ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಕೆತ್ತನೆಯೇ ಬದುಕು!

Last Updated 20 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಅಡುಗೆಗೆ ಸಹಾಯವಾಗಲೆಂದು ನಮ್ಮ ಹಿರಿಯರು ರುಬ್ಬುವ ಕಲ್ಲು ಹಾಗೂ ಬೀಸುವ ಕಲ್ಲುಗಳನ್ನು ಕಂಡುಕೊಂಡರು. ಇವುಗಳನ್ನು ಬಳಸುವಾಗ ದೈಹಿಕ ಶ್ರಮವೂ ವಿನಿಯೋಗವಾಗುತ್ತಿತ್ತು. ಹೆಣ್ಣು ಮಕ್ಕಳಿಗೆ ರುಬ್ಬುವ, ಬೀಸುವ ಕಲ್ಲುಗಳನ್ನು ಕೈಯಲ್ಲಿ ಹಿಡಿದರೇ ಹಬ್ಬ. ಆ ಸಮಯದಲ್ಲಿ ಹಾಡುಗಳನ್ನು ಕಟ್ಟಿ, ಹಾಡಿ ಸಂಗ್ರಹಿಸುತ್ತಿದ್ದು ಜನಪದ ಸಾಹಿತ್ಯವಾಗಿ ನಮ್ಮ ನಡುವೆ ಉಳಿದಿದೆ.

ಆದರೆ ಆ ಕಾಲ ಇಂದಿಗಿಲ್ಲ. ರುಬ್ಬುವ, ಬೀಸುವ ಕಲ್ಲುಗಳ ಸ್ಥಾನವನ್ನು ಮಿಕ್ಸಿ, ಗ್ರೈಂಡರ್‌ಗಳು ಆಕ್ರಮಿಸಿವೆ. ಅವರಿವರೆನ್ನದೆ ಎಲ್ಲರ ಮನೆಯಲ್ಲೂ ಇವುಗಳು ಟರ್‌ಗುಟ್ಟುವ ಶಬ್ದವೇ ಜೋರಾಗಿ ಕೇಳಿಬರುತ್ತದೆ. ಇವುಗಳಿಲ್ಲದ ಅಡುಗೆ ಮನೆಯೇ ಇಲ್ಲವೇನೋ ಎಂಬಂತಾಗಿದೆ. ರುಬ್ಬುವ ಕಲ್ಲು, ಬೀಸೋ ಕಲ್ಲುಗಳು ನೇಪಥ್ಯಕ್ಕೆ ಸರಿದಿರುವ ಕಾಲಘಟ್ಟದಲ್ಲಿ ಇವುಗಳನ್ನೇ ಆಶ್ರಯಿಸಿ, ಜೀವನ ಸಾಗಿಸುತ್ತಿರುವ ಕುಟುಂಬಗಳೂ ಇವೆ.

ಅಂತಹುದೊಂದು ಕುಟುಂಬ ಹುಬ್ಬಳ್ಳಿಯ ಹೊಸೂರು ಕ್ರಾಸ್‌ನ ಗೋಕುಲ್ ರಸ್ತೆಯ ಬಸ್‌ನಿಲ್ದಾಣದ ಬಳಿ ವಾಸವಿದೆ. ಅವರ ನಿತ್ಯದ ಕಾಯಕ, ರುಬ್ಬುವ ಹಾಗೂ ಬೀಸುವ ಕಲ್ಲುಗಳ ಕೆತ್ತನೆ. ತಂದೆ ಕಾಲದಿಂದಲೂ ಇದೇ ಕಾಯಕ ಮಾಡುತ್ತಾ ಬಂದಿರುವ ದುರ್ಗಪ್ಪಾ ಹಾಗೂ ಅವರ ಕುಟುಂಬ ಈ ವೃತ್ತಿಯಿಂದ ಲಾಭವನ್ನೇನೂ ಕಂಡಿಲ್ಲ. ಆದರೂ 50 ವರ್ಷಗಳಿಂದ ಇದೇ ವೃತ್ತಿ ಬಿಡದೆ, ಮುಂದುವರಿಸಿಕೊಂಡುಬಂದಿದ್ದಾರೆ.

ದುರ್ಗಪ್ಪ ಅವರ ತಂದೆ ತೊಡಪ್ಪ ಹಾಗೂ ತಾಯಿ ಮಾಸವ್ವ ಮೂಲತಃ ವಿಜಯಪುರದವರು. ಹುಬ್ಬಳ್ಳಿಗೆ ಬಂದು ನೆಲೆಸಿದ ಬಳಿಕ ಬೀಸುವ ಹಾಗೂ ರುಬ್ಬುವ ಕಲ್ಲುಗಳನ್ನು ಕೆತ್ತುವುದನ್ನೇ ಕಾಯಕವಾಗಿಸಿಕೊಂಡರು. ಅವರ ನಂತರ ದುರ್ಗಪ್ಪಾ ಚಿಕ್ಕವಯಸ್ಸಿನಿಂದ ಈವರೆಗೆ, ಸತತ 50 ವರ್ಷ ಇದೇ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರ ಪತ್ನಿ ಹನುಮವ್ವ, ಮಗಳು ಶಾವಂತ್ರಿ ಹಾಗೂ ಮಗ ಮಂಜುನಾಥ ಕೂಡ ಇದರಲ್ಲೇ ತೊಡಗಿಕೊಂಡಿದ್ದಾರೆ. ಅಲ್ಲದೆ, ಅವರ ಸಹೋದರ, ಸಹೋದರಿಯರೂ ಅಣ್ಣನ ಹಾದಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಶಿಕ್ಷಣವನ್ನೇ ಪಡೆಯದ ದುರ್ಗಪ್ಪ ಕೆಲಸಕ್ಕಾಗಿ ಬೇರೆಡೆ ಅಲೆದಾಡಿ, ಬಳಿಕ ಕಲ್ಲನ್ನೇ ನಂಬಿ ಜೀವನ ಆರಂಭಿಸಿದರು. ಮಿಕ್ಸಿ, ಗ್ರೈಂಡರ್‌ಗಳ ಆರ್ಭಟ ಅಷ್ಟಾಗಿ ಇಲ್ಲದ ಕಾಲದಲ್ಲಿ ಅವರ ವ್ಯಾಪಾರ ಚೆನ್ನಾಗಿಯೇ ಇತ್ತು. ಕೆಲಸದಲ್ಲಿ ನಷ್ಟ ಎಂಬುದಿಲ್ಲದೆ ತನ್ನ ಸಂಸಾರವನ್ನು ಸಲಹಿದರು. ಆದರೆ ಜೀವನ ಆಧುನಿಕವಾಗುತ್ತಾ, ಎಲ್ಲರ ಮನೆಗಳಲ್ಲಿ ಮಿಕ್ಸಿ, ಗ್ರೈಂಡರ್‌ಗಳು ಲಗ್ಗೆ ಇಟ್ಟ ಬಳಿಕ ಅವರ ಬದುಕು ದುಸ್ತರವಾಗತೊಡಗಿತು. ಈಗಂತೂ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ತಿಂಗಳಿಗೆ ಸಂಪಾದನೆಯಾಗುವ ₹10 ಸಾವಿರದಲ್ಲೇ ಇಡೀ ಕುಟುಂಬದ ನಿರ್ವಹಣೆಯಾಗಬೇಕಿದೆ.

ರುಬ್ಬುವ ಹಾಗೂ ಬೀಸುವ ಕಲ್ಲುಗಳನ್ನು ಕೆತ್ತಲು, ಕಚ್ಚಾ ಕಲ್ಲುಗಳನ್ನು ಬೈಲಹೊಂಗಲ ಹಾಗೂ ಗಜೇಂದ್ರಗಢದಿಂದ ತರಿಸುತ್ತಾರೆ. ಕಚ್ಚಾ ಕಲ್ಲು ಒಂದಕ್ಕೆ ₹150 ದರವಿದೆ. ತಿಂಗಳಿಗೆ ಸುಮಾರು 40 ಕಲ್ಲುಗಳನ್ನು ಕೊಂಡುಕೊಳ್ಳುತ್ತಾರೆ. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಕಲ್ಲುಗಳನ್ನು ಕೆತ್ತುವ ಕೆಲಸ ಆರಂಭವಾದರೆ ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಆವರೆಗೆ ನಿರಂತರವಾಗಿ ಕಲ್ಲುಗಳನ್ನು ಕೆತ್ತುವ ಕಾಯಕದಲ್ಲಿ ಇಡೀ ಕುಟುಂಬ ತೊಡಗಿರುತ್ತದೆ. ಇಷ್ಟೆಲ್ಲಾ ಕಷ್ಟಪಟ್ಟರೂ ನಗರ ಪ್ರದೇಶದಲ್ಲಿ ಇವುಗಳನ್ನು ಖರೀದಿಸುವ ಮಂದಿ ತೀರಾ ಕಡಿಮೆ. ಅದಕ್ಕಾಗಿ ತಮ್ಮದೇ ವಾಹನ ವ್ಯವಸ್ಥೆ ಮಾಡಿಕೊಂಡು, ವಾರಗಟ್ಟಲೆ ಹಳ್ಳಿಗಳ ಕಡೆಗೆ ಹೋಗುತ್ತಾರೆ. ಹಳ್ಳಿಗಳಲ್ಲಿ ಕೆಲ ಗ್ರಾಹಕರು ಇರುವುದರಿಂದ ಕುಟುಂಬ ನಿರ್ಹವಣೆಗಾಗುವಷ್ಟು ಹಣ ಸಿಗುತ್ತಿದೆ.

‘ಪ್ರತಿದಿನ ಕಲ್ಲುಗಳನ್ನು ಕೆತ್ತಿ ನಮ್ಮ ಕೈಗಳು ಒಡೆದುಹೋಗಿವೆ. ಕೆತ್ತುವಾಗ ಕಲ್ಲಿನ ದೂಳು ದೇಹ ಸೇರಿ ಅದೆಷ್ಟೋ ಬಾರಿ ಅನ್ಯಾರೋಗ್ಯಕ್ಕೀಡಾಗಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು, ಮತ್ತೆ ಇದೇ ಕೆಲಸದಿಂದ ದೂಳು ಸೇವಿಸುವುದು. ಇಷ್ಟೇ ಆಗಿದೆ ನಮ್ಮ ಜೀವನ. ದಿನವೆಲ್ಲ ಕಷ್ಟಪಟ್ಟರೂ ವ್ಯಾಪಾರವೇ ಇರುವುದಿಲ್ಲ. ಬಸವ ಜಯಂತಿ ವೇಳೆ ಒಂದಿಷ್ಟು ಹಣ ಗಳಿಸುತ್ತೇವೆ. ಆನಂತರ ಮತ್ತದೇ ಕಷ್ಟದ ಜೀವನ’ ಎಂದು ದುರ್ಗಪ್ಪ ಬೇಸರದಿಂದ ನುಡಿದರು.

‘ಇದೇ ಕೆಲಸವನ್ನು ನಂಬಿದ್ದೇವೆ. ಹಾಗಾಗಿ ಬಂಡವಾಳ ಹೊಂದಿಸಲು ಒಂದಿಷ್ಟು ಸಾಲವನ್ನಾದರೂ ಕೊಡಿ ಎಂದು ಬ್ಯಾಂಕಿನವರ ಬಳಿ ಅಂಗಲಾಚಿದೆವು. ಯಾರೂ ಹಣ ನೀಡಲಿಲ್ಲ. ಧನ ಸಹಾಯ ಒದಗಿಸುವ ಸರ್ಕಾರದ ಯಾವುದೇ ಯೋಜನೆ ನಮ್ಮನ್ನು ತಲುಪಿಲ್ಲ. ಜನಪ್ರತಿನಿಧಿಗಳು, ಸಂಘಟನೆಯವರೂ ನಮ್ಮ ನೋವು ಕೇಳಲಿಲ್ಲ. ಹೇಗೋ ಕಷ್ಟಪಟ್ಟು ಕುಟುಂಬದವರ ಜೊತೆ ಇಲ್ಲಿವರೆಗೆ ಜೀವನ ತಳ್ಳಿಕೊಂಡು ಬಂದಿದ್ದೇನೆ. ಇರುವಷ್ಟು ದಿನ ಇದೇ ಕಾಯಕದಲ್ಲಿ ಕಷ್ಟಪಟ್ಟು ದುಡಿಯುತ್ತೇನೆ’ ಎಂದು ಅವರು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT