ಸೋಮವಾರ, ಫೆಬ್ರವರಿ 17, 2020
15 °C

ಕೆರೆ ನೀರು ಬಳಕೆಗೆ ಯೋಗ್ಯವಲ್ಲ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಮಾನವನ ಆರೋಗ್ಯದಲ್ಲಿ ನೀರು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ನೀರು ಎಷ್ಟು ಶುದ್ಧವೋ ಅಷ್ಟು ಆರೋಗ್ಯವೂ ಅವರದಾಗುತ್ತದೆ. ಆದರೆ, ಹುಬ್ಬಳ್ಳಿ–ಧಾರವಾಡದಲ್ಲಿರುವ ಯಾವ ಕೆರೆಯ ನೀರು ಕೂಡ ಕುಡಿಯಲು ಮಾತ್ರವಲ್ಲ, ಯಾವ ರೀತಿ ಗೃಹ ಬಳಕೆಗೂ ಯೋಗ್ಯವಲ್ಲ. ಒಳಚರಂಡಿ ನೀರು, ವಿವಿಧ ಮೂಲಗಳಿಂದ ಹಲವು ರೀತಿಯ ಮಾಲಿನ್ಯ, ಭೂ ಬಳಕೆಯ ರೀತಿ ನೀರಿನ ಒಟ್ಟಾರೆ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ. ಜೈವಿಕ ವಸ್ತುಗಳು ಭೂಮಿಯಲ್ಲಿ ಕರಗುವುದಕ್ಕೆ ಸಾಕಷ್ಟು ವರ್ಷಗಳು ತೆಗೆದುಕೊಳ್ಳುತ್ತಿರುವುದೂ ಒಂದು ಕಾರಣ.

ಕೆರೆಗಳ ನಿರ್ಮಾಣಕ್ಕೆ ನೈಸರ್ಗಿಕವಾಗಿ ಸಾಕಷ್ಟು ಕಾರಣಗಳಿದ್ದು, ಅದರದ್ದೇ ಗುಣಲಕ್ಷಣಗಳಿವೆ. ಆದರೆ ಅವುಗಳೆಲ್ಲವನ್ನೂ ಮಾನವ ಚಟುವಟಿಕೆಗಳು ಬದಲಾಯಿಸಿವೆ. ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳು ಕೆರೆ ಒಳಗೆ ಹಾಗೂ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿದ್ದು, ಇದರಿಂದ ಮಣ್ಣು ಹಾಗೂ ಅದರಲ್ಲಿ ಪೌಷ್ಟಿಕಾಂಶಗಳಿಗೆ ಸಾಕಷ್ಟು ಧಕ್ಕೆ ಉಂಟಾಗಿದೆ.

ಕ್ಷಿಪ್ರ ಕೈಗಾರೀಕರಣ, ಕೃಷಿಯಲ್ಲಿ ಅಸಂಖ್ಯ ಪ್ರಮಾಣದಲ್ಲಿ ರಾಸಾಯನಿಕ, ಕೀಟನಾಶಕ ‌ಬಳಕೆ ಕೂಡ ನೀರಿನ ಪರಿಸರವನ್ನು ಹಾಳು ಮಾಡುತ್ತಿವೆ. ಕಲುಷಿತ ನೀರಿನ ಬಳಕೆಯಿಂದ ಜನರನ್ನು ಸಾಕಷ್ಟು ರೋಗಗಳು ಸಾಕಷ್ಟು ರೋಗಗಳು ಕಾಡುತ್ತಿವೆ. ಹೀಗಾಗಿ ನೀರಿನ ಗುಣಮಟ್ಟ ಅತ್ಯಂತ ಅವಶ್ಯಕವೂ ಹೌದು. ಹುಬ್ಬಳ್ಳಿ–ಧಾರವಾಡದಲ್ಲಿರುವ ಕೆರೆಗಳಲ್ಲಿ ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲಿ ಎಂಪ್ರಿ ಸಮೀಕ್ಷೆ ನಡೆಸಿದೆ. ಮಳೆಗಾಲದಲ್ಲಿ ಒಟ್ಟಾರೆ ಉಷ್ಣಾಂಶ 24.1 ಡಿಗ್ರಿಯಿಂದ 34.3 ಡಿಗ್ರಿ ಸೆಲ್ಷಿಯಸ್‌ವರೆಗಿದೆ. ಗೋಕುಲದ ಚಿನ್ನದ ಕೆರೆಯಲ್ಲಿ ಅತಿ ಹೆಚ್ಚು ಹಾಗೂ ನವಲೂರು ಕೆರೆಯಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಚಳಿಗಾಲದಲ್ಲಿ, ತಡಸಿನಕೊಪ್ಪ ಕೆರೆಯಲ್ಲಿ ಅತಿಹೆಚ್ಚು 25.5 ಡಿಗ್ರಿ; ಕೆಲಗೇರಿ ಕೆರೆಯಲ್ಲಿ ಅತಿ ಕಡಿಮೆ 16.1 ಡಿಗ್ರಿ ದಾಖಲಾಗಿದೆ. ಬೇಸಿಗೆಯಲ್ಲಿ ಅಮರಗೋಳ ಕೆರೆಯಲ್ಲಿ  ಅತಿ ಹೆಚ್ಚು 28.4 ಡಿಗ್ರಿ; ಎತ್ತಿನಗುಡ್ಡ ಕೆರೆಯಲ್ಲಿ ಅತಿ ಕಡಿಮೆ 20 ಡಿಗ್ರಿ ದಾಖಲಾಗಿದೆ. ಉಷ್ಣಾಂಶ ನಿರೀಕ್ಷಿತ ಪ್ರಮಾಣದಲ್ಲಿಲ್ಲದಿರುವುದು ಕೂಡ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ.

ಹುಬ್ಬಳ್ಳಿ–ಧಾರವಾಡದಲ್ಲಿರುವ ಕೆರೆಗಳ ಪೈಕಿ ಶೇ 66ರಷ್ಟು ಕೆರೆಗಳು ಪ್ರತಿ ಲೀಟರ್‌ಗೆ 4 ಮಿಲಿಗ್ರಾಂಗಿಂತ ಕಡಿಮೆ ಕರಗಿದ ಆಮ್ಲಜನಕ ಪ್ರಮಾಣ ಹೊಂದಿವೆ. ನೀರಿನಲ್ಲಿರುವ ಜಲಚರ ಜೀವಿಗಳ ಆರೋಗ್ಯಕ್ಕೆ ಈ ಪ್ರಮಾಣ 5ರಿಂದ 15 ಮಿಲಿಗ್ರಾಂನಷ್ಟಿರಬೇಕು. ನೀರಿನ ಪಿಎಚ್‌ ಮಟ್ಟ ಅದು ಕುಡಿಯಲು ಯೋಗ್ಯವೇ ಎಂಬುದನ್ನು ಗುರುತಿಸುತ್ತದೆ. ಪಿಎಚ್‌ ಮಟ್ಟ 6.5ರಿಂದ 8.5ರಷ್ಟಿದ್ದರೆ ಅದು ಕುಡಿಯಲು ಯೋಗ್ಯ. ಆದರೆ, ಹುಬ್ಬಳ್ಳಿ–ಧಾರವಾಡದ ಕೆರೆಗಳು 8.5ಕ್ಕಿಂತ ಹೆಚ್ಚಿನ ಮಟ್ಟವನ್ನೇ ಹೊಂದಿವೆ. 

ಸಂಶೋಧಕ ಉಮರ್‌ ಫಾರೂಕ್‌ ಅವರು ನಡೆಸಿರುವ ಪರೀಕ್ಷೆ ಪ್ರಕಾರ, ಕೆಲಗೇರಿಯಲ್ಲಿ 9.76, ಸಾಧನಕೇರಿಯಲ್ಲಿ 8.35, ಎತ್ತಿನಗುಡ್ಡ ಕೆರೆಯಲ್ಲಿ 7.93 ರಷ್ಟು ಪಿಎಚ್‌ ದಾಖಲಾಗಿದೆ. ಪಿ.ಎಚ್‌. 3 ರಿಂದ 5 ರಷ್ಟಿದ್ದರೆ ಜಲಚರ ಜೀವಿಗಳಿಗೆ ಅಪಾಯ. ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಅದು ಸಮುದ್ರ ನೀರಿನಂತೆ ಉಪ್ಪಾಗಿರುತ್ತದೆ. ಪಿ.ಎಚ್‌ 11 ತಲುಪಿದರೆ ಅಂತಹ ನೀರು ಕಣ್ಣಿನ ಸೋಂಕು ಹಾಗೂ ಚರ್ಮ ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಕುಡಿಯಲು ನೀರು ಕೊಟ್ಟ ಕೆಲಗೇರಿ ಕೆರೆ ನೀರಿನ ಪಿ.ಎಚ್‌ ಇಂತಹ ರೋಗ ತರುವ ಮಟ್ಟಕ್ಕೆ ಹತ್ತಿರವಾಗುತ್ತಿರುವುದೇ ಆತಂಕಕಾರಿ. ಅನುಪಯುಕ್ತ ತ್ಯಾಜ್ಯಗಳು, ರಾಸಾಯನಿಕ ವಸ್ತುಗಳು, ಮಾರ್ಜಕ, ಟಾಯ್ಲೆಟ್‌ ಕ್ಲೀನರ್‌ಗಳು ಚರಂಡಿ ಮೂಲಕ ಕೆರೆಯನ್ನು ಸೇರುತ್ತಿದ್ದು, ಘನವಸ್ತುಗಳ ಸಂಗ್ರಹ ಹೆಚ್ಚಾಗುತ್ತಿದೆ. ಇದು ಎಲ್ಲ ಜೀವಿಗಳಿಗೂ ಅಪಾಯಕಾರಿ. ನರ ಸಂಬಂಧಿತ ಕಾಯಿಲೆಗಳು, ಪಾರ್ಶ್ವವಾಯು, ಜಡತ್ವದಂತಹ ಸಮಸ್ಯೆಗಳು ಇದರಿಂದಾಗುತ್ತವೆ. ನೀರಿನಲ್ಲಿ ಕರಗಿರುವ ಲೋಹ ಮತ್ತು ರಾಸಾಯನಿಕಗಳ ಪ್ರಮಾಣದ ಮೇಲೆ ನೀರಿನ ಗಡುಸುತನ ನಿರ್ಧರಿಸಲಾಗುತ್ತದೆ. ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಕ್ಲೋರೈಡ್‌ಗಳು ಹೆಚ್ಚಾಗುವುದರಿಂದ ಅಂಗಾಂಗಗಳು ವೈಫಲ್ಯಕ್ಕೆ ಒಳಗಾಗುತ್ತವೆ. ಇವೆಲ್ಲ ರಾಸಾಯನಿಕ ಪ್ರಮಾಣಗಳು ನಿಗದಿಗಿಂತ ಅತಿಹೆಚ್ಚಿನ ಪ್ರಮಾಣದಲ್ಲಿ ಹುಬ್ಬಳ್ಳಿ–ಧಾರವಾಡದ ಕೆರೆಗಳಲ್ಲಿ ಶೇಖರಣೆಯಾಗಿವೆ.

ಒಳಚರಂಡಿ ನೀರು, ತ್ಯಾಜ್ಯದ ಮೂಲಕ ಕೆರೆಗೆ ತಲುಪುವ ಈ ರಾಸಾಯನಿಕಗಳನ್ನು ತಡೆಯುವುದೇ ಇದೆಲ್ಲದ್ದಕ್ಕೂ ಪ್ರಮುಖ ಪರಿಹಾರ. ಇದಕ್ಕೆ ಜಿಲ್ಲಾಡಳಿತ ಮುಂದಾಗಬೇಕಷ್ಟೇ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು