೆಚ್ಚಿನ ಲಾಭ ದೊರೆಯುವುದಿಲ್ಲ. ಹೀಗಾಗಿ ಖಾದಿ ನೇಕಾರರೇ ಗುಣಮಟ್ಟದ ಬಟ್ಟೆ ತಯಾರಿಸಿ ನಿರ್ದಿಷ್ಟ ಹೆಸರಿನಲ್ಲಿ ಪ್ರಚಾರ ಮಾಡಬೇಕು. ಜನರೇ ಮಳಿಗೆ ಹುಡುಕಿಕೊಂಡು ಬರುವಂತೆ ಆಗಬೇಕು’ ಎಂದು ತಿಳಿಸಿದರು.

‘ಬೆಂಗೇರಿಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು 2021–22ರಲ್ಲಿ ₹47.17ಕೋಟಿ ಮೌಲ್ಯದ ಖಾದಿ ಬಟ್ಟೆಯನ್ನು ತಯಾರಿಸಿದೆ. ಇದರಿಂದ ಆರು ಸಾವಿರ ಮಂದಿಗೆ ಉದ್ಯೋಗ ದೊರೆತಿದೆ. ಬೆಂಗೇರಿಯ ರಾಷ್ಟ್ರಧ್ವಜ ಕೇಂದ್ರದಲ್ಲಿ ಪ್ರತಿವರ್ಷ 3ರಿಂದ 4 ಕೋಟಿ ಧ್ವಜಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಈ ಎರಡೂ ಕೇಂದ್ರಗಳು ದೇಶಕ್ಕೆ ಮಾದರಿಯಾಗಿವೆ’ ಎಂದು ತಿಳಿಸಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ, ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ನಿರ್ದೇಶಕ ಕೆ.ವಿ.ಪತ್ತಾರ, ನಿರ್ದೇಶಕ ಎಸ್‌.ಎಸ್‌.ತಾಂಬಾ, ನಾಗನಗೌಡರ್, ಶಿವಾನಂದ ಮಠಪತಿ ಪಾಲ್ಗೊಂಡಿದ್ದರು.

ಮೇಳವು ಮಾರ್ಚ್‌ 26ರವರೆಗೆ ನಡೆಯಲಿದೆ. ವಿವಿಧ ಜಿಲ್ಲೆಗಳ ಮಾರಾಟಗಾರರು ಬಂದಿದ್ದಾರೆ. ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆ, ಗುಳೇದಗುಡ್ಡದ ಖಣ, ಮಹಾಲಿಂಗಪುರ, ತೇರದಾಳದ ಖಾದಿ ಸಮವಸ್ತ್ರಗಳು ಮೇಳದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT