ಒಂದೇ ತಿಂಗಳಲ್ಲಿ ಸರ್ಕಾರದ ಫಲಿತಾಂಶ ಹೇಳಲು ಆಗುವುದಿಲ್ಲ: ಶೆಟ್ಟರ್
ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ತಿಂಗಳಷ್ಟೇ ಕಳೆದಿದೆ. ಇಷ್ಟು ಸಣ್ಣ ಅವಧಿಯಲ್ಲಿ ಸರ್ಕಾರ ಆಡಳಿತ ನಡೆಸುವ ವಿಷಯದಲ್ಲಿ ಪಾಸೋ, ಫೇಲೋ ಎಂದು ನಿರ್ಧರಿಸಲು ಆಗುವುದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ವಿನಾಯಕ ಕಾಲೊನಿಯ ದೇವಕಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಿಕೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಶೆಟ್ಟರ್ ಪತ್ನಿ ಶಿಲ್ಪಾ ಹಾಗೂ ಪುತ್ರ ಸಂಕಲ್ಪ ಶೆಟ್ಟರ್ ಇದ್ದರು.
ಓದಿ: 3ನೇ ಸಲವು ಬಿಜೆಪಿ ಮುಡಿಗೆ ಪಾಲಿಕೆ: ಶಾಸಕ ಜಗದೀಶ ಶೆಟ್ಟರ್ ವಿಶ್ವಾಸ
ಮುಂದಿನ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ದಾವಣಗೆರೆಯಲ್ಲಿ ಅಮಿತ್ ಶಾ ನೀಡಿದ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಇನ್ನೂ ದೂರವಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದರು.
ಯಡಿಯೂರಪ್ಪ ಅವರು ಸ್ವಯಂ ಆಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಅಮಿತ್ ಶಾ ಅವರೇ ಹೇಳಿದ್ದಾರೆ. ಇನ್ನು ಈ ವಿಷಯದಲ್ಲಿ ನಾನು ಹೇಳುವುದು ಎನೂ ಇಲ್ಲ ಎಂದರು.
ಬೆಲೆ ಏರಿಕೆ ಪರಿಣಾಮ ಬೀರುವುದಿಲ್ಲ: ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಲಕಾಲಕ್ಕೆ ಎರಿಕೆ ಆಗುವುದು ಸಹಜ ಎಂದರು.
ಬಂಡಾಯಗಾರರು ಗೆಲ್ಲುವುದಿಲ್ಲ: ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಯಾರೂ ಗೆಲ್ಲುವುದಿಲ್ಲ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.