ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ!

ಟಿಕೆಟ್‌ ಇಲ್ಲ, ನಿಗಮ ಮಂಡಳಿಗಳ ಸ್ಥಾನವೂ ಇಲ್ಲ: ಕಾರ್ಯಕರ್ತರ ಅಳಲು
Published 30 ಆಗಸ್ಟ್ 2023, 5:58 IST
Last Updated 30 ಆಗಸ್ಟ್ 2023, 5:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಬಿಜೆಪಿಯ ನಾಯಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪಕ್ಷದ ಹಿರಿಯ ಮುಖಂಡರ ಬಗ್ಗೆ ಸೋಮವಾರ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು, ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಮೂಲಕ ‘ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ’ ಎಂಬ ಸಂದೇಶ ಪಕ್ಷದ ಹೈಕಮಾಂಡ್‌ಗೆ ನೀಡಿದ್ದಾರೆ. 

‘ಐದು ತಿಂಗಳಲ್ಲಿ ಅನ್ಯಾಯ ಸರಿಪಡಿಸದಿದ್ದರೆ ಜನವರಿ ತಿಂಗಳ ಅಂತ್ಯದ ವೇಳೆಗೆ ನಿರ್ಣಯ ಕೈಗೊಳ್ಳುವೆ’ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಳ್ಳುತ್ತಿರುವ ಈ ಸಮಯದಲ್ಲಿ ಮುನೇನಕೊಪ್ಪ ನೀಡಿದ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

‘ಧಾರವಾಡ ಬಿಜೆಪಿ ಕೆಲವೇ ಜನರ ಮುಷ್ಟಿಯಲ್ಲಿದೆ. ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು  ಮಾಡಲಾಗುತ್ತಿದೆ. ಬೇರೆ ಪಕ್ಷಗಳಿಂದ ಬಂದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗುತ್ತಿದೆ. ಪಕ್ಷ ಸಂಘಟನೆಗೆ ಹಿರಿಯ ನಾಯಕರು ಒತ್ತು ನೀಡುತ್ತಿಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಮಾತ್ರ ಮಹತ್ವ ನೀಡುತ್ತಿದ್ದಾರೆ. ಎರಡನೇ ಹಂತದ ನಾಯಕರನ್ನು ಬೆಳೆಸುತ್ತಿಲ್ಲ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಿಗಮ ಮಂಡಳಿ ಸೇರಿ ಯಾವುದೇ ಸ್ಥಾನಮಾನ ನೀಡುತ್ತಿಲ್ಲ’ ಎಂದು ಪಕ್ಷದ ಕೆಲವು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.  

‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಶಿಗ್ಗಾವಿ ಕ್ಷೇತ್ರದ ಮುಖಂಡರಿಗೆ ಮಾತ್ರ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇನ್ನುಳಿದ ಏಳು ಕ್ಷೇತ್ರಗಳ  ಕಾರ್ಯಕರ್ತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ’ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಟಾರ್ಗೆಟ್‌: ಒಂದೆಡೆ ಪಕ್ಷದಲ್ಲಿ ಲಿಂಗಾಯತ ನಾಯಕತ್ವವನ್ನು ಮೂಲೆಗುಂಪು ಮಾಡಲಾಗುತ್ತಿದೆ ಎನ್ನುವ ಅಸಮಾಧಾನ ಕೇಳಿಬರುತ್ತಿದೆ. ಮತ್ತೊಂದೆಡೆ ಪಕ್ಷದಲ್ಲಿರುವ ಜಗದೀಶ ಶೆಟ್ಟರ್‌ ಅವರ ಸಮೀಪವರ್ತಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಮಾತುಗಳು  ಕೂಡ ಕೇಳಿಬರುತ್ತಿವೆ. 

ಶೆಟ್ಟರ್‌ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಪ್ರದೀಪ್‌ ಶೆಟ್ಟರ್‌ ಅವರನ್ನು ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಅದೇ ರೀತಿ, ಶೆಟ್ಟರ್‌ ಅವರ ಆಪ್ತ ಎಂದು ಗುರುತಿಸಿಕೊಂಡಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಕೂಡ ಕಡೆಗಣಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಿಂದ ಹೊರಗಿಡಬೇಕೆನ್ನುವ ಉದ್ದೇಶದಿಂದಲೇ ಹಿಂದಿನ ಸರ್ಕಾರದಲ್ಲಿ ಅವರನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಪಕ್ಷ ತೊರೆದ ಮುಖಂಡರು: ಪಕ್ಷದ ಜಿಲ್ಲಾ ನಾಯಕತ್ವ ತಮ್ಮನ್ನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿ ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವು ನಾಯಕರು ಪಕ್ಷ  ತೊರೆದಿದ್ದಾರೆ. ಜಗದೀಶ ಶೆಟ್ಟರ್‌, ಎಸ್‌.ಐ. ಚಿಕ್ಕನಗೌಡ್ರ, ಶಿರಿಯಣ್ಣನವರ, ಮೋಹನ ಲಿಂಬಿಕಾಯಿ ಪ್ರಮುಖರಾಗಿದ್ದಾರೆ. 

ನಾಯಕತ್ವದ ಕೊರತೆ: ‘ಈದ್ಗಾ ಮೈದಾನ ಪ್ರಕರಣದಿಂದ ಜಿಲ್ಲೆಯಲ್ಲಿ ಬಿಜೆಪಿ ಭದ್ರ ನೆಲೆ ಕಂಡುಕೊಂಡಿತ್ತು. ಆಗ ಹೋರಾಟದ ಮುಂಚೂಣಿಯಲ್ಲಿದ್ದ  ಅನಂತಕುಮಾರ್‌, ಜಗದೀಶ ಶೆಟ್ಟರ್‌, ಪ್ರಲ್ಹಾದ ಜೋಶಿ ಅವರು ಪಕ್ಷ ಕಟ್ಟಿ ಬೆಳೆಸಿದರು. ಅನಂತಕುಮಾರ್‌ ಅವರು ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಎದುರಾದರೆ ತಕ್ಷಣ ಪರಿಹರಿಸುತ್ತಿದ್ದರು. ಎಲ್ಲ ಜಾತಿಯ ನಾಯಕರನ್ನು, ಮುಖಂಡರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು. ಈಗ ಅಂತಹ ನಾಯಕತ್ವ ಇಲ್ಲ. ಪಕ್ಷದಲ್ಲಿ ನಾಯಕತ್ವದ ಕೊರತೆ ಕಾಡುತ್ತಿದೆ’ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ಅನಂತಕುಮಾರ್‌ ಇದ್ದ ಬಿಜೆಪಿ ಈಗಿಲ್ಲ’

ಹುಬ್ಬಳ್ಳಿ: ‘ಅನಂತಕುಮಾರ್‌ ಅವರಿದ್ದಾಗ ಎಲ್ಲ ಮುಖಂಡರನ್ನು ನಾಯಕರನ್ನು ಒಗ್ಗಟ್ಟಾಗಿ ಒಯ್ಯುತ್ತಿದ್ದರು. ಪಕ್ಷಕ್ಕಷ್ಟೇ ಅಲ್ಲ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿಯೂ ಕೆಲಸ ಮಾಡುತ್ತಿದ್ದರು. ಅಂತಹ ವಾತಾವರಣ ಈಗ ಬಿಜೆಪಿಯಲ್ಲಿ ಉಳಿದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ  ಜಗದೀಶ ಶೆಟ್ಟರ್‌ ಹೇಳಿದರು.

‘ಧಾರವಾಡ ಜಿಲ್ಲೆಯಲ್ಲಿ ಅಷ್ಟೆ ಅಲ್ಲ ಇಡೀ ರಾಜ್ಯದಲ್ಲಿಯೇ ಅಂತಹ ಸ್ಥಿತಿ ಇದೆ. ನಾಯಕರು ಮತ್ತು  ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ಮುಖಂಡರನ್ನು ಕಾರ್ಯಕರ್ತರನ್ನು ನಿರ್ಲಕ್ಷಿಸಿದಷ್ಟು ಆ ಪಕ್ಷಕ್ಕೆ ಹಾನಿಯಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT