ಶುಕ್ರವಾರ, ಜನವರಿ 24, 2020
28 °C

ತೇಜೋ ತುಂಗಭದ್ರಾಕ್ಕೆ 3 ವರ್ಷದ ಅಧ್ಯಯನ: ವಸುಧೇಂದ್ರ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಅಭಿಮಾನಿ ಓದುಗರು ಕೊಂಡ ತಮ್ಮ ಹೊಸ ಕಾದಂಬರಿ ‘ತೇಜೋ–ತುಂಗಭದ್ರಾ’ ಕ್ಕೆ ಹಸ್ತಾಕ್ಷರ ಹಾಕಿಕೊಟ್ಟು ಸೆಲ್ಫಿಗೆ ಪೋಸು ಕೊಡುತ್ತ ‘ಪ್ರಜಾವಾಣಿ’ ಮೆಟ್ರೊದೊಂದಿಗೆ ಖುಷಿಯಿಂದ ಹೇಳಿದವರು ಲೇಖಕ ವಸುಧೇಂದ್ರ.

‘ಪುಸ್ತಕ ಬಿಡುಗಡೆ ಮಾಡಲು ಗಣ್ಯರನ್ನು ಹುಡುಕುವ ಕೆಲಸವಿಲ್ಲ; ಸಭಾಂಗಣ ಬೇಕಿಲ್ಲ, ಒಂದಿಷ್ಟು ಊರು ಅಲೆದಾಡಿದರೆ ಸಾಕು; ಖರ್ಚು ಕಡಿಮೆ...ಜನರೊಟ್ಟಿಗೆ ಮಾತುಕತೆ, ಅವರಿಂದ ಸಿಗುವ ಉತ್ತಮ ಸ್ಪಂದನೆ... ಎಷ್ಟು ಖುಷಿಯಾಗಿದೆ ಗೊತ್ತಾ? ಇಷ್ಟು ದಿನ ನನಗೆ ಈ ಮಾದರಿ ಯಾಕೆ ಹೊಳೀಲಿಲ್ಲ ಅಂತ ಬೇಸರ ಆಗ್ತಿದೆ. ನನ್ನ ಪ್ರಕಾರ ಎಲ್ಲ ಲೇಖಕರೂ ಈ ವಿಧಾನವನ್ನೇ ಅನುಸರಿಸಲಿ...’

ಅಭಿಮಾನಿ ಓದುಗರು ಕೊಂಡ ತಮ್ಮ ಹೊಸ ಕಾದಂಬರಿ ‘ತೇಜೋ–ತುಂಗಭದ್ರಾ’ ಕ್ಕೆ ಹಸ್ತಾಕ್ಷರ ಹಾಕಿಕೊಟ್ಟು ಸೆಲ್ಫಿಗೆ ಪೋಸು ಕೊಡುತ್ತ ‘ಪ್ರಜಾವಾಣಿ’ ಮೆಟ್ರೊದೊಂದಿಗೆ ಖುಷಿಯಿಂದ ಹೇಳಿದವರು ಲೇಖಕ ವಸುಧೇಂದ್ರ.

ತಮ್ಮ ಹೊಸ ಕಾದಂಬರಿಯನ್ನು ಅವರು ಈ ಬಾರಿ ವಿನೂತನ ರೀತಿಯಲ್ಲಿ ಓದುಗರಿಗೆ ತಲುಪಿಸುತ್ತಿದ್ದಾರೆ. ಪುಸ್ತಕ ಬಿಡುಗಡೆಯ ಸಿದ್ಧ ಮಾದರಿಯನ್ನು ಕೈಬಿಟ್ಟಿದ್ದಾರೆ. ರಾಜ್ಯದ ಮಹಾನಗರಗಳ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅವರೇ ನಿಂತು ತಮ್ಮ ಕಾದಂಬರಿ ಕೊಂಡುಕೊಳ್ಳುವ ಓದುಗರೊಂದಿಗೆ ಮಾತುಕತೆ, ಹಸ್ತಾಕ್ಷರ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ನೀಡುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರಿಗೆ ಭೇಟಿ ನೀಡಿ ಬಂದಿದ್ದಾರೆ. ಈಗ ಹುಬ್ಬಳ್ಳಿ–ಧಾರವಾಡದಲ್ಲಿದ್ದಾರೆ.

ಭಾನುವಾರ ಹುಬ್ಬಳ್ಳಿಯ ದಾಜೀಬಾನ್‌ ಪೇಟೆಯ ಸಾಹಿತ್ಯ ಪ್ರಕಾಶನ ಹಾಗೂ ಕೊಯಿನ್‌ ರಸ್ತೆಯ ಸಪ್ನಾ ಪುಸ್ತಕ ಮಳಿಗೆಗಳಲ್ಲಿ ಓದುಗರಿಗೆ ಈ ಅವಕಾಶವನ್ನು ಅವರು ಕಲ್ಪಿಸಿಕೊಟ್ಟರು. ಸೋಮವಾರ ಧಾರವಾಡದಲ್ಲಿ ಓದುಗರಿಗೆ ಸಿಗಲಿದ್ದಾರೆ.

‘ಪ್ರತಿ ಬಾರಿ ಪುಸ್ತಕ ಬಿಡುಗಡೆಗೂ ಏನಾದರೂ ಹೊಸದನ್ನು ಆಲೋಚಿಸುತ್ತೇನೆ. ಪ್ರತಿ ಸಲದಂತೆ ವೇದಿಕೆಯಲ್ಲಿ ಕುಳಿತು ಅತಿಥಿಗಳಿಂದ ಹೊಗಳಿಸಿಕೊಳ್ಳುವುದು ಬೇಡ. ಈ ಬಾರಿ ವಿನೂತನವಾಗಿರಲಿ ಅಂದುಕೊಂಡಾಗ ಹೊಳೆದಿದ್ದು ಇದು. ಇಂಗ್ಲಿಷ್‌ ಸಾಹಿತ್ಯ ಲೋಕದಲ್ಲಿ ಇಂತಹ ಪ್ರಯತ್ನಗಳಿವೆ. ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಲೇಖಕರು ಪುಸ್ತಕ ಬಿಡುಗಡೆಗೆ ಇಂತಹ ತಂತ್ರ ಅನುಸರಿಸುವರು. ನಾನೂ ನನ್ನ ಹೊಸ ಪುಸ್ತಕ ಬಿಡುಗಡೆಗೆ ಈ ಪ್ರಯತ್ನ ಮಾಡಿದೆ. ಓದುಗರಿಂದ ಸಿಕ್ಕ ಈ ಅದ್ಭುತ ಪ್ರತಿಕ್ರಿಯೆಯಿಂದ ಥ್ರಿಲ್‌ ಆಗಿಬಿಟ್ಟಿದ್ದೇನೆ. ಮೊದಲ ಮುದ್ರಣ ಖಾಲಿ ಆಗಿ ಈಗ ಎರಡನೇ ಮುದ್ರಣದ ಕೃತಿಗಳೂ ಅರ್ಧಕ್ಕರ್ಧ ಖಾಲಿಯಾಗಿವೆ. ಆನ್‌ಲೈನ್‌ ಮೂಲಕವೂ ಬಹಳ ಓದುಗರು ಕೃತಿ ತರಿಸಿಕೊಳ್ಳುತ್ತಿದ್ದಾರೆ’ ಎಂದು ಮತ್ತಷ್ಟು ಖುಷಿಯಾದರು.

ನನಗೊಂದು ಬಿಡುಗಡೆ ಬೇಕಿತ್ತು...
‘ಮೋಹನಸ್ವಾಮಿ’ ಕಾದಂಬರಿ ಬಿಡುಗಡೆಯಾಗಿ ಎಲ್ಲೆಡೆ ಸಿಕ್ಕ ಪ್ರತಿಕ್ರಿಯೆ ಉತ್ತಮವಾಗಿದ್ದರೂ ಅದು ವೈಯಕ್ತಿಕ  ಅನ್ನಿಸಿಬಿಟ್ಟಿತ್ತು. ಅದರಿಂದ ಹೊರಬರಬೇಕಿತ್ತು. ಅದಕ್ಕಾಗಿ ಹೊಸ ಓದನ್ನು ಆರಂಭಿಸಿದೆ. ಮೂಲತಃ ನಾನು ಸಾಫ್ಟ್‌ವೇರ್ ಎಂಜಿನಿಯರ್‌. ಆದರೂ ಇತಿಹಾಸದ ಬಗ್ಗೆ ಒಲವಿತ್ತು. ನನ್ನ ಹುಟ್ಟೂರು ಬಳ್ಳಾರಿ. ವಿಜಯನಗರದ ಕೃಷ್ಣದೇವರಾಯನ ಸಾಮ್ರಾಜ್ಯದ ಇತಿಹಾಸ, ಹಂಪಿಯ ಗತವೈಭವ ಬಾಲ್ಯದಿಂದಲೂ ನನ್ನಲ್ಲಿ ವಿಶೇಷ ಕುತೂಹಲ ಮೂಡಿಸಿದ್ದವು. ಹೀಗಾಗಿ ನನ್ನ ಬಿಡುಗಡೆಯ ಹುಡುಕಾಟದಲ್ಲಿ ಹಲವಾರು ಐತಿಹಾಸಿಕ ಕಾದಂಬರಿಗಳನ್ನು ಓದಿದೆ. ಇತಿಹಾಸದ ಪುಸ್ತಕಗಳನ್ನು ಅಧ್ಯಯನ ಮಾಡಿದೆ. ಅಲ್ಲಿ ಹುಟ್ಟಿಕೊಂಡಿದ್ದು ‘ತೇಜೋ–ತುಂಗಭದ್ರಾ’ ಕಾದಂಬರಿ. ಲಿಸ್ಬನ್‌–ವಿಜಯನಗರ–ಗೋವಾ ನಡುವಣ ಸಂಬಂಧ, ಪೋರ್ಚುಗೀಸರು, ವಿಜಯನಗರ ಕಾಲದ ಘಟನಾವಳಿಗಳ ಅಧ್ಯಯನಕ್ಕೆ ಕುಳಿತೆ. ಅಬ್ಬಾ ಎಷ್ಟೊಂದು ವಿಷಯಗಳನ್ನು ಹೇಳಲಿಕ್ಕಿದೆ ಅನ್ನಿಸಿಬಿಟ್ಟಿತು.  2–3 ವರ್ಷ ಅಧ್ಯಯನ ಮಾಡಿದ ಬಳಿಕ ಈ ಕೃತಿ ಸಿದ್ಧವಾಯಿತು’ ಎಂದು ಅವರು ಈ ಕೃತಿಯ ಹಿಂದಿನ ಕಥೆಯನ್ನು ತೆರೆದಿಟ್ಟರು.

‘ವಿಚಿತ್ರವೆಂದರೆ ಈ ಕಾದಂಬರಿ ಬರೆಯಲು ಅಧ್ಯಯನ ಮಾಡಲು ಹೊರಟಾಗ, ನಮ್ಮ ವಿಜಯನಗರದ ಚರಿತ್ರೆಗಿಂತ ಪೋರ್ಚುಗೀಸರ ಕಾಲದ ಚರಿತ್ರೆಯ ಪುಟಗಳು ಬಹಳ ಅಚ್ಚುಕಟ್ಟಾಗಿ ದಾಖಲಾಗಿವೆ. ಹೆಜ್ಜೆ ಹೆಜ್ಜೆಗೂ ಮಾಹಿತಿ ಸಿಗುತ್ತ ಹೋಯಿತು. ರೋಮಾಂಚನಗೊಂಡುಬಿಟ್ಟೆ. ನಮ್ಮವರೂ ವಿದೇಶಿಗರಂತೆ ಆಯಾ ಕಾಲದ ಮಾಹಿತಿಗಳನ್ನು ಹೀಗೆ ದಾಖಲಿಸುತ್ತ ಹೋಗಬೇಕಪ್ಪ... ನಮ್ಮ ದೇಶದ ಐತಿಹಾಸಿಕ ಮಾಹಿತಿಗಳು ಅಷ್ಟಾಗಿ ಸಿಗುವುದೇ ಇಲ್ಲ; ಆದರೂ ಸಾಕಷ್ಟು ಕಷ್ಟಪಟ್ಟು ಎಲ್ಲ ಮಾಹಿತಿಗಳನ್ನು ಎರಡು ವರ್ಷ ಕಲೆ ಹಾಕಿ ಓದಿದೆ. ಮೂರನೇ ವರ್ಷ ಪಟ್ಟಾಗಿ ಕುಳಿತು ಬರೆದೆ...’ ಎನ್ನುತ್ತಾರೆ.

‘ಇನ್ನೊಂದು ಅಚ್ಚರಿ ಹಾಗೂ ಖುಷಿಯ ವಿಚಾರವೆಂದರೆ ಓದುಗರಿಗೆ ಈಗಲೂ ನಮ್ಮ ಇತಿಹಾಸದ ಬಗ್ಗೆ ಬಹಳ ಕುತೂಹಲವಿದೆ, ಅಭಿಮಾನವಿದೆ. ಹೇಗೆಂದರೆ, ತೀರಿಹೋದ ಕುಟುಂಬದ ಏಳು ತಲೆಮಾರಿನ ಹಿರಿಯರನ್ನೆಲ್ಲ ನಮ್ಮವರೆಲ್ಲ ಪಿತೃಮಾಸದಲ್ಲಿ ನೆನಪಿಸಿಕೊಂಡು ಶ್ರದ್ಧೆಯಿಂದ ನಡೆದುಕೊಳ್ಳುತ್ತಾರಲ್ಲ ಹಾಗೆ ಇತಿಹಾಸದ ಪುಟಗಳನ್ನು ತಿರುವುತ್ತಾರೆ, ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಈ ಐತಿಹಾಸಿಕ ಕಾದಂಬರಿಯಲ್ಲಿ ಯಾವುದೇ ರಾಜ ಮಹಾಜರ ವೈಭವೀಕರಣವಿಲ್ಲ; ಕೇವಲ ಆ ಕಾಲದ ಘಟನಾವಳಿಗಳ ಚಿತ್ರಣವಿದೆ. 15–16ನೇ ಶತಮಾನದ ದಾಖಲೀಕರಣವಾದರೂ ಅದು ಇಂದಿನ ಸಾಮಾನ್ಯರ ಬದುಕೂ ಆಗುತ್ತದೆ. ಹೀಗಾಗಿ ಅದು ಓದುಗರ ಭಾವಕೋಶವನ್ನು ತಲುಪಿದೆ. ಅಷ್ಟು ಪ್ರೀತಿಯಿಂದ ಈ ಕೃತಿಯನ್ನು ಓದುಗರು ಸ್ವಾಗತಿಸಿದ್ದಾರೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು