ಮಂಗಳವಾರ, ಜನವರಿ 31, 2023
27 °C
ಪ್ರೊ. ಕೆ.ಎಸ್. ನಾರಾಯಣಾಚಾರ್ಯರ 9 ಕೃತಿಗಳ ಬಿಡುಗಡೆ

ನಾರಾಯಣಾಚಾರ್ಯರ ಸಾಹಿತ್ಯ ಬದುಕಿಗೆ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಭಾರತೀಯ ಮೌಲ್ಯಗಳನ್ನು ಎತ್ತಿಹಿಡಿದು ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ನೀಡಿದ ಸಾಹಿತ್ಯ ಅನಂತಕಾಲದ ಬದುಕಿಗೆ ಪ್ರೇರಣೆ. ಸತ್ಯ, ಮಿಥ್ಯ ಗುರುತಿಸುವುದು ಕಷ್ಟವಾಗಿರುವ ಈ ಕಾಲದಲ್ಲಿ ನಾರಾಯಣಾಚಾರ್ಯರ ಸಾಹಿತ್ಯ ಮನೆ ಮನೆಗಳಿಗೆ ತಲುಪಿಸಬೇಕಿದೆ ಎಂದು ಕಲಬುರಗಿಯ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ಸೃಜನಾ ರಂಗಮಂದಿರದಲ್ಲಿ ಪ್ರೊ.ಕೆ.ಎಸ್. ನಾರಾಯಣಾಚಾರ್ಯರ ಸ್ಮರಣಾರ್ಥ ಸಾಹಿತ್ಯ ಪ್ರಕಾಶನ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆಚಾರ್ಯ ಸ್ಮರಣ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಗ್ರ ಭಾರತದ ಮೂಲ ಇತಿಹಾಸ ಅಧ್ಯಯನ ಮಾಡಿ ಮಾತನಾಡುವ ಜನ ವಿರಳ. ಆದರೆ, ಬದಕಿನ ಸತ್ಯಕ್ಕೆ ಸಮೀಪವಾಗಿ ವೇದ, ಉಪನಿಷತ್, ರಾಮಾಯಣ, ಮಹಾಭಾರತ ಮೂಲ ಚಿಂತನೆಗೆ ಧಕ್ಕೆ ಆಗದಂತೆ ಮೌಲ್ಯಗಳನ್ನು ಎತ್ತಿ ಹಿಡಿದು ಬರೆಯುವ ಹಾಗೂ ಉಪನ್ಯಾಸ ಮಾಡುವ ವಿಶಿಷ್ಟ ಶೈಲಿ ಆಚಾರ್ಯರಲ್ಲಿ ಇತ್ತು ಎಂದರು.

ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಮಾತನಾಡಿ, ಸುಮಾರು 4- 5 ವರ್ಷಗಳಿಂದ ದೇಶದಲ್ಲಿ ಬದಲಾವಣೆ ಕ್ರಾಂತಿ ಆರಂಭವಾಗಿದೆ. ಇಡೀ ಜಗತ್ತು ಭಾರತದ ಸಂಸ್ಕೃತಿ, ಪರಂಪರೆ ಅರಿಯುವ ತವಕದಲ್ಲಿದ್ದಾರೆ. ಭಾರತೀಯ ಸಂಸ್ಕೃತಿ ಪ್ರಚಾರ ಮಾಡುವಲ್ಲಿ ನಾವು ಬಹಳ ಹಿಂದೆ ಉಳಿದಿದ್ದೇವೆ ಎಂಬುದೇ ಬೇಸರದ ಸಂಗತಿ ಎಂದರು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ನಂತರ ಪ್ರೊ. ನಾರಾಯಣಾಚಾರ್ಯ ಅವರ ರಾಮಾಯಣ ಮಹಾಪ್ರಸಂಗಗಳು-2, ಮಾರೀಚ, ಭಾರತೀಯ ಇತಿಹಾಸ ಪುರಾಣಗಳು, ಬೇಂದ್ರೆ ಕಾವ್ಯದಲ್ಲಿ ಅಧ್ಯಾತ್ಮದ ಬೆಲೆ ಮತ್ತು ಆರ್ಷದೃಷ್ಟಿ, ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು, ಶ್ರೀರಾಮಕಥಾವತಾರ, ರಾಜಸೂಯ ತಂದ ಅನರ್ಥ, ವನದಲ್ಲಿ ಪಾಂಡುವರು ಸೇರಿದಂತೆ 9 ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ದಿವಾಕರ ಹೆಗಡೆ, ಸಮೀರ ಜೋಶಿ, ಡಾ. ಹ.ವೆಂ. ಕಾಖಂಡಕಿ, ಹರ್ಷ ಡಂಬಳ, ಶ್ರೀಧರ ನಾಡಗೀರ, ಗೋ. ಮಧುಸೂದನ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.