ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಬೆಳೆಸಿಕೊಳ್ಳಲು ಸಲಹೆ

ಲಕ್ಷ ಫೌಂಡೇಷನ್, ಎಸಿಸಿಪಿಎಲ್‌ನಿಂದ ಉದ್ಯೋಗ ಮೇಳ
Last Updated 29 ಜೂನ್ 2022, 15:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯುವಕರು ಉದ್ಯೋಗ ಪಡೆಯಲು ಬೇಕಾದ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹು–ಧಾ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

ಇಲ್ಲಿನವಿದ್ಯಾನಗರದ ಮರಾಠ ಭವನದಲ್ಲಿ ಬೆಂಗಳೂರಿನ ಎಸಿಸಿಪಿಎಲ್ ತರಬೇತಿ ವಿಭಾಗ ಮತ್ತು ಹುಬ್ಬಳ್ಳಿಯ ಲಕ್ಷ ಫೌಂಡೇಷನ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಖಾಸಗಿ ಕ್ಷೇತ್ರಗಳಲ್ಲಿಯೂ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಉತ್ತಮವಾಗಿ ಕೆಲಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಈ ಹಿಂದೆ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಲು ಪರದಾಡಬೇಕಿತ್ತು. ಈಗ ‍ಪ್ರತಿಭೆ, ಕೌಶಲ ಇದ್ದರೆ ಕಂಪನಿಗಳೇ ಹುಡುಕಿ ಕೊಂಡು ಬರುತ್ತವೆ ಎಂದು ಹೇಳಿದರು.

ವಿದ್ಯಾನಗರ ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಹಳ್ಳೂರಕರ ಮಾತನಾಡಿ, ಸರ್ಕಾರಿ ಉದ್ಯೋಗ ಪಡೆಯಲು ಹಣ ಕೊಡಬೇಕು ಎಂಬ ಭಾವನೆ ಬಹುತೇಕರಲ್ಲಿದೆ. ಆದರೆ, ನಿರಂತರ ಅಧ್ಯಯನ, ಕಠಿಣ ಪರಿಶ್ರಮ ಇದ್ದರೆ ಸರ್ಕಾರಿ ಉದ್ಯೋಗ ಪಡೆಯುವುದು ಕಷ್ಟವಲ್ಲ ಎಂದರು.

ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಮೇಳವನ್ನು ಆಯೋಜಿಸುತ್ತಿವೆ. ಯುವಕರು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು ಎಂದು ಹೇಳಿದರು.

ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ ಮಾತನಾಡಿ, ಖಾಸಗಿ ಕಂಪನಿಗಳಲ್ಲಿಯೂ ಉತ್ತಮ ವೇತನ ಸಿಗುತ್ತದೆ. ಉದ್ಯೋಗ ಪಡೆಯಲು ವಿದ್ಯಾರ್ಹತೆಯ ಜತೆಗೆ ಕೌಶಲ ತರಬೇತಿಯ ಅಗತ್ಯ ಇದ್ದರೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಅಗತ್ಯ ತರಬೇತಿ ನೀಡಲಾಗುವುದು ಎಂದರು.

ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಮಾತನಾಡಿದರು.

ಉದ್ಯೋಗ ಮೇಳದಲ್ಲಿ 28 ಸ್ಥಳೀಯ, ರಾಷ್ಟ್ರಮಟ್ಟದ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಭಾಗವಹಿಸಿದ್ದವು. ಎಸ್ಸೆಸ್ಸೆ‌ಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಮತ್ತು ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ 1,800 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. 50 ಜನರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಯಿತು. 600 ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದರು.

ಲಕ್ಷ ಫೌಂಡೇಷನ್ ಅಧ್ಯಕ್ಷ ರಘುನಾಥ ಖೋಡೆ, ಕಾರ್ಯದರ್ಶಿ ರಾಧಾ ಖೋಡೆ, ಯೋಜನಾ ವ್ಯವಸ್ಥಾಪಕ ಮಹೇಶ್‌ ಕೆ.ಭಟ್‌, ಬೆಂಗಳೂರಿನ ಎಸಿಸಿಪಿಎಲ್ ತರಬೇತಿ ವಿಭಾಗ ಯೋಜನಾ ವ್ಯವಸ್ಥಾಪಕರಾದ ಪ್ರಕಾಶ್‌, ತಿಲಕ್ ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT