ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆಯಲ್ಲ: ಜಗದೀಶ ಶೆಟ್ಟರ್ 

Last Updated 30 ಡಿಸೆಂಬರ್ 2021, 9:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಕ್ಷದ ಶಾಸಕರು ಹಾಗೂ ಸಚಿವರು ವೈಯಕ್ತಿಕವಾಗಿ ನೀಡುವ ಹೇಳಿಕೆಗಳು ಪಕ್ಷ ವಿರೋಧಿ ಚಟುವಟಿಕೆಯಾಗುವುದಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಸಂಪುಟದಲ್ಲಿರುವ ಹಿರಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹೇಳಿಕೆ ಕುರಿತು, ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗೆ ಮುಕ್ತ ಅವಕಾಶವಿದೆ. ನನ್ನ ಹೇಳಿಕೆಯನ್ನು ಪಕ್ಷದ ಆಂತರಿಕ ಸಭೆಯಲ್ಲಿ ವ್ಯಕ್ತಪಡಿಸುತ್ತೇನೆ ಎಂದರು‌.

ಬಿ.ಎಸ್. ಯಡಿಯೂರಪ್ಪ ಅವರು ವಿದೇಶ ಪ್ರವಾಸ ಕೈಗೊಂಡಿದ್ದರಿಂದ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೇಗನೆ ದೆಹಲಿಗೆ ಹೊರಟರು. ಎಲ್ಲರೂ ಉಪಸ್ಥಿತರಿದ್ದಾಗ ಸಭೆ ನಡೆಸುವುದಾಗಿ ತೀರ್ಮಾನಿಸಿ, ಕಾರ್ಯಕಾರಿ ಸಮಿತಿ ಸಭೆಯನ್ನು ಮುಂದೂಡಲಾಯಿತು. ಆಗ, ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉತ್ತಮ ಸಾಧನೆ:ವಿಧಾನಪರಿಷತ್ ಚುನಾವಣೆಯಲ್ಲಿ ಹದಿನೈದು ಸ್ಥಾನಗಳ ಗುರಿ ಪೈಕಿ ಬಿಜೆಪಿ ಹನ್ನೊಂದರಲ್ಲಿ ಗೆದ್ದಿದೆ. ಹಿಂದೆ ಕೇವಲ ಆರು ಸ್ಥಾನಗಳಷ್ಟೇ ಇದ್ದವು. ಹಾಗಾಗಿ, ಈ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಹಾಗೆ ನೋಡಿದರೆ, ಕಾಂಗ್ರೆಸ್ 12 ಸ್ಥಾನಗಳ ಪೈಕಿ ಒಂದನ್ನು ಕಳೆದುಕೊಂಡಿದೆ ಎಂದರು.

ಈ ಚುನಾವಣೆಗಳು ಸ್ಥಳೀಯ ವಿಷಯಗಳನ್ನು ಆಧರಿಸಿ ಹಾಗೂ ವ್ಯಕ್ತಿಗತವಾಗಿಯೂ ನಡೆಯುತ್ತವೆ. ಹಾಗಾಗಿ, ಪಕ್ಷದ ಶಾಸಕರೇ ಹೆಚ್ಚಾಗಿದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವಾಗುವುದುಂಟು. ಎಲ್ಲಾ ಪಕ್ಷಗಳಲ್ಲೂ ಹೀಗಾಗುವುದು ಸಾಮಾನ್ಯ ಎಂದು ಹೇಳಿದರು.

ನನಗೇನೂ ಗೊತ್ತಿಲ್ಲ:ಧಾರವಾಡ ಜಿಲ್ಲಾ ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ರಾಜೀನಾಮೆ ನೀಡುವುದಾಗಿ ಹೇಳಿರುವ ಕುರಿತು, ನನಗೇನೂ ಗೊತ್ತಿಲ್ಲ. ನನ್ನ ಅಸಮಾಧಾನದ ಕಾರಣಕ್ಕೆ ರಾಜೀನಾಮೆ ಕೊಡುತ್ತಾರೆಂಬುದು ಸುಳ್ಳು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT