ಮಂಗಳವಾರ, ಜನವರಿ 18, 2022
16 °C

ಧರ್ಮದ ಉಳಿವಿಗಾಗಿ ಶ್ರಮಿಸಿದ ಜಂಗಮರು- ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ವೀರಶೈವ ಧರ್ಮ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ, ಹಳ್ಳಿಗಳಲ್ಲಿರುವ ಜಂಗಮರು. ಸಾವಿರಾರು ವರ್ಷಗಳಿಂದ‌ ಜಂಗಮರು ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ’ ಎಂದು ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಹೇಳಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಅರ್ಚಕರ ಮತ್ತು ಪುರೋಹಿತರ ಘಟಕ, ಕರ್ನಾಟಕ ಸಂಸ್ಕೃತ ವಿದ್ಯಾಲಯದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಅರ್ಚಕರ ಮತ್ತು ಪುರೋಹಿತರ ಹಾಗೂ ಆಗಮಿಕರ ವಿಶ್ವಮಟ್ಟದ ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಪುರದ ಹಿತವನ್ನು ಬಯಸುವವನೇ ಪುರೋಹಿತ. ವಿವಿಧೆಡೆಯಿಂದ ಮಾರ್ಗದರ್ಶನ ನೀಡಲು  ಬಂದಿರುವ ಶಾಸ್ತ್ರಿಗಳ ಮಾರ್ಗದರ್ಶನ‌ ಪಡೆದು, ಸಮಾಜಕ್ಕೆ ಒಳಿತು ಮಾಡಿ. ನಮ್ಮ ಸಾಧನೆ ಮಾತನಾಡಬೇಕು, ಮಾತುಗಳೇ ಸಾಧನೆಯಾಗಬಾರದು’ ಎಂದರು.

ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ‘ಹೊಸ ಪೀಳಿಗೆಗೆ ಪೌರೋಹಿತ್ಯದ ಆಚರಣೆ, ಕ್ರಮಗಳು ಗೊತ್ತಾಗಬೇಕು.  ವಿದ್ವತ್ ಪಡೆದು, ಶಾಸ್ತ್ರ ಬದ್ಧವಾಗಿ ವೈದೀಕತ್ವವನ್ನು ಕಲಿಯಬೇಕು’ ಎಂದರು.

ಮಹಾರಾಷ್ಟ್ರದ ಶ್ರೀಮದ್‌ ಕಾಶಿ ಜ್ಞಾನಸಿಂಹಾಸನ ಪೀಠ ಖಾಸಾ ಶಾಖಾ ಮಠದ ಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಜಕೀಯ ಧುರೀಣ ರಜತ್ ಉಳ್ಳಾಗಡ್ಡಿಮಠ, ಕವಿಪು ಮಹಾಸಭಾ ಹಾವೇರಿ ವಿಭಾಗದ ಅಧ್ಯಕ್ಷ ಚನ್ನೇಶ ಶಾಸ್ತ್ರಿ, ಅಖಿಲ ಭಾರತ ವೀರಶೈವ ಲಿಂಗಾಯತ ಜಂಗಮ‌ ಅರ್ಚಕ, ಪುರೋಹಿತ ಮಹಾಸಭಾ ಮಹಾರಾಷ್ಟ್ರದ ಅಧ್ಯಕ್ಷ ಶಿವಯೋಗಿ ಸ್ವಾಮಿ ಹೋಳಿಮಠ,  ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮಾತನಾಡಿದರು.

ಅಮ್ಮಿನಭಾವಿಯ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳದ ತಾವರಗೇರಾದ ಮಹೇಶ್ವರ ತಾತನವರು ಶಿವಯೋಗಿ ಶರಣ, ಆಂಧ್ರಪ್ರದೇಶದ ಎಂ.ಸುರೇಶ ಕುಮಾರ ಶಾಸ್ತ್ರಿ ಉಪಸ್ಥಿತರಿದ್ದರು.

ಚಿರಂತ ಸ್ವಾಮಿ ವಿಜಯಪುರ ಪ್ರಾರ್ಥಿಸಿದರು. ಬೈಲಹೊಂಗಲದ ಮಹಾಂತೇಶ ಶಾಸ್ತ್ರಿ, ಗೌರಿ ನಿರೂಪಿಸಿದರು. ರಾಜ್ಯ, ಹೊರ ರಾಜ್ಯಗಳ ಐನೂರಕ್ಕೂ ಹೆಚ್ಚು ಪುರೋಹಿತರು, ಅರ್ಚಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು