ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್‌ ಕೇಂದ್ರಗಳ ಬೀಡು ಧಾರವಾಡ

Published 31 ಆಗಸ್ಟ್ 2023, 6:12 IST
Last Updated 31 ಆಗಸ್ಟ್ 2023, 6:12 IST
ಅಕ್ಷರ ಗಾತ್ರ

ಬಿ.ಜೆ.ಧನ್ಯಪ್ರಸಾದ್‌

ಧಾರವಾಡ: ನಗರವು ಸ್ಪರ್ಧಾ ಪರೀಕ್ಷೆ ಕೋಚಿಂಗ್‌ ಕೇಂದ್ರಗಳ ತಾಣವಾಗಿದೆ. ಸ್ಪರ್ಧಾರ್ಥಿಗಳಿಗೆ ವಿವಿಧ ಸ್ಪರ್ಧಾ ಪರೀಕ್ಷೆ ತಯಾರಿ ನಿಟ್ಟಿನಲ್ಲಿಈ ಕೇಂದ್ರಗಳು ತರಬೇತಿ ನೀಡುತ್ತಿವೆ.

ವಿದ್ಯಾಕಾಶಿ ಎಂದು ಕರೆಯುವ ಧಾರವಾಡದಲ್ಲಿ ನಾಡಿನ ವಿವಿಧೆಡೆಯ ಸಹಸ್ರಾರು ಸ್ಪರ್ಧಾರ್ಥಿಗಳು ವಿವಿಧ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇಲ್ಲಿನ ಕೇಂದ್ರಗಳಲ್ಲಿ ತರಬೇತಿ ಮಾರ್ಗದರ್ಶನ ಪಡೆದು ಹಲವರು ಯಶಸ್ಸು ಸಾಧಿಸಿದ್ಧಾರೆ.

ನಗರದಲ್ಲಿ 100ಕ್ಕೂ ಹೆಚ್ಚು ತರಬೇತಿ ಕೇಂದ್ರಗಳು ಇವೆ. ಸಪ್ತಾಪುರ ಭಾಗದಲ್ಲಿ ಬಹುತೇಕ ಕೋಚಿಂಗ್‌ ಕೇಂದ್ರಗಳು ಇವೆ. ನೀಟ್‌, ಜೆಇಇ, ಕೆ–ಸೆಟ್‌, ಟಿಇಟಿ, ಕೆಪಿಎಸ್‌ಸಿ (ಕೆಎಎಸ್‌), ಯುಪಿಎಸ್‌ಸಿ (ಐಎಎಸ್‌, ಐಪಿಎಸ್‌), ಐಬಿಪಿಎಸ್‌ (ಬ್ಯಾಂಕಿಂಗ್‌), ಆರ್‌ಆರ್‌ಬಿ (ರೈಲ್ವೆ), ಪೊಲೀಸ್‌, ಎಸ್‌ಡಿಎ, ಎಫ್‌ಡಿಎ, ಪಿಡಿಒ ಸಹಿತ ವಿವಿಧ ಪರೀಕ್ಷೆಗಳಿಗೆ ಕೇಂದ್ರಗಳಲ್ಲಿ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಕೇಂದ್ರಗಳ ಸಂಖ್ಯೆ ಮತ್ತು ತರಬೇತಿಗಾಗಿ ಬರುವ ಸ್ಪರ್ಧಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಗದಗ, ಹಾವೇರಿ, ದಾವಣಗೆರೆ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಸಹಿತ ವಿವಿಧ ಜಿಲ್ಲೆಗಳವರು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಪಿ.ಜಿ (ಪೇಯಿಂಗ್‌ ಗೆಸ್ಟ್‌), ಹಾಸ್ಟೆಲ್‌ ಮೊದಲಾದ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಯುಪಿಎಸ್‌ಸಿ, ಕೆಪಿಎಸ್‌ಸಿ, ನೀಟ್‌, ಜೆಇಇ ಮೊದಲಾದ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿದ ಸಾಧಕರ ಮಾರ್ಗದರ್ಶನ ಶಿಬಿರಗಳನ್ನು ಕೋಚಿಂಗ್‌ ಕೇಂದ್ರಗಳು ನಿರಂತವಾಗಿ ಆಯೋಜಿಸುತ್ತವೆ. ಸಂಪನ್ಮೂಲ ವ್ಯಕ್ತಿಗಳು, ಬೋಧಕರು ಬೋಧನೆ ಮಾಡುತ್ತಾರೆ.

24X7 ವಾಚನಾಲಯ ಸೌಲಭ್ಯ: ಹಲವು ಕೋಚಿಂಗ್‌ ಕೇಂದ್ರಗಳಲ್ಲಿ 24X7 ವಾಚನಾಲಯ ಸೌಲಭ್ಯ ಕಲ್ಪಿಸಲಾಗಿದೆ. ನೂರಾರು ಮಂದಿ ಕುಳಿತು ಅಧ್ಯಯನ ಮಾಡಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಶಬ್ಧ ವಾತಾವರಣ ಏಕಾಗ್ರತೆಯಿಂದ ಅಧ್ಯಯನ ಮಾಡಲು ಪೂರಕವಾಗಿದೆ.

ಪ್ರಚಲಿತ ವಿದ್ಯಮಾನ ಮತ್ತು ಸಾಮಾನ್ಯ ಜ್ಞಾನ ನಿಯತ ಕಾಲಿಕೆಗಳು, ದಿನಪತ್ರಿಕೆಗಳು, ಜರ್ನಲ್‌ಗಳು, ವಿಷಯವಾರು ಪುಸ್ತಕಗಳು ಸಹಿತ ಮೊದಲಾದವುಗಳ ಸ್ಪರ್ಧಾ ಪರೀಕ್ಷೆಗಳ ಅಧ್ಯಯನ ಸಾಮಗ್ರಿಗಳು. ಕೆಲವು ಸ್ಪರ್ಧಾರ್ಥಿಗಳು ತಡರಾತ್ರಿವರೆಗೂ ವಾಚನಾಲಯದಲ್ಲಿ ಕುಳಿತು ಅಧ್ಯಯನ ಮಾಡುತ್ತಾರೆ.

ಓದುವುದು, ಟಿಪ್ಪಣಿ ಮಾಡಿಕೊಳ್ಳುವ, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವುದು ಮೊದಲಾದ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಓದಿದ ವಿಷಯಗಳ ಕುರಿತು ಚರ್ಚೆ, ಪ್ರಬಂಧ ಬರಹ, ವಿಷಯ ಮಂಡನೆ ಕುರಿತು ಸ್ಪರ್ಧಾರ್ಥಿಗಳು ಪರಸ್ಪರ ಚರ್ಚಿಸುತ್ತಾರೆ

ಡಿಜಿಟಲ್‌ ಗ್ರಂಥಾಲಯ: ಹಲವು ಕೇಂದ್ರಗಳಲ್ಲಿ ಡಿಜಿಟಲ್‌ ಗ್ರಂಥಾಲಯ ಸೌಲಭ್ಯವೂ ಇದೆ. ಆನ್‌ಲೈನ್‌ನಲ್ಲಿ ಲಭ್ಯ ಇರುವ ಸಾಮಗ್ರಿಗಳ ಅಧ್ಯಯನ, ಆನ್‌ಲೈನ್‌ ಟೆಸ್ಟ್‌ ಸರಣಿ ಮೊದಲಾದವುಗಳು ಸ್ಪರ್ಧಾರ್ಥಿಗಳಿಗೆ ಸಿದ್ಧತೆಗೆ ಸಹಕಾರಿಯಾಗಿವೆ.

ತರಗತಿ ವ್ಯವಸ್ಥೆ

ಆಯಾ ಸ್ಪರ್ಧಾ ಪರೀಕ್ಷೆಯ ಪಠ್ಯಕ್ರಮ ಆಧರಿಸಿ ಸಂಪನ್ಮೂಲ ವ್ಯಕ್ತಿಗಳು, ತರಬೇತುದಾರರು, ಶಿಕ್ಷಣ ತಜ್ಞರು ಬೋಧನೆ ಮಾಡುತ್ತಾರೆ. ಇತಿಹಾಸ, ಸಂವಿಧಾನ, ವಿಜ್ಞಾನ, ಕನ್ನಡ, ಇಂಗ್ಲಿಷ್‌, ಅನುವಾದ, ತಾರ್ಕಿಕ ಜ್ಞಾನ, ಮಾನಸಿಕ ಸಾಮರ್ಥ್ಯ, ಸಂಖ್ಯಾ ಸಾಮರ್ಥ್ಯ ಸಹಿತ ವಿಷಯಗಳನ್ನು ಬೋಧನೆ ಮಾಡುತ್ತಾರೆ.

ಬಹುಆಯ್ಕೆ ಮಾದರಿ ಪ್ರಶ್ನೆ, ವಿವರಣಾತ್ಮಕ ಪ್ರಶ್ನೆ, ಪ್ರಬಂಧ ಬರಹ ಮೊದಲಾದವುಗಳ ಕುರಿತು ವಿವರಿಸುತ್ತಾರೆ. ನಿಯಮಿತವಾಗಿ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಮೌಲ್ಯಮಾಪನ ಮಾಡಿ ಸರಿ, ತಪ್ಪುಗಳನ್ನು ತೋರಿಸಲಾಗುತ್ತದೆ.

‘ಬಿ.ಎ ಪದವಿ ಪಡೆದಿದ್ದೇನೆ. ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಗೆ ಸಿದ್ಧತೆಯಲ್ಲಿ ತೊಡಗಿದ್ದೇನೆ. ಕೋಚಿಂಗ್‌ ಕೇಂದ್ರಕ್ಕೆ ದಾಖಲಾಗಿ ಮೂರು ತಿಂಗಳಾಗಿದೆ. ಕೇಂದ್ರದಲ್ಲಿ ತರಗತಿಗಳನ್ನು ನಡೆಸುತ್ತಾರೆ, ನಿಯಮಿತವಾಗಿ ಪರೀಕ್ಷೆ ನಡೆಸುತ್ತಾರೆ. ಪರೀಕ್ಷೆಗೆ ಅಣಿಯಾಗಲು ಅನುಕೂಲವಾಗಿದೆ’ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯ ಎಂ.ಎಸ್‌.ರಂಜೀತ್‌ ಹೇಳುತ್ತಾರೆ.

ಕೆಲವು ಕೇಂದ್ರಗಳಲ್ಲಿ ಸ್ಪರ್ಧಾರ್ಥಿಗಳಿಗೆ ವಾಸ್ತವ್ಯ ವ್ಯವಸ್ಥೆಯೂ ಇವೆ. ಸಪ್ತಾಪುರದಲ್ಲಿ ಕೋಚಿಂಗ್‌ ಕೇಂದ್ರಗಳ ಆಸುಪಾಸಿನಲ್ಲಿ ಬಹಳಷ್ಟು ಪಿ.ಜಿ., ಬಾಡಿಗೆ ಮನೆ, ಹಾಸ್ಟೆಲ್‌ಗಳು ಇವೆ. ಹಲವರು ಇಲ್ಲಿ ವಾಸ್ತವ್ಯ ಹೂಡಿದ್ದಾರೆ.

ಪಿಯಸಿ, ಪದವಿ, ಸ್ನಾತಕೋತ್ತರ ಪದವಿ ಮೊದಲಾದ ಕೋರ್ಸ್‌ ಮುಗಿಸಿರುವ ಹಲವರು ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ತಯಾರಿಯಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶದವರು ಹೆಚ್ಚು ಇದ್ದಾರೆ.

‘ನಮ್ಮ ಅಕ್ಕ ಧಾರವಾಡದ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದು ಎಫ್‌ಡಿಎ ಪರೀಕ್ಷೆ ಪಾಸಾಗಿ ಉದ್ಯೋಗದಲ್ಲಿದ್ಧಾರೆ. ಕಳೆದ ವರ್ಷ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ. ಆರು ತಿಂಗಳ ಹಿಂದೆ ಇಲ್ಲಿ ಕೋಚಿಂಗ್‌ ಕೇಂದ್ರಕ್ಕೆ ಸೇರಿದ್ದೇವೆ. ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ಕೇಂದ್ರಗಳಲ್ಲಿ ವ್ಯವಸ್ಥೆಗಳು ಚೆನ್ನಾಗಿವೆ’ ಎಂದು ಗದಗ ಜಿಲ್ಲೆಯ ರೋಣದ ಶೋಭಾ ಸೀಗೆಹಟ್ಟಿ ತಿಳಿಸಿದರು.

ಕೋಚಿಂಗ್‌ ಸೆಂಟರ್‌ಗಳ ಆಸುಪಾಸಿನಲ್ಲಿಯೇ ಪುಸ್ತಕ, ಲೇಖನ ಸಾಮಗ್ರಿ ಅಂಗಡಿಗಳು ಇವೆ. ನಗರ ಕೇಂದ್ರ ಗ್ರಂಥಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮೊದಲಾದವು ಆಸು‍‍ಪಾಸಿನಲ್ಲಿಯೇ ಇವೆ.

‘ಸ್ಪರ್ಧಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳು, ನಿಯತಕಾಲಿಕೆಗಳು, ವಿಷಯ ಪುಸ್ತಕಗಳನ್ನು ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪರಿಶ್ರಮ, ಛಲ, ಪಟ್ಟು ಬಿಡದೆ ಅಧ್ಯಯನ ಮಾಡುವ ಗುಣ ಇದ್ದರೆ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಸ್ಪರ್ಧಾ ಪರೀಕ್ಷೆ ಸಂಪನ್ಮೂಲ ವ್ಯಕ್ತಿ ವೀರಣ್ಣ ತಿಳಿಸಿದರು.

ಕರ್ನಾಟಕ ಮಹಾವಿದ್ಯಾಲಯ ಧಾರವಾಡ (ಕೆಸಿಡಿ)
ಕರ್ನಾಟಕ ಮಹಾವಿದ್ಯಾಲಯ ಧಾರವಾಡ (ಕೆಸಿಡಿ)
ಕರ್ನಾಟಕ ಮಹಾವಿದ್ಯಾಲಯ ಧಾರವಾಡ (ಕೆಸಿಡಿ)
ಕರ್ನಾಟಕ ಮಹಾವಿದ್ಯಾಲಯ ಧಾರವಾಡ (ಕೆಸಿಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT