ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಹೆಚ್ಚಿದ ಕಾರ್ಯಾಭಾರ; ಒತ್ತಡದಲ್ಲಿ ಪೊಲೀಸ್ ಸಿಬ್ಬಂದಿ

ನಾಗರಾಜ್‌ ಬಿ.ಎನ್‌.
Published 22 ನವೆಂಬರ್ 2023, 4:42 IST
Last Updated 22 ನವೆಂಬರ್ 2023, 4:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದ ವಿವಿಧ ಮಹಾನಗರ ಪೊಲೀಸ್ ಕಮಿಷನರೇಟ್ ಘಟಕಗಳಲ್ಲಿ ಎ, ಬಿ, ಸಿ ಮಾದರಿಯಲ್ಲಿ (ಮೂರು ಪಾಳಿ, ಮೂರು ತಂಡ) ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರೆ, ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಘಟಕದ ಸಿಬ್ಬಂದಿ ಎ, ಬಿ, ಸಿ ಮಾದರಿಯಲ್ಲಿ ಎರಡು ತಂಡದಲ್ಲಿ ಕೆಲಸ ಮಾಡುತ್ತಾರೆ.

ದಿನದಲ್ಲಿ‌ 8 ಗಂಟೆ ಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವಿದ್ದರೂ ಹೆಚ್ಚುವರಿಯಾಗಿ 4 ಅಥವಾ 5 ಗಂಟೆ ಕಾರ್ಯ ನಿರ್ವಹಿಸಬೇಕು. ಠಾಣೆಯಲ್ಲಿನ ಅಪರಾಧ ವಿಭಾಗಕ್ಕೆ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನಿಯೋಜನೆ ಆಗಿದ್ದಾರೆ. ಇದೆಲ್ಲದರ ಮಧ್ಯೆ ಸಿಬ್ಬಂದಿ ಕೊರತೆ ತಲೆದೋರಿದೆ.

‘ಕಾನೂನು‌ ಪಾಲಿಸುವುದು, ಸಮಾಜದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡುವುದು, ಕಾನೂನು ಕುರಿತು ಜಾಗೃತಿ ಮೂಡಿಸುವುದು ನಮ್ಮ ಆದ್ಯ ಕರ್ತವ್ಯ. ಆದರೆ, ಸಿಬ್ಬಂದಿ ಕೊರತೆಯಿಂದ ನಮಗೆ ಕೆಲಸದ ಹೊರೆ ಹೆಚ್ಚುತ್ತಿದೆ. ಒಂದು ಸರದಿ ಮುಗಿಸಿದ ನಂತರ, ಎರಡು ಸರದಿ ವಿಶ್ರಾಂತಿಗೆ ಮೀಸಲಿರುತ್ತದೆ. ಆದರೆ, ಸಿಬ್ಬಂದಿ ಕೊರತೆಯಿಂದ ಮೂರನೇ ಸರದಿಗೆ ಅನಿವಾರ್ಯವಾಗಿ ತೆರಳಬೇಕಿದೆ. ಕುಟುಂಬದವರಿಗೆ ಸಮಯ ಮೀಸಲಿಡಲು ಆಗುತ್ತಿಲ್ಲ ಮತ್ತು ಸರಿಯಾಗಿ ವಿಶ್ರಾಂತಿ ಪಡೆಯಲು ಆಗುತ್ತಿಲ್ಲ’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.

ಇದು ಬೀಟ್‌ ಕಥೆ: ಅವಳಿನಗರದ ಒಟ್ಟು 15(ಸಿವಿಲ್) ಠಾಣೆಯ ವ್ಯಾಪ್ತಿಯಲ್ಲಿ 146 ಸ್ಮಾರ್ಟ್ ಬೀಟ್‌ಗಳಿವೆ. ಒಂದೊಂದು‌ ಬೀಟ್‌ಗೆ ಇಬ್ಬರು ಸಿಬ್ಬಂದಿ ನಿಯೋಜಿಸಿ, 192 ಸಿಬ್ಬಂದಿ ಪ್ರತಿ ರಾತ್ರಿಪಾಳಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಉಪನಗರ, ಗೋಕುಲ ರೋಡ್, ಕೇಶ್ವಾಪುರ, ವಿದ್ಯಾನಗರ, ಬೆಂಡಿಗೇರಿ, ವಿದ್ಯಾಗಿರಿ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 15 ಬೀಟ್‌ಗಳಿವೆ.

‘ಠಾಣೆಯಲ್ಲಿ 80(ಅಂದಾಜು) ಸಿಬ್ಬಂದಿ ಬಲವಿದ್ದರೆ, ಬೀಟ್ ಕರ್ತವ್ಯಕ್ಕೆ 30 ಸಿಬ್ಬಂದಿ; ದಿನದಲ್ಲಿ ಕನಿಷ್ಠ ಐದು, ಆರು ಮಂದಿ ರಜೆ; ಪಿಐ, ಪಿಎಸ್ಐ(4-5), ಬರಹಗಾರ(2), ಸೆಂಟ್ರಿ(3), ಕೋರ್ಟ್, ಸಮನ್ಸ್, ಜನರಲ್(15) ಎಂದು ಒಟ್ಟು 60-65 ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಉಳಿದ 15-20 ಸಿಬ್ಬಂದಿ ಕ್ರೈಂ ವಿಭಾಗದಲ್ಲಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಹಾಗೂ ಖಾಯಂ ಇದೇ ವಿಭಾಗದಲ್ಲಿ ಅವರು ಕೆಲಸ ಮಾಡುತ್ತಿರುವುದರಿಂದ ಮೂರು ತಂಡವಾಗಿ ಕಾರ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ.‌ ಎಲ್ಲರೂ, ಎಲ್ಲ ಕೆಲಸ ನಿರ್ವಹಿಸುವಂತಾದರೆ ಅಥವಾ ಅಗತ್ಯವಿದ್ದಷ್ಟೇ ಸಿಬ್ಬಂದಿ ಕ್ರೈಂ ವಿಭಾಗದಲ್ಲಿದ್ದರೆ ಉಳಿದ ಸಿಬ್ಬಂದಿಗೆ ಹೆಚ್ಚುವರಿ ಹೊರೆ ತಪ್ಪಬಹುದು’ ಎನ್ನುವುದು ಪೊಲೀಸರ ಅಭಿಪ್ರಾಯ.

ಪೊಲೀಸ್ ಮ್ಯಾನ್ಯೂವಲ್'ನಲ್ಲಿ ಏನಿದೆ?

ಒಂದು ದಿನವನ್ನು ಮೂರು ಕೆಲಸದ ಸರಣಿಯಾಗಿ ವಿಂಗಡಿಸಲಾಗುತ್ತದೆ. ಮೊದಲನೇ ಸರಣಿ ಆರು ತಾಸು(ಬೆಳಿಗ್ಗೆ 7ರಿಂದ‌ ಮಧ್ಯಾಹ್ನ 1), ಎರಡನೇ ಸರಣಿ ಎಂಟು ತಾಸು(ಮಧ್ಯಾಹ್ನ 1ರಿಂದ ರಾತ್ರಿ 9) ಮತ್ತು ಮೂರನೇ ಸರಣಿ 10 ತಾಸು(ರಾತ್ರಿ 9ರಿಂದ‌ ಬೆಳಿಗ್ಗೆ 7). ನಾಲ್ಕು ದಿನದ ಈ ಮೂರು ಸರಣಿಯನ್ನು ನಾಲ್ಕು ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಬೆಳಿಗ್ಗೆಯ ಸರಣಿಯಲ್ಲಿ ಕೆಲಸ ಮಾಡಿದ ಸಿಬ್ಬಂದಿ, ತಕ್ಷಣ 32 ತಾಸು ವಿಶ್ರಾಂತಿಯಲ್ಲಿರುತ್ತಾರೆ. ಇದು ಲಭ್ಯವಾಗದಿದ್ದರೆ ಅದೇ ವಾರದಲ್ಲಿ 24 ಗಂಟೆ ವಿಶ್ರಾಂತಿ ಪಡೆಯಲು ಅರ್ಹರಾಗಿರುತ್ತಾರೆ. ರಾತ್ರಿ ಪಾಳಿ ಮುಗಿದ ನಂತರ ಕಡ್ಡಾಯವಾಗಿ 36 ತಾಸು ವಿಶ್ರಾಂತಿಯಿರಬೇಕು. ವಾರದ ರಜೆ ಕಡ್ಡಾಯವಾಗಿ ನೀಡಬೇಕು. ಇದು ಪೊಲೀಸ್ ಮ್ಯಾನ್ಯುವಲ್‌ನಲ್ಲಿ ಇರುವ ನಿಯಮ.‌

ಹು–ಧಾ ಮಹಾನಗರದಲ್ಲಿ ಎಬಿಸಿ ಮಾದರಿ ಜಾರಿಯಲ್ಲಿದೆ. ಆದರೆ ಎರಡು ತಂಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು
- ರೇಣುಕಾ ಸುಕುಮಾರ್‌ , ಪೊಲೀಸ್‌ ಕಮಿಷನರ್‌

ಪಿಎಸ್‌ಐ ಕನಸು ಕಂಡವರು ನಿವೃತ್ತಿ ಅಂಚಿನಲ್ಲಿ

ಕಮಿಷನರೇಟ್‌ ಘಟಕದಲ್ಲಿ ಖಾಲಿಯಿರುವ ಪಿಎಸ್‌ಐ ಹುದ್ದೆ ಭರ್ತಿ ಮಾಡಿಕೊಳ್ಳಲು(ಎಎಸ್‌ಐಗೆ ಸೇವಾ ಹಿರಿತನದ ಮೇಲೆ ಬಡ್ತಿ ನೀಡುವುದು) ಪೊಲೀಸ್‌ ಮಹಾನಿರ್ದೇಶಕರು ಸೂಚನೆ ನೀಡಿದ್ದು ಕೆಲವು ಮಹಾನಗರದಲ್ಲಿ ಈಗಾಗಲೇ ಹುದ್ದೆ ಭರ್ತಿಯಾಗಿವೆ. ಆದರೆ ಹು–ಧಾ ಮಹಾನಗರದ ಕಮಿಷನರೇಟ್‌ ಘಟಕದಲ್ಲಿನ ಕೆಲವು ತಾಂತ್ರಿಕ ಕಾರಣದಿಂದ ಮುಂಬಡ್ತಿ ವಿಳಂಬವಾಗಿದೆ. ಒಂಬತ್ತು ಪಿಎಸ್‌ಐ ಹುದ್ದೆ ಭರ್ತಿಗೆ ಅವಕಾಶವಿದ್ದು ‌ನಿವೃತ್ತಿ ಅಂಚಿನಲ್ಲಿರುವ ಎಎಸ್‌ಐಗಳು ಪಿಎಸ್‌ಐ ಪದನಾಮಕ್ಕೆ ಕಾಯುತ್ತಿದ್ದಾರೆ. ‘ಬಡ್ತಿ ನೀಡಲು ಅನುಮತಿ ನೀಡುವಂತೆ ವಿನಂತಿಸಿ ಮುಖ್ಯ ಕಚೇರಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ತಕ್ಷಣ ಎಎಸ್‌ಐ ದರ್ಜೆ ಸಿಬ್ಬಂದಿಗೆ ಪಿಎಸ್‌ಐ ಬಡ್ತಿ ನೀಡಲಾಗುವುದು‘ ಎಂದು ‘ಪ್ರಜಾವಾಣಿ’ಗೆ ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT