ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ ಕ್ಷೇತ್ರ: ಬಿಜೆಪಿ–ಕಾಂಗ್ರೆಸ್‌ ಸ್ಪರ್ಧೆಯ ನಡುವೆ ಜೆಡಿಎಸ್‌ ತೊಡರಗಾಲು

Published 8 ಮೇ 2023, 6:47 IST
Last Updated 8 ಮೇ 2023, 6:47 IST
ಅಕ್ಷರ ಗಾತ್ರ

ನವಲಗುಂದ: ರೈತ ಬಂಡಾಯದ ನೆಲೆಯಾಗಿರುವ ನವಲಗುಂದದಲ್ಲಿ ಈಗ ಚುನಾವಣಾ ಕಾವು ಏರಿದೆ. ಹಾಲಿ ಶಾಸಕ ಬಿಜೆಪಿಯ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಕಾಂಗ್ರೆಸ್‌ನ ಎನ್‌.ಎಚ್‌. ಕೋನರಡ್ಡಿ ನಡುವೆ ತೀವ್ರ ಸೆಣಸಾಟ ನಡೆದಿದೆ. ಕೊನೆಯ ಗಳಿಗೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಕೆ.ಎನ್‌. ಗಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯ ಓಟಕ್ಕೆ ತೊಡರಗಾಲು ಬಡಿಯುವ ಸಾಧ್ಯತೆ ಇದೆ.

ಪಂಚಮಸಾಲಿ ಲಿಂಗಾಯತ ಸಮುದಾಯದ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ರಡ್ಡಿ ಲಿಂಗಾಯತ ಸಮುದಾಯದ ಎನ್‌.ಎಚ್‌. ಕೋನರಡ್ಡಿ ನಾಲ್ಕನೇ ಬಾರಿ ಪರಸ್ಪರ ಎದುರಾಳಿಯಾಗಿದ್ದಾರೆ. 2008ರಲ್ಲಿ ಮುನೇನಕೊಪ್ಪ ಗೆದ್ದರೆ ಮರು ಚುನಾವಣೆಯಲ್ಲಿ 2013ರಲ್ಲಿ ಕೋನರಡ್ಡಿ ಗೆಲುವು ಸಾಧಿಸಿದ್ದರು. 2018ರಲ್ಲಿ ಮುನೇನಕೊಪ್ಪ ಗೆದ್ದರು. ಅವರೊಮ್ಮೆ, ಇವರೊಮ್ಮ ಎನ್ನುವಂತೆ ಪೈಪೋಟಿ ನಡೆಯತ್ತಿದೆ. ಈಗ 2013ರಲ್ಲಿ ಯಾರು ಗೆಲ್ಲುತ್ತಾರೆ? ಸರದಿಯಂತೆ ಕೋನರಡ್ಡಿ ಗೆಲ್ಲುತ್ತಾರೆಯೇ? ಅಥವಾ ಈ ಸರದಿಯನ್ನು ತಪ್ಪಿಸಿ, ಸತತ ಎರಡನೇ ಬಾರಿ ಮುನೇನಕೊಪ್ಪ ಗೆಲುತ್ತಾರೆಯೇ ಎನ್ನುವ ಕುತೂಹಲ ಮೂಡಿದೆ.

ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನೇನಕೊಪ್ಪ ಕೈಮಗ್ಗ ಹಾಗೂ ಸಕ್ಕರೆ ಸಚಿವರಾದರು. ಇವರಿಗೆ ರಾಯಚೂರು ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ನೀಡಲಾಗಿತ್ತು. ಇದರಿಂದಾಗಿ ಅವರು ಹೆಚ್ಚಿನ ಸಮಯವನ್ನು ರಾಯಚೂರಲ್ಲಿ ಕಳೆಯುತ್ತಿದ್ದರು. ಸ್ಥಳೀಯವಾಗಿ ಸಿಗುತ್ತಿರಲಿಲ್ಲ ಎಂದು ಕ್ಷೇತ್ರದ ಜನರು ಆಡಿಕೊಳ್ಳುತ್ತಾರೆ. ಪಟ್ಟಣದ ಮುಖ್ಯರಸ್ತೆಗಳು ಚೆನ್ನಾಗಿವೆ. ಆದರೆ, ಗ್ರಾಮೀಣ ಪ್ರದೇಶಗಳ ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರಿನ ಸಮಸ್ಯೆ ಇಗಲೂ ಇದೆ. ಮಹದಾಯಿ ನೀರು ತರುವ ಆಶ್ವಾಸನೆ ಈಡೇರಿಲ್ಲ ಎನ್ನುತ್ತಾರೆ ಸ್ಥಳೀಯರು. ಇವು ಮುನೇನಕೊಪ್ಪ ಗಳಿಸುವ ಮತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇವರಿಗೆ ತೀವ್ರ ಸ್ಪರ್ಧೆಯೊಡ್ಡುತ್ತಿರುವ ಕೋನರಡ್ಡಿ ಅವರು 5ನೇ ಬಾರಿ ಚುನಾವಣಾ ಕಣಕ್ಕಿಳಿದಿದ್ದಾರೆ. ಇದಕ್ಕೂ ಮುಂಚೆ ನಡೆದ ಎಲ್ಲ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಒಂದು ಬಾರಿ ಮಾತ್ರ 2013ರಲ್ಲಿ ಜಯಗಳಿಸಿದ್ದರು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದರು. ಮಹದಾಯಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಜೈಲಿಗೆ ಹೋಗಿದ್ದು, ಪೊಲೀಸರ ಲಾಠಿ ಏಟು ತಿಂದಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ.

ಜೆಡಿಎಸ್‌ ತೊರೆದು, ಸಿದ್ದರಾಮಯ್ಯ ಅವರ ಮೂಲಕ ಅವರು ಕಾಂಗ್ರೆಸ್‌ ಸೇರಿದರು. ಪಕ್ಷದ ಟಿಕೆಟ್‌ ಪಡೆಯುವಲ್ಲಿ ಸಫಲರಾದರು. ಇದು ಇತರ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ. ಇವರಲ್ಲಿ ಕೆಲವರನ್ನು ಪಕ್ಷದ ವರಿಷ್ಠರು ಸಮಾಧಾನ ಪಡಿಸಿದರು. ಮುಖ್ಯವಾಗಿ ಕುರುಬ ಸಮುದಾಯದ ವಿನೋದ ಅಸೂಟಿ ಅವರನ್ನು ಸಮಾಧಾನ ಪಡಿಸಿದೆ. 2018ರಲ್ಲಿ ವಿನೋದ ಅಸೂಟಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. 38,906 ಮತಗಳನ್ನು ಸೆಳೆದು ಪ್ರಬಲ ಪೈಪೋಟಿ ನೀಡಿದ್ದರು. ಅವರಿಗೆ ಯುವಮತದಾರರ ಬೆಂಬಲ ಸಾಕಷ್ಟಿದೆ. ಇದನ್ನು ಅರಿತ ವರಿಷ್ಠರು, ಪಕ್ಷ ಅಧಿಕಾರಕ್ಕೆ ಬಂದರೆ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದಕ್ಕೆ ವಿನೋದ ಅಸೂಟಿ ಅವರು ಕೋನರಡ್ಡಿ ಪರ ಪ್ರಚಾರಕ್ಕಿಳಿದಿದ್ದಾರೆ. ಇದು ಕೋನರಡ್ಡಿ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.

ಕಾಂಗ್ರೆಟ್ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮತ್ತೊಬ್ಬ ಮುಖಂಡ, ಕುರುಬ ಸಮುದಾಯದ ಮಾಜಿ ಶಾಸಕ ಕೆ.ಎನ್‌. ಗಡ್ಡಿ ಅವರು ಕೊನೆಯ ಗಳಿಗೆಯಲ್ಲಿ ಜೆಡಿಎಸ್‌ ಸೇರಿ, ಕಣಕ್ಕಿಳಿದಿದ್ದಾರೆ. ತಮ್ಮ ಸಮುದಾಯದ ಕೆಲಪ್ರಮಾಣದ ಮತಗಳನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.  ಇದು ಕಾಂಗ್ರೆಸ್‌ ಅಭ್ಯರ್ಥಿ ಓಟಕ್ಕೆ ತೊಡರಗಾಲು ಬಡಿಯುವ ಸಾಧ್ಯತೆ ಇದೆ. ಇದೇ ಸಮುದಾಯದ ಶಿವಾನಂದ ಕರಿಗಾರ ಅವರು ಕೂಡ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಸಿಗದಿದ್ದಾಗ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಕೆ.ಎನ್‌. ಗಡ್ಡಿ ಜೆಡಿಎಸ್‌ನಿಂದ ಸ್ಪರ್ಧಿಸಿದ ನಂತರ ತಮ್ಮ ನಾಮಪತ್ರವನ್ನು ವಾಪಸ್‌ ಪಡೆದಿದ್ದಾರೆ. ಇನ್ನೂ ತಮ್ಮ ಬೆಂಬಲ ಯಾರಿಗೆ ಎನ್ನುವುದನ್ನು ಬಹಿರಂಗಪಡಿಸದಿರುವುದು ಕುತೂಹಲ ಮೂಡಿಸಿದೆ.

ಕಣದಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದ್ದರೂ, ಕೆ.ಎನ್‌. ಗಡ್ಡಿ ಸೆಳೆಯುವ ಮತಗಳ ಮೇಲೆ ಫಲಿತಾಂಶ ಅವಲಂಬಿಸಿದೆ.

ಮತದಾರರ ಸಂಖ್ಯೆ

ಪುರುಷರು–103964

ಮಹಿಳೆಯರು –101407‌

ಇತರೆ– 6

ಒಟ್ಟು – 205377

2018ರ ಫಲಿತಾಂಶ

ಬಿಜೆಪಿ – ಶಂಕರಪಾಟೀಲ ಮುನೇನಕೊಪ್ಪ– 65718 – ಶೇ 41.19

ಜೆಡಿಎಸ್‌– ಎನ್‌.ಎಚ್‌.ಕೋನರಡ್ಡಿ– 45197– ಶೇ 28.33

ಕಾಂಗ್ರೆಸ್ – ವಿನೋದ ಅಸೂಟಿ– 38906 – ಶೇ 24.33

ಪಕ್ಷೇತರ– ಶಿವಾನಂದ ಕರಿಗಾರ– 4555– ಶೇ 2.85

2013ರ ಫಲಿತಾಂಶ

ಜೆಡಿಎಸ್‌ – ಎನ್‌.ಎಚ್‌.ಕೋನರಡ್ಡಿ – 44448 – ಶೇ 32.26

ಬಿಜೆಪಿ – ಶಂಕರ ಪಾಟೀಲ ಮುನೇನಕೊಪ್ಪ – 41779 – ಶೇ 30.42

ಕಾಂಗ್ರೆಸ್ – ಕೆ.ಎನ್‌. ಗಡ್ಡಿ– 30780 – ಶೇ 22.41

ಪಕ್ಷೇತರ – ಶಿವಾನಂದ ಕರಿಗಾರ – 8901 – ಶೇ 6.48

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT