ಸೋಮವಾರ, ಮೇ 23, 2022
30 °C
ಇಷ್ಟು ವರ್ಷ ಅವರು ಎಲ್ಲಿ ಹೋಗಿದ್ದರು?

ಕೆಎಲ್‌ಇ ಗೌರವಕ್ಕೆ ಧಕ್ಕೆ ತಂದರೆ ಕಾನೂನು ಕ್ರಮ: ಕೋರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ ಮೂರುಸಾವಿರ ಮಠದ ಭೂಮಿ ದಾನ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವಂತಹ ಮಾತುಗಳನ್ನು ಮುಂದುವರೆಸಿದರೆ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಲಿಂಗೈಕ್ಯ ಗಂಗಾಧರ ಸ್ವಾಮೀಜಿಗಳಿದ್ದಾಗಲೇ ಭೂಮಿ ದಾನವಾಗಿ ನೀಡಿದ್ದಾರೆ. ಅದನ್ನು ಹಲವಾರು ಬಾರಿ ಹೇಳಿದ್ದೇನೆ. ಇಷ್ಟು ದಿನ ಅವರು ಎಲ್ಲಿ ಹೋಗಿದ್ದರು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೆಸರೇಳದೇ ಪ್ರಶ್ನಿಸಿದರು.

ಮೂರುಸಾವಿರ ಮಠದ ಆಸ್ತಿ ಬಗೆಗೆ ಕೇಳಲು ಅವರ‍್ಯಾರು?, ಅವರಿಗೂ, ಮಠಕ್ಕೂ ಏನು ಸಂಬಂಧ? ಪರಭಾರೆ ಮಾಡಿದ್ದಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದ ಅವರು, ಮಠ, ಕೆಎಲ್‌ಇ ಬೇರೆ ಎಂದುಕೊಂಡಿಲ್ಲ. ಕೆಎಲ್‌ಇಯೂ ಸಮಾಜದ ಆಸ್ತಿ. 105 ವರ್ಷಗಳಿಂದ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.

ಹುಬ್ಬಳ್ಳಿಯಲ್ಲಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಆರಂಭಿಸಬೇಕು ಎನ್ನುವುದು ಮೂರುಸಾವಿರಮಠದ ಗಂಗಾಧರ ಸ್ವಾಮೀಜಿ ಅವರ ಕನಸಾಗಿತ್ತು. ಅದನ್ನು ನನಸು ಮಾಡುತ್ತಿದ್ದೇವೆ ಎಂದು ಹೇಳಿದರು.

 ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ ಅವರಿಗೆ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಸಲಹೆ ಮಾಡಿದ್ದೆ. ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದವರ ಜಾಗವಿದೆ. ಅವರೇ ಆರಂಭಿಸಲಿ ಎಂದಿದ್ದರು. ಮೂರುಸಾವಿರ ಮಠದ ಗಂಗಾಧರ ಸ್ವಾಮೀಜಿ ಅವರಿಗೂ ಕಾಲೇಜು ಆರಂಭಿಸುವಂತೆ ಮನವಿ ಮಾಡಿದ್ದೆವು. ಕೆಎಲ್‌ಇ ಯಿಂದ ಅವಶ್ಯಕ ನೆರವು ನೀಡಲಾಗುವುದು ಎಂದು ಹೇಳಿದ್ದೆವು ಎಂದು ಸ್ಮರಿಸಿಕೊಂಡರು.

ಗಂಗಾಧರ ಸ್ವಾಮೀಜಿ ಅವರು ಭೂಮಿ ದಾನವಾಗಿ ನೀಡುತ್ತೇವೆ ಎಂದ ಮೇಲಷ್ಟೇ ಕೆಎಲ್‌ಇ ವೈದ್ಯಕೀಯ ಕಾಲೇಜು ಆರಂಭಿಸಲು ಮುಂದಾಯಿತು. ಮಠದ ಉತ್ತರಾಧಿಕಾರಿ ವಿವಾದ ನಮಗೆ ಸಂಬಂಧವಿಲ್ಲ. ಮೂರುಸಾವಿರ ಮಠವಷ್ಟೇ ಅಲ್ಲ, ಗದುಗಿನ ತೋಂಟದಾರ್ಯ ಮಠ, ಧಾರವಾಡ ಹಾಗೂ ಅಥಣಿಯ ಮುರುಘಾ ಮಠಗಳೂ ಜಾಗವನ್ನು ದಾನವಾಗಿ ನೀಡಿವೆ ಎಂದು ತಿಳಿಸಿದರು.

ಚಿತ್ರದುರ್ಗದ ಮಠ ಸೇರಿದಂತೆ ಹಲವೆಡೆ ಮಠದ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ. ಅದನ್ನು ಯಾಕೆ ಪ್ರಶ್ನಿಸುತ್ತಿಲ್ಲ. ದಾನ ನೀಡಿದ್ದನ್ನು ಮಾತ್ರ ಕೇಳುತ್ತಿರುವುದೇಕೆ? ಅವನ ಮುಖವನ್ನೂ ನೋಡಿಲ್ಲ. ಕೆಎಲ್‌ಇ ಸಂಸ್ಥೆ ಅವರನ್ನು ಸ್ವಾಮಿ ಎಂದೂ ಒಪ್ಪಿಕೊಂಡಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಮಾಜ, ಮುಖಂಡರ ಬಗೆಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು. ಮಠದ ಸ್ವಾಮೀಜಿಯನ್ನಾಗಿ ಯಾರನ್ನು ಮಾಡಬೇಕು ಎಂದು ಸಮಾಜ ತೀರ್ಮಾನ ಮಾಡಬೇಕು. ಅವರೇ ಹೇಳಿಕೊಂಡು ತಿರುಗುವುದಲ್ಲ ಎಂದರು.

ಪ್ರಚಾರಕ್ಕಾಗಿ ಸಮಾಜಕ್ಕೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಬೇಕು. ಅಪಪ್ರಚಾರವನ್ನು ಖಂಡಿಸುವುದಾಗಿ ಅವರು ಹೇಳಿದರು.

ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಈ ಭಾಗದಲ್ಲಿ ಆಸ್ಪತ್ರೆಯಾಗಿ ಬಡ ಜನರಿಗೆ ಉಪಯೋಗವಾಗಲಿ ಎಂದು ಆಸ್ಪತ್ರೆ ನಿರ್ಮಿಸುತ್ತಿರುವುದು ತಪ್ಪೇ ಎಂದು ಪ್ರಶ್ನಿಸಿದರು.

‘ವೈಯಕ್ತಿಕವಾಗಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು, ಅವರ ಬಗೆಗೆ ಮಾತನಾಡುವುದಿಲ್ಲ. ಬೈಯ್ಯುತ್ತಿರುವ ಅವರೇ ದೊಡ್ಡವರಾಗಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು