ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ನೆರೆ ಪರಿಹಾರ ಕೊಟ್ಟಿಲ್ಲ, ಕೊಡುವುದೂ ಇಲ್ಲ: ಸಿದ್ದರಾಮಯ್ಯ

Last Updated 29 ಜುಲೈ 2021, 14:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷಗಳ ಹಿಂದಿನ ನೆರೆ ಹಾಗೂ ಪ್ರವಾಹದಿಂದಾಗಿ ಜನರಿಗೆ ಆದ ಸಂಕಷ್ಟಕ್ಕೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಈಗ ಆಗಿರುವ ಹಾನಿಗೂ ಪರಿಹಾರ ನೀಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದಲ್ಲಿ ನಡೆಯಲಿರುವ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್‌ ಪ್ರಮುಖರ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

‘ಮಳೆ ಹಾಗೂ ನೆರೆಯಿಂದಾಗಿ ಲಕ್ಷಾಂತರ ಜನ ಮನೆ ಕಳೆದುಕೊಂಡಿದ್ದಾರೆ. ಆಸ್ತಿ ಪಾಸ್ತಿಗೆ ಹಾನಿಯಾಗಿದೆ. ಹಾನಿಯ ಪ್ರಮಾಣವನ್ನು ಕಲೆಹಾಕಲಾಗುತ್ತಿದ್ದು, ಬಳಿಕ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಲಾಗುವುದು’ ಎಂದು ತಿಳಿಸಿದರು.

‘ನೆರೆ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಬಂದು ವೀಕ್ಷಿಸಿ ಪರಿಹಾರ ಘೋಷಣೆ ಮಾಡಬೇಕಿತ್ತು. ಇದಕ್ಕಾಗಿ ರಾಜ್ಯದ ಬಿಜೆಪಿ ಸಂಸದರು ಒತ್ತಡ ಹೇರಬೇಕಿತ್ತು. ಮೋದಿ ಮುಂದೆ ಸಂಸದರು ಒಂದೂ ದಿನ ಬಾಯ್ಬಿಟ್ಟಿಲ್ಲ. ಜನರಿಗೆ ಸಂಕಷ್ಟ ತಪ್ಪುತ್ತಿಲ್ಲ’ ಎಂದು ಹರಿಹಾಯ್ದರು.

ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿ ಸಂತ್ರಸ್ತ ಜನರನ್ನು ಮಾತನಾಡಿಸಿದ್ದೇನೆ. ಆಗಸ್ಟ್‌ 1ರಂದು ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತೇನೆ. ಪರಿಹಾರ ನೀಡುವಲ್ಲಿ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ಜನರ ನೋವು ಆಲಿಸುವಲ್ಲಿ ವಿಫಲವಾಗಿದೆ. ಹೊಸ ಮುಖ್ಯಮಂತ್ರಿ ಏನು ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ ‘ಬೆಳಗಾವಿ ವಿಭಾಗದ ನಾಯಕರ ಸಭೆಯಲ್ಲಿ ಹಿಂದಿನ ಚುನಾವಣೆಗಳಲ್ಲಿ ಗೆದ್ದವರು ಹಾಗೂ ಸೋತವರು ಪಾಲ್ಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT