ಕೋಮು ಸೌಹಾರ್ದತೆ ಕಾಪಾಡಿ: ಸಚಿವ ಜೋಶಿ

ಹುಬ್ಬಳ್ಳಿ: ‘ರಾಜ್ಯದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು. ಎಲ್ಲಾ ಮುಸ್ಲಿಮರನ್ನು ಒಂದೇ ರೀತಿ ಕಾಣಬಾರದು. ಎಲ್ಲರೂ ಕೆಟ್ಟವರೆಂದು ನಿರ್ಣಯಕ್ಕೆ ಬರುವುದು ತಪ್ಪಾಗುತ್ತದೆ. ಯಾರೂ ಅಂತಹ ಭಾವನೆ ಬೆಳೆಸಿಕೊಳ್ಳಬಾರದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಧಾರವಾಡದ ನುಗ್ಗಿಕೇರಿಯ ಹನುಮಂತ ದೇವಸ್ಥಾನದ ಬಳಿ ಶ್ರೀರಾಮ ಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಯ ಅಂಗಡಿಯಲ್ಲಿ ನಡೆಸಿದ ದಾಂಧಲೆ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕೋಮು ಸೌಹಾರ್ದವನ್ನು ಕೆಡಿಸುವವರು ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಬೇರೆ ವಿಚಾರ. ಭಾರತದಲ್ಲಿ ಎಲ್ಲರೂ ಒಂದಾಗಿರುವುದು ಅವಶ್ಯಕ. ಮೂಲಭೂತವಾದಿಗಳು ಪ್ರಚೋದನಕಾರಿಯಾಗಿ ನಡೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಸಂಘಟನೆಗಳು ಹಾಗೂ ಸರ್ಕಾರ ಇದನ್ನು ವಿರೋಧಿಸಬೇಕು. ಕಾನೂನು ಕೈಗೆತ್ತಿಕೊಳ್ಳುವ ವಿಚಾರದಲ್ಲಿ ಸಂಯಮ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
‘ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ಕುರಿತು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ನಿರ್ಧರಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.