ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕ್ಷೇತ್ರ: ಪ್ರೊ.ಎಂ.ವೆಂಕಟೇಶ ಕುಮಾರ್‌ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ

‘ಗುರುಗಳಿಗೆ ಸಿಕ್ಕ ಪ್ರಶಸ್ತಿ ಲಭಿಸಿದ್ದಕ್ಕೆ ನಾನು ಧನ್ಯ’
Last Updated 4 ಫೆಬ್ರುವರಿ 2022, 18:07 IST
ಅಕ್ಷರ ಗಾತ್ರ

ಧಾರವಾಡ: ‘ಮಧ್ಯಪ್ರದೇಶ ಸರ್ಕಾರ ನೀಡುವ ಕಾಳಿದಾಸ ಸಮ್ಮಾನ ಪ್ರಶಸ್ತಿಯು ಗುರುಗಳಾದ ಪಂಡಿತ್ ಪುಟ್ಟರಾಜ ಗವಾಯಿಗಳಿಗೆ ಸಿಕ್ಕಿತ್ತು. ಅವರ ಕೃಪಾಶೀರ್ವಾದದಿಂದ ನನಗೂ ದೊರೆತಿದ್ದಕ್ಕೆ ನಾನು ಧನ್ಯ’ ಎಂದು ಹಿರಿಯ ಹಿಂದೂಸ್ತಾನಿ ಗಾಯಕ ಪಂಡಿತ್ ವೆಂಕಟೇಶ ಕುಮಾರ ಹೇಳಿದರು.

₹2ಲಕ್ಷ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ಒಳಗೊಂಡಿರುವ ಕಾಳಿದಾಸ ಸಮ್ಮಾನ 2017ನೇ ಸಾಲಿನ ಪ್ರಶಸ್ತಿ ಪಡೆದ ಅವರು ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

‘1980ರಲ್ಲಿ ಕಾಳಿದಾಸ ಸಮ್ಮಾನ ಪ್ರಶಸ್ತಿ ಆರಂಭಿಸಿದ ಮಧ್ಯಪ್ರದೇಶ ಸರ್ಕಾರ, ಮೊದಲು ನೀಡಿದ್ದೇ ಈ ನೆಲದ ಪಂಡಿತ್ ಮಲ್ಲಿಕಾರ್ಜುನ ಮನಸೂರ ಅವರಿಗೆ. 1981ರಲ್ಲಿ ಪಂಡಿತ್ ಕುಮಾರ ಗಂಧರ್ವ ಅವರಿಗೆ ಲಭಿಸಿತು. 2005ರಲ್ಲಿ ಈ ಪ್ರಶಸ್ತಿ ನನ್ನ ಗುರುಗಳಾದ ಪಂಡಿತ್ ಪುಟ್ಟರಾಜ ಗವಾಯಿಗಳಿಗೂ ಸಿಕ್ಕಿದೆ. ಇದು ಈ ಮಣ್ಣಿನ ಶ್ರೇಷ್ಠ ಗುಣ. ಈ ನೆಲದಲ್ಲಿ ಶಿಕ್ಷಣ ಪಡೆದು, ಅದರಲ್ಲಿ ಪ್ರಾಮಾಣಿಕವಾಗಿ ದುಡಿದರೆ ಅಂಥವರನ್ನು ಪ್ರಶಸ್ತಿ ಖಂಡಿತಾ ಹುಡುಕಿಕೊಂಡು ಬರಲಿದೆ. ಅವಿಭಜಿತ ಧಾರವಾಡದ ಗದುಗಿನಲ್ಲಿ ಶಿಕ್ಷಣ ಪಡೆದು ಧಾರವಾಡದಲ್ಲಿ ಕೆಲಸ ಸಿಕ್ಕಾಗ ಗುರುಗಳು ನೀನು ಪುಣ್ಯವಂತ ಎಂದು ಆಶೀರ್ವದಿಸಿದ್ದರು. ಇವೆಲ್ಲವೂ ಅವರ ಆಶೀರ್ವಾದದ ಫಲವೇ ಆಗಿದೆ’ ಎಂದರು.

‘ದೇವಾಸ್‌ನಲ್ಲಿ ನೆಲೆಸಿದ್ದ ಕುಮಾರ ಗಂಧರ್ವರಿಗೆ ಮೊದಲ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಅವರು ಈ ಪ್ರಶಸ್ತಿಯನ್ನು ತನಗಿಂತ ಹಿರಿಯರಾದ ಪಂಡಿತ್ ಮನಸೂರ ಅವರಿಗೆ ಕೊಡುವಂತೆ ಅಲ್ಲಿನ ಸರ್ಕಾರಕ್ಕೆ ಹೇಳಿದ್ದರು. ಇದನ್ನು ಕಾರ್ಯಕ್ರಮವೊಂದರಲ್ಲಿ ಮನಸೂರ ಅವರೇ ಹೇಳಿದ್ದರು. ಸಾಂಸ್ಕೃತಿಕ ಕ್ಷೇತ್ರದಲ್ಲಿನ ಇಂಥ ಸಂಬಂಧ ಇತ್ತೀಚಿನ ದಿನಗಳಲ್ಲಿ ವಿರಳಾತಿವಿರಳ’ ಎಂದು ನೆನಪಿಸಿಕೊಂಡರು.

‘ಪ್ರಶಸ್ತಿಗಾಗಿ ನಾನು ಎಂದಿಗೂ ಅರ್ಜಿ ಹಾಕಿದವನಲ್ಲ. ನಿನ್ನ ಕೆಲಸ ನೀನು ಮಾಡು. ತಾನಾಗಿಯೇ ಬರುವ ಪ್ರಶಸ್ತಿಗಳನ್ನು ಸ್ವೀಕರಿಸು. ಆದರೆ ಎಂದಿಗೂ ಪ್ರಶಸ್ತಿ ಪಡೆಯುವ ಸಲುವಾಗಿಯೇ ಕೆಲಸ ಮಾಡಬೇಡ ಎಂದು ಗುರುಗಳು ಹೇಳುತ್ತಿದ್ದ ಮಾತು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ಮಾತು ಹಾಗೂ ಆಶೀರ್ವಾದ ಸದಾ ನೆನಪಾಗುತ್ತಲೇ ಇರುತ್ತದೆ. ಪ್ರಶಸ್ತಿಗಳು ಬಂದಾಗ ಜವಾಬ್ದಾರಿ ಮತ್ತು ಸಮಾಜಕ್ಕೆ ಇನ್ನಷ್ಟು ಸೇವೆ ಮಾಡುವ ಮನೋಭಾವ ಹೆಚ್ಚಾಗುತ್ತದೆ’ ಎಂದು ವೆಂಕಟೇಶ ಕುಮಾರ ಹೇಳಿದರು.

‘2017ರಲ್ಲೇ ಈ ಪ್ರಶಸ್ತಿ ಘೋಷಣೆಯಾಗಿತ್ತು. ಅಲ್ಲಿಂದ 2021ರವರೆಗಿನ ಪ್ರಶಸ್ತಿಗಳನ್ನು ಕಳೆದ ಡಿ. 28ರಂದು ಗ್ವಾಲಿಯರ್‌ನಲ್ಲಿ ಪ್ರದಾನ ಮಾಡಲಾಗಿತ್ತು. ಕಾರಣಾಂತ ರಗಳಿಂದ ಅಲ್ಲಿಗೆ ಹೋಗಲು ನನಗೆ ಆಗಿರಲಿಲ್ಲ. ನನ್ನ ಸ್ನೇಹಿತರೊಬ್ಬರು ಪ್ರಶಸ್ತಿ ಪಡೆದು ಪುಣೆಗೆ ತಂದಿದ್ದರು. ಇತ್ತೀಚೆಗೆ ಪುಣೆಯಲ್ಲಿ ಆಯೋಜಿಸಲಾಗಿದ್ದ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದಾಗ ಅವುಗಳನ್ನು ತೆಗೆದುಕೊಂಡು ಬಂದೆ’ ಎಂದರು.

ರಂಗಭೂಮಿ ಕ್ಷೇತ್ರದಲ್ಲಿ ದುಡಿದ ಬಿ.ವಿ. ಕಾರಂತ, ಗಿರೀಶ ಕಾರ್ನಾಡ ಹಾಗೂ ಕೆ.ವಿ.ಸುಬ್ಬಣ್ಣ ಅವರಿಗೂ ಕಾಳಿದಾಸ ಸಮ್ಮಾನ ಪ್ರಶಸ್ತಿ ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT