ಶನಿವಾರ, ಏಪ್ರಿಲ್ 1, 2023
23 °C

ಕೃಷ್ಣ ಜೋಶಿಗೆ ಭಾವಪೂರ್ಣ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಅಗಲಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿದ್ದ ಕೃಷ್ಣ ಜೋಶಿ ಅವರಿಗೆ ನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳ ಅಶೃತರ್ಪಣದೊಂದಿಗೆ ಬುಧವಾರ ಭಾವಪೂರ್ಣ ವಿದಾಯ ಹೇಳಲಾಯಿತು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಬುಧವಾರ ಬೆಳಿಗ್ಗೆ ಅವರ ಪಾರ್ತೀವ ಶರೀರದ ದರ್ಶನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೂ ಮೊದಲು ಮಾಳಮಡ್ಡಿಯಲ್ಲಿರುವ ಅವರ ನಿವಾಸದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರು ಪಾರ್ತೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಜೋಶಿ ಅವರು ಹೆಚ್ಚಾಗಿ ಪ್ರೀತಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ತೂಪದ ಬಳಿಯೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಸಂಘದ ಆವರಣದಲ್ಲಿ ಅವರ ಅಪಾರ ಅಭಿಮಾನಿಗಳು, ಶಿಷ್ಯ ಬಳಗ ಮತ್ತು ಸಹೋದ್ಯೋಗಿಗಳು ಪಾರ್ತೀವ ಶರೀರದ ಅಂತಿಮ ದರ್ಶನ ಪಡೆದರು. 

ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ‘ಎರಡು ಅವಧಿಗೆ ಕೋಶಾಧ್ಯಕ್ಷರಾಗಿದ್ದ ಹಾಗೂ ಸುದೀರ್ಘ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ ಜೋಶಿ ಅವರು ಸಂಘದ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಸಂಘದ ನೇತೃತ್ವದಲ್ಲಿ ನಡೆದ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಕನ್ನಡ ಸೇವೆಯಲ್ಲಿ ಪಾಟೀಲ ಪುಟ್ಟಪ್ಪ ಅವರೊಂದಿಗೆ ಸದಾ ಟೊಂಕಕಟ್ಟಿ ನಿಂತವರಲ್ಲಿ ಅವರು ಅಗ್ರಗಣ್ಯರು’ ಎಂದರು.

‘ಸಂಘದ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ, ಕೃಷ್ಣ ಜೋಶಿ ಅವರ ಪಾತ್ರ ಹಿರಿದಾಗಿರುತ್ತಿತ್ತು. ಶಿಕ್ಷಕರಾಗಿದ್ದ ಅವರು ಮಾಧ್ಯಮಿಕ ಶಾಲಾ ಶಿಕ್ಷಕರು ಮತ್ತು ನೌಕರರ ಸಂಘಟನೆಯಲ್ಲೂ ಬಹುಮುಖ್ಯ ಭೂಮಿಕೆ ನಿರ್ವಹಿಸಿದ್ದರು. ದೇಶ ಹಾಗೂ ಸೈನಿಕ ಪ್ರೇಮಿಯಾಗಿದ್ದ ಅವರು ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯನ್ನು ಹುಟ್ಟುಹಾಕಿ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತಾವು ಸೈನಿಕರಲ್ಲದಿದ್ದರೂ 1970ರಿಂದ ಇಲ್ಲಿಯವರೆಗೆ ಸೈನಿಕರ, ಸೈನಿಕರ ಪರಿವಾರದವರ ಮತ್ತು ಮೃತ ಸೈನಿಕರ ಕುಟುಂಬಸ್ಥರ ಕಲ್ಯಾಣಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವಿಶೇಷ ಸೇವೆ ಮಾಡಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸ್ಮಾರಣಾರ್ಥ ದೇಶದಲ್ಲೇ ಮೊಟ್ಟಮೊದಲ ಕಾರ್ಗಿಲ್ ಸ್ತೂಪ ನಿರ್ಮಾಣದಲ್ಲೂ ಮುಖ್ಯಭೂಮಿಕೆ ವಹಿಸಿದ್ದರು’ ಎಂದು ನೆನೆದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ, ಪುರಸ್ಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ, ಧಾರವಾಡ ಪಂಚಾಂಗ ಸಮಿತಿಯ ಧರ್ಮದರ್ಶಿಯಾಗಿ, ಅಂಚೆ ಇಲಾಖೆಯ ಸಲಹಾ ಸಮಿತಿ ಸದಸ್ಯರಾಗಿ, ಸ್ವಾಮಿ ವಿವೇಕಾನಂದ ಪುತ್ಥಳಿ ಪ್ರತಿಷ್ಠಾಪನಾ ಹೋರಾಟ ಸಮಿತಿ ಸದಸ್ಯರಾಗಿ ಹೀಗೆ ಸಾಕಷ್ಟು ಸಂಘ, ಸಂಸ್ಥೆಗಳ ನಾಯಕತ್ವದ ಮೂಲಕ ಚಿರಸ್ಮರಣೀಯ ಸಮಾಜ ಸೇವೆ ಮಾಡಿದವರು. ಇದರೊಂದಿಗೆ ತಮ್ಮ ಕೈಬರಹದಿಂದ ಸುಮಾರು 80 ಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆದ ವಿಶೇಷ ದಾಖಲೆ ಬರೆದವರು ಕೃ‌ಷ್ಣ ಜೋಶಿ’ ಎಂದು ಉಡಿಕೇರಿ ಹೇಳಿದರು.

ಪ್ರೊ. ಐ.ಜಿ.ಸನದಿ, ಡಾ. ಮಹೇಶ ಜೋಶಿ, ಡಾ. ಲಿಂಗರಾಜ ಅಂಗಡಿ, ನಿಂಗಣ್ಣ ಕುಂಟಿ, ಮಂಜುಳಾ ಯಲಿಗಾರ, ಶಂಕರ ಕುಂಬಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ನಂತರ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು