ಬುಧವಾರ, ಜನವರಿ 26, 2022
25 °C
ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ನೂರಾರು ಕೃತಿಗಳನ್ನು ಪ್ರಕಟಿಸಿರುವ ಸಾಹಿತ್ಯ ಪ್ರಕಾಶನ ಸಂಸ್ಥೆ

ನಾರಾಯಣಾಚಾರ್ಯರ ಪುಸ್ತಕಗಳಿಗೆ ಸದಾ ಕಾಲ ಬೇಡಿಕೆ: ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ನಾಡಿನ ಹೆಸರಾಂತ ಲೇಖಕ ಡಾ.ಎಸ್.ಎಲ್.ಭೈರಪ್ಪ ಅವರ ಪುಸ್ತಕಗಳನ್ನು ಹೊರತುಪಡಿಸಿದರೆ ನಮ್ಮ ಬಳಿ ಯಾವಾಗಲೂ ಭಾರೀ ಬೇಡಿಕೆ ಇರುವುದು ಪ್ರೊ.ಕೆ.ಎಸ್.ನಾರಾಯಣಾಚಾರ್ಯರ ಪುಸ್ತಕಗಳಿಗೆ’ ಎಂದು ಹೇಳಿದವರು ಹುಬ್ಬಳ್ಳಿ ಸಾಹಿತ್ಯ  ಪ್ರಕಾಶನದ ಮುಖ್ಯಸ್ಥ, ಪ್ರಕಾಶಕ ಎಂ.ಎ.ಸುಬ್ರಹ್ಮಣ್ಯ ಅವರು.

ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾದ ವಿದ್ವಾಂಸ, ಪ್ರವಚನಕಾರ, ಲೇಖಕ ಪ್ರೊ. ಕೆ.ಎಸ್‌.ನಾರಾಯಣಾಚಾರ್ಯ(88) ಕುರಿತಂತೆ ತಮ್ಮ ನೆನಪುಗಳನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ಸರಿಸುಮಾರು 25 ವರ್ಷಗಳಲ್ಲಿ ಆಚಾರ್ಯರ‌ 100ಕ್ಕೂ ಹೆಚ್ಚು ಪುಸ್ತಕಗಳನ್ನು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ಹೀಗಾಗಿ ಅವರೊಂದಿಗಿನ ಒಡನಾಟದ ಕ್ಷಣಗಳು ನೂರಾರು.

ಇದನ್ನೂ ಓದಿ: ವಿದ್ವಾಂಸ ಕೆ.ಎಸ್. ನಾರಾಯಣಾಚಾರ್ಯ ಇನ್ನಿಲ್ಲ

1998ರಲ್ಲಿ ಅವರ ‘ಆಚಾರ್ಯ ಚಾಣಕ್ಯ’ ಪುಸ್ತಕ ಪ್ರಕಟಣೆಯಿಂದ ಆರಂಭ. ತದನಂತರ, ಆಚಾರ್ಯರ ರಾಮಾಯಣ, ಮಹಾಭಾರತ, ಭಾಗವತ ಆಧಾರಿತ ಕಥಾನಕಗಳು, ಭಗವದ್ಗೀತೆ ಪ್ರವಚನ, ಧಾರ್ಮಿಕ/ವೈಚಾರಿಕ ಲೇಖನಗಳ ಸಂಪುಟ, ಪತ್ರಿಕಾ ಅಂಕಣಗಳು, ವಿಮರ್ಶಾತ್ಮಕ ಬರಹ, ರಾಷ್ಟ್ರೀಯ ಮತ್ತು ರಾಜಕೀಯ ವಿಶ್ಲೇಷಣೆಗಳು ಸೇರಿದಂತೆ ನೂರಾರು ಬಗೆಯ ಪುಸ್ತಕಗಳನ್ನು ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ನಾರಾಯಣಾಚಾರ್ಯರು ಅಲ್ಲಿ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು. ನಂತರ ಸುಮಾರು 10 ವರ್ಷ ಕಲ್ಯಾಣನಗರದಲ್ಲೇ ನೆಲೆಸಿದ್ದರು. ಬಳಿಕ ಬೆಂಗಳೂರಿಗೆ ತೆರಳಿದರು.

ಕವಿ ದ.ರಾ.ಬೇಂದ್ರೆ ಅವರೇ ನಾರಾಯಣಾಚಾರ್ಯರ ಪ್ರವಚನಕ್ಕೆ ಮಾರು ಹೋಗಿದ್ದರಂತೆ. ಅವರೇ ಆಚಾರ್ಯರಿಗೆ ಸಲಹೆ ನೀಡಿ, ಕೇವಲ ಪ್ರವಚನ ಮಾಡುವುದಲ್ಲ, ಅದನ್ನು ಪುಸ್ತಕ ರೂಪದಲ್ಲಿ ಹೊರತರುವಂತೆ ಸಲಹೆ ನೀಡಿದ್ದರಂತೆ. ಆ ಬಳಿಕ ಹಲವು ಪ್ರಕಾಶಕರ ಬಳಿ ಆಚಾರ್ಯರು ಪುಸ್ತಕ ಪ್ರಕಟಿಸಲು ಆರಂಭಿಸಿದರು.

‘ಧಾರವಾಡದಲ್ಲಿರುತ್ತಿದ್ದ ಸಾಹಿತಿ ‘ಎನ್ಕೆ’ಕುಲಕರ್ಣಿ ಅವರ ಮೂಲಕ ಆಚಾರ್ಯರು ಪರಿಚಯವಾದರು. ‘ಆಚಾರ್ಯರ ಪುಸ್ತಕ ನಾನು ಪ್ರಕಟಿಸುತ್ತೇನೆ, ಅವರನ್ನು ಪರಿಚಯಿಸಿ’ ಎಂದು ಕೇಳಿಕೊಂಡಿದ್ದೆ. ಬಳಿಕ ಅವರಿಗೆ ನನ್ನ ಕೆಲಸದ ವಿಧಾನ ಹಿಡಿಸಿತು. ಅವರ ಎಲ್ಲ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡಿದರು’ ಎಂದರು.

‘ದೊಡ್ಡ ಗ್ರಂಥಗಳನ್ನು ಕೊಡಬೇಡಿ, ಸಣ್ಣವು ಕೊಡಿ ಎನ್ನುತ್ತಿದ್ದೆ ಮೊದಲು. ಆದರೆ ಅವರೇ ಹುರಿದುಂಬಿಸಿದ್ದರಿಂದ ಬಳಿಕ 3,000 ಪುಟಗಳ ‘ವೇದ ಸಂಸ್ಕೃತಿ ಪರಿಚಯ’ದಂತಹ ಬೃಹತ್ ಸಂಪುಟಗಳನ್ನೇ ಹೊರತಂದೆ. ಮಹಾಭಾರತ, ರಾಮಾಯಣದ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ಕೃಷ್ಣಾವತಾರದ ಕೊನೆಯ ದಿನಗಳು–ಇತ್ಯಾದಿ ಅವರ ಹತ್ತಾರು ಪುಸ್ತಕಗಳನ್ನು ಈಗಲೂ ಜನರು ಕೇಳಿ ಖರೀದಿಸುತ್ತಾರೆ’ ಎಂದರು.

‘ಪ್ರತಿದಿನ ಅವರೊಂದಿಗೆ ಫೋನ್ ಸಂಪರ್ಕ ಇರುತ್ತಿತ್ತು. ಕೆಲವೊಮ್ಮೆ ದಿನಕ್ಕೆ 3–4 ಸಲ. ನಾರಾಯಣಾಚಾರ್ಯರೇ ಖುದ್ದಾಗಿ, ನಾವು ಪ್ರಕಟಿಸುತ್ತಿದ್ದ ತಮ್ಮ ಪುಸ್ತಕಗಳನ್ನು ತಂದು ನಮ್ಮ ಅಂಗಡಿಯಲ್ಲಿ ವಿತರಿಸುತ್ತಿದ್ದರು. ಲೇಖಕ - ಮಾರಾಟಗಾರರ ನಡುವಿರುವಂತಹ ಉತ್ತಮ ಸಂಬಂಧ ನಮ್ಮದು. ಈಗ, 25 ವರ್ಷಗಳ ಹಿಂದೆ, ಎನ್ಕೆಯವರಿಂದ ಬೆಸುಗೆಯಾಗಿ ಬೆಳೆದ ನನ್ನ ಅವರ ಸಂಬಂಧ ಯಾವ ಬಾಂಧವ್ಯವನ್ನೂ ಮೀರಿಸಿದಂತಿದ್ದುದು ನಿಜ’ ಎನ್ನುತ್ತಾರೆ.

‘ಬದುಕಿನ ಮುಸ್ಸಂಜೆಯಲ್ಲಿಯೂ ಅವರ ಓದಿನ ಹಸಿವು ನಿಂತಿರಲಿಲ್ಲ. ಎರಡು ಪುಸ್ತಕಗಳನ್ನು ಕಳುಹಿಸುವಂತೆ ಮೊನ್ನೆಯಷ್ಟೇ ನನಗೆ ತಿಳಿಸಿದ್ದರು. ವೇದ, ಉಪನಿಷತ್‌, ನಮ್ಮ ಪುರಾಣಗಳ ಬಗ್ಗೆ ಅವರಿಗಿದ್ದ ಜ್ಞಾನ ಬೆರಗು ಮೂಡಿಸುವಂಥದ್ದು. ಅವರೊಂದು ಜ್ಞಾನ ನಿಧಿ’ ಎಂದು ನೆನಪಿಸಿಕೊಂಡರು.

‘ಭರತ ವಂಶಾವಳಿ’ ಕೃತಿ ಬರೆಯುತ್ತಿದ್ದರು...

‘ಭರತ ವಂಶಾವಳಿ’–ಭರತನಿಂದ ಭಾರತ ಹೇಗಾಯ್ತು ಎನ್ನುವ ವಿಷಯದ ಮೇಲಿನ ಕಾದಂಬರಿ ಯನ್ನು ನಾರಾಯಣಾಚಾರ್ಯರು ಈಗ ಬರೆಯುತ್ತಿದ್ದರು. ಅವರ ಕೊನೆಯ ಕೃತಿ. ಅದು 60 ಅಧ್ಯಾಯಗಳ ಪುಸ್ತಕ. ಈವರೆಗೆ 17 ಅಧ್ಯಾಯಗಳನ್ನು ಬರೆದಿದ್ದರು. ಇತ್ತೀಚೆಗೆ ಮಗಳ ಮದುವೆಗಾಗಿ ಅವರನ್ನು ಅಹ್ವಾನಿಸಲು ಬೆಂಗಳೂರಿನ ಅವರ ಮನೆಗೆ ಹೋದಾಗ ತಾವು ಬರೆದಿದ್ದನ್ನು ಓದಲೇನು ಅಂದಿದ್ದರು...’

‘ಈಗ ಬೇಡ. ಜನವರಿ,ಫೆಬ್ರುವರಿಯಲ್ಲಿ ಅದಕ್ಕಾಗಿಯೇ ಮತ್ತೆ ಬರುತ್ತೇನೆ ಅಂದಿದ್ದೆ...ಅದೇ ಕೊನೆಯ ಭೇಟಿ’ ಎಂದು ಎಂ.ಎ.ಸುಬ್ರಹ್ಮಣ್ಯ ನೆನಪಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು