ಬುಧವಾರ, ಡಿಸೆಂಬರ್ 7, 2022
23 °C
ಕೇಂದ್ರ ಕಾರಾಗೃಹದಲ್ಲಿ ಸಭೆ; ಕಮಿಷನರ್‌ ಲಾಭೂರಾಮ್‌ ಸೂಚನೆ

ಹುಬ್ಬಳ್ಳಿ: ಇಲ್ಲ ಶಸ್ತ್ರಾಸ್ತ್ರ, ಹ್ಯಾಂಡ್ ಕಪ್ ಒಂದೇ ಅಸ್ತ್ರ!

ನಾಗರಾಜ್‌ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೈದಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಅವಳಿನಗರದ ಪೊಲೀಸ್ ಇಲಾಖೆ ಬಳಿ ಇರುವ ಭದ್ರತಾ ಉಪಕರಣವೆಂದರೆ ಕೇವಲ ಹ್ಯಾಂಡ್ ಕಪ್ (ಕೈ ಕೋಳ) ಮಾತ್ರ. ಅಲ್ಲದೆ, ಕೈದಿಗಳಿಗೆ ಮೊಬೈಲ್‌ ಫೋನ್‌ ಬಳಸಲು, ಹೊರಗಡೆಯಿಂದ ತಂದ ಆಹಾರ ಸೇವಿಸಲು ಅವಕಾಶ ನೀಡಬಾರದು ಎನ್ನುವ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ.

ಪೊಲೀಸ್ ಸಿಬ್ಬಂದಿ, ಕೈದಿಗಳನ್ನು ಕಾರಾಗೃಹದಿಂದ ಕೋರ್ಟ್‌ಗೆ ಆಟೊದಲ್ಲಿ ಇಲ್ಲವೇ ನಡೆಸಿಕೊಂಡು ಕರೆದೊಯ್ಯುತ್ತಾರೆ. ಒಮ್ಮೊಮ್ಮೆ ಕೈದಿಯನ್ನು ಬೈಕ್‌ ಮೇಲೆ ಚಾಲಕ ಮತ್ತು ಸವಾರನ ನಡುವೆ ಕೂರಿಸಿಕೊಂಡು ಕೋರ್ಟ್‌ಗೆ ತೆರಳುತ್ತಾರೆ. ಇಬ್ಬರು, ಮೂವರು ಕೈದಿಗಳಿದ್ದರೆ ಆಟೊ, ಬಸ್ ಮೊರೆ ಹೋಗುತ್ತಾರೆ. ಆಗ, ಆ ಕೈದಿಗಳ ಕೈಗಳಿಗೂ ಜೋಡಿ ಕೈಕೋಳ ಹಾಕಿರುತ್ತಾರೆ.

ಧಾರವಾಡದ ಕೇಂದ್ರ ಕಾರಾಗೃಹದಿಂದ ಹುಬ್ಬಳ್ಳಿ ಕೋರ್ಟ್‌ಗೆ ಕರೆತರುವಾಗ, ಹೊಸೂರಿನ ಬಿ.ಆರ್.ಟಿ.ಎಸ್. ಬಸ್ ತಂಗುದಾಣದಲ್ಲಿ ವಾರದ ಐದೂ ದಿನವೂ ಈ ದೃಶ್ಯ ಕಾಣಬಹುದು. ಅಲ್ಲಿಂದ ಕೋರ್ಟ್‌ವರೆಗೆ ನಡೆದುಕೊಂಡೇ ಹೋಗುತ್ತಾರೆ. ಕುಖ್ಯಾತ ರೌಡಿ ಅಥವಾ ಗಂಭೀರ ಆರೋಪ ಪ್ರಕರಣದ ಕೈದಿಗಳನ್ನಷ್ಟೇ ಶಸ್ತ್ರಾಸ್ತ್ರ ಸಮೇತ ಬಿಗಿ ಭದ್ರತೆಯಲ್ಲಿ ಕೋರ್ಟ್‌ಗೆ ಕರೆದೊಯ್ಯಲಾಗುತ್ತದೆ. ಉಳಿದಂತೆ ಯಾವ ಕೈದಿಗಳಿಗೂ ಭದ್ರತೆಯೂ ಇಲ್ಲ, ಸಿಬ್ಬಂದಿಯಲ್ಲಿ ಶಸ್ತ್ರಾಸ್ತ್ರವೂ ಇರುವುದಿಲ್ಲ!

ವಿಚಾರಣೆಗೆ ಕರೆದೊಯ್ಯುವಾಗ ಕಾರಾಗೃಹದ ಅಧೀಕ್ಷಕರು ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಭದ್ರತೆಗೆ ಅಗತ್ಯ ಸಿಬ್ಬಂದಿ ಪೂರೈಸಲು ವಿನಂತಿಸಿಕೊಳ್ಳುತ್ತಾರೆ. ಪೊಲೀಸ್ ಇಲಾಖೆ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ಗೆ ಮಾಹಿತಿ ರವಾನಿಸಿ, ಶಸ್ತ್ರಸಜ್ಜಿತ ಸಿಬ್ಬಂದಿ ಜತೆ ವಾಹನ ವ್ಯವಸ್ಥೆಗೆ ಸೂಚಿಸುತ್ತದೆ. ಆದರೆ, ಅವಳಿನಗರದಲ್ಲಿ ಅದ್ಯಾವುದೂ ಪಾಲನೆಯಾಗುತ್ತಿಲ್ಲ. ವೈದ್ಯಕೀಯ ಪರೀಕ್ಷೆಗೆ ಕಿಮ್ಸ್‌ಗೆ ತೆರಳಿದಾಗ, ಕೈದಿಯ ಜೊತೆ ಪೊಲೀಸ್ ಸಿಬ್ಬಂದಿ ಸಹ ಹೊರ ರೋಗಿ ವಿಭಾಗದಲ್ಲಿ ಚೀಟಿ ಮಾಡಲು ಸರತಿಯಲ್ಲಿ ನಿಲ್ಲುತ್ತಾರೆ.

‘ಮೊದಲು ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ವಾಹನದಲ್ಲಿ ಕೈದಿಯನ್ನು ಕೋರ್ಟ್‌ಗೆ ಕರೆದೊಯ್ಯುತ್ತಿದ್ದರು. ಇತ್ತೀಚೆಗೆ ಕೆಲವು ಪ್ರಕರಣಕ್ಕೆ ಸಂಬಂಧಿಸಿ ಆಯಾ ಠಾಣೆಯ ಸಿಬ್ಬಂದಿಯೇ ಕರೆದೊಯ್ಯುತ್ತಿದ್ದಾರೆ. ಇಲಾಖೆಯಿಂದ ವಾಹನದ ವ್ಯವಸ್ಥೆಯಿಲ್ಲದ ಕಾರಣ ಆಟೊ, ಬೈಕ್‌ ಮೇಲೆ ಕರೆದೊಯ್ಯುತ್ತೇವೆ. ಆ ವೇಳೆ ಶತ್ರುಗಳು ಕೈದಿಗಳ ಮೇಲೆ ಆಕ್ರಮಣ ಮಾಡುವ, ಕೈದಿಗಳೇ ನಮ್ಮ ಮೇಲೆ ಆಕ್ರಮಣ ಮಾಡುವ ಅಥವಾ ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ನಿಯೋಜನೆಗೊಂಡ ಸಿಬ್ಬಂದಿ ಅಗತ್ಯ ಶಸ್ತ್ರಾಸ್ತ್ರಗಳನ್ನು ಹೊಂದಿರಲೇಬೇಕು. ನಾವು ನಾಗರಿಕ ಪೊಲೀಸ್‌ ಸಿಬ್ಬಂದಿ ಆಗಿರುವುದರಿಂದ ಕೈಕೋಳ ಮತ್ತು ಲಾಠಿ ಹೊರತು ಯಾವ ಆಯುಧವನ್ನೂ ಬಳಸುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಸಿಬ್ಬಂದಿ ಹೇಳಿದರು.

‘ವಾಹನದ ವ್ಯವಸ್ಥೆಯಿದೆ; ಪರಿಶೀಲಿಸಲಾಗುವುದು’

‘ಯಾವುದೇ ಕೈದಿಯಿರಲಿ, ಅವನಿಗೆ ಭದ್ರತೆ ನೀಡುವುದು ಮುಖ್ಯ. ಕೋರ್ಟ್‌ನಲ್ಲಿ ಅಪರಾಧಿ ಎಂದು ಸಾಬೀತಾಗುವವರೆಗೂ ಅವನು ಆರೋಪಿಯಷ್ಟೇ ಆಗಿರುತ್ತಾನೆ. ಸಿಬ್ಬಂದಿಯ ಭದ್ರತೆಯೊಂದಿಗೆ ವಾಹನದಲ್ಲಿ ಕೋರ್ಟ್‌ಗೆ ಹಾಜರು ಪಡೆಸುತ್ತೇವೆ. ಬೈಕ್‌ಗೆ ಹ್ಯಾಂಡ್ ಕಪ್ ಹಾಕುವುದು, ನಡೆದುಕೊಂಡು ಕರೆದೊಯ್ಯುವುದು ಕಾನೂನು ಬಾಹಿರ. ಅಂತಹ ಪ್ರಕರಣಗಳು ಗಮನಕ್ಕೆ ಬಂದಿಲ್ಲ. ಪರಿಶೀಲಿಸಲಾಗುವುದು’ ಎಂದು ಸಿಎಆರ್‌ ಡಿಸಿಪಿ ಶ್ರೀನಿವಾಸ ಯಾದವ್‌ ಹೇಳಿದರು.

‘ಪ್ರತಿ ಬಾರಿ ಕಾರಾಗೃಹದಿಂದ ಕೋರ್ಟ್‌ಗೆ, ಅಲ್ಲಿಂದ ಕಾರಾಗೃಹಕ್ಕೆ ಕೈದಿಯನ್ನು ಕರೆದೊಯ್ಯುವಾಗ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗುತ್ತದೆ. ಆ ವೇಳೆ ಕಿಮ್ಸ್‌ಗೆ ತೆರಳಿದಾಗ ಹೊರ ಪೊಲೀಸ್‌ ಠಾಣೆ (ಒಪಿಎಸ್‌) ಮೂಲಕವೇ ವೈದ್ಯಕೀಯ ತಪಾಸಣೆ ನಡೆಸಬೇಕು’ ಎಂದರು.

ಕಾರಾಗೃಹದಲ್ಲಿ ಸಭೆ; ಕಮಿಷನರ್‌ ಸೂಚನೆ

ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅ. 2ರಂದು ಭದ್ರತೆ ಮತ್ತು ಅಪರಾಧ ನಿಯಂತ್ರಣ ಕುರಿತು ಆಯೋಜಿಸಲಾದ ಸಭೆಯಲ್ಲಿ ಕೈದಿಗಳ ಕುರಿತು ಕೈಗೊಳ್ಳಬೇಕಾದ ಕೆಲವು ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸೂಚಿಸಲಾಗಿದೆ. ಈ ಕುರಿತು ಕಮಿಷನರ್‌ ಲಾಭೂರಾಮ್‌, ಎಸಿಪಿಗಳಿಗೆ ಹಾಗೂ ಇನ್‌ಸ್ಪೆಕ್ಟರ್‌ಗಳಿಗೆ ಹಾಗೂ ಸಿಎಆರ್‌, ಆರ್‌ಪಿಐಗಳಿಗೆ ಪತ್ರ ಬರೆದು, ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಿದ್ದಾರೆ.

‘ಆರೋಪಿಗಳನ್ನು ಖಾಸಗಿ ವಾಹನಗಳಲ್ಲಿ ಕರೆದೊಯ್ಯದೆ, ಸರ್ಕಾರಿ ವಾಹನಗಳಲ್ಲಿ ಮಾತ್ರ ಕರೆದೊಯ್ಯಬೇಕು. ಅವರನ್ನು ಬೆಂಗಾವಲು ಮಾಡುವಾಗ ಮಾರ್ಗ ಮಧ್ಯದಲ್ಲಾಗಲಿ, ನ್ಯಾಯಾಲಯದ ಆವರಣದಲ್ಲಾಗಲಿ ಮೊಬೈಲ್‌ ಫೋನ್‌ ಬಳಕೆ ಮಾಡಲು ಅವಕಾಶ ನೀಡಬಾರದು. ಕಾರಾಗೃಹಕ್ಕೆ ತಂದು ಬಿಡುವವರೆಗೂ ಸಂಪೂರ್ಣ ಜವಾಬ್ದಾರಿ ಬೆಂಗಾವಲು ಸಿಬ್ಬಂದಿಯದ್ದಾಗಿದ್ದು, ಆ ವೇಳೆ ನಿಷೇಧಿತ ವಸ್ತುಗಳಾದ ಗಾಂಜಾ, ಮೊಬೈಲ್‌ ಮತ್ತು ಅಪಾಯಕಾರಿ ವಸ್ತುಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು. ಬೆಂಗಾವಲು ಸಂದರ್ಭದಲ್ಲಿ ನ್ಯಾಯಾಧೀಶರ ಅನುಮತಿಯಿಲ್ಲದೆ ಆರೋಪಿ ಸಂಬಂಧಿಕರ ಜೊತೆ ಮಾತನಾಡುವಂತಿಲ್ಲ. ಕಾರಾಗೃಹದಲ್ಲಿ ನೀಡಿದ ಊಟವನ್ನೇ ನೀಡಬೇಕು. ಹೊರಗಡೆಯಿಂದ ತಂದ ಆಹಾರ ಪದಾರ್ಥ ಸೇವನೆಗೆ ಅವಕಾಶ ನೀಡುವಂತಿಲ್ಲ’ ಎಂದು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು