ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸಾಜ್‌ ಸೆಂಟರ್‌ ಮೇಲೆ ದಾಳಿ: ಯುವತಿಯರ ರಕ್ಷಣೆ

Last Updated 30 ಆಗಸ್ಟ್ 2019, 19:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಪಾ(ಮಸಾಜ್‌) ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಗೋಕುಲ್ ರಸ್ತೆಯ ಅರ್ಬನ್‌ ಓಯಾಸಿಸ್‌ ಮಾಲ್‌ನಲ್ಲಿರುವ ‘ಥಾಯ್‌ ಸ್ಪಾ’ ಸೆಂಟರ್‌ ಹಾಗೂ ಪಿಂಟೋ ರಸ್ತೆಯ ‘ಪೈನಾಪಲ್‌ ಸ್ಪಾ’ ಸೆಂಟರ್‌ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಡಿಸಿಪಿ ಡಿ.ಎಲ್‌. ನಾಗೇಶ ಹಾಗೂ ಎಸಿಪಿ ಎಚ್‌.ಕೆ. ಪಠಾಣ ನೇತೃತ್ವದ ತಂಡ ದಾಳಿ ನಡೆಸಿದೆ. ಎರಡೂ ಸ್ಪಾ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಹಾಗೂ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

‘ಕೇಶ್ವಾಪುರದ ಕಾರ್ತಿಕ ಶೆಟ್ಟಿ ಹಾಗೂ ದೀಪಕ್‌ ಎಂಬವರು ಈ ಎರಡು ಸ್ಪಾ ಸೆಂಟರ್‌ಗಳನ್ನು ನಡೆಸುತ್ತಿದ್ದರು. ಇಲ್ಲಿ ಮಸಾಜ್‌ ಮಾಡುವ ನೆಪದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಯುವತಿಯರನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಸಾಜ್‌ ನಡೆಸಲು ಅನುಮತಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿದ್ದರು. ದಿಢೀರ್‌ ದಾಳಿ ವೇಳೆ ಅನೈತಿಕ ಚಟುವಟಿಕೆಗಳು ಗಮನಕ್ಕೆ ಬಂದಿವೆ. ಥಾಯ್‌ ಸ್ಪಾ ಸೆಂಟರ್‌ನಲ್ಲಿ ಥಾಯ್ಲೆಂಡ್‌ ಮೂಲದ ಮೂವರು ಯುವತಿಯರು ಹಾಗೂ ಪಿಂಟೋ ರಸ್ತೆಯ ಪೈನಾಪಲ್‌ ಸ್ಪಾನಲ್ಲಿ ಥಾಯ್ಲೆಂಡ್‌ನ ಒಬ್ಬ ಹಾಗೂ ಸ್ಥಳೀಯ ಒಬ್ಬ ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಡಿಸಿಪಿ ಡಿ.ಎಲ್‌.ನಾಗೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ವಿದೇಶಿ ಮೂಲದ ನಾಲ್ವರು ಮಹಿಳೆಯರಲ್ಲಿ ಇಬ್ಬರ ಪಾಸ್‌ಪೋರ್ಟ್‌ ಸಿಕ್ಕಿದೆ. ಮತ್ತಿಬ್ಬರ ಪಾಸ್‌ಪೋರ್ಟ್‌ ಸಿಕ್ಕಿಲ್ಲ. ಅವರನ್ನೆಲ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ’ ಎಂದರು.

ಉಪನಗರ ಪೊಲೀಸ್‌ ಠಾಣೆ ಹಾಗೂ ಗೋಕುಲ್ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು, ನಾಲ್ವರ ಬಂಧನ:

ಇಲ್ಲಿನ ತೊರವಿಹಕ್ಕಲದ ಕಂಚಗಾರಗಲ್ಲಿಯ ದುರ್ಗಮ್ಮ ಗುಡಿ ಬಳಿ ಜೂಜಾಡುತ್ತಿದ್ದ ಪ್ರಮೋದ ಬಾಕಳೆ, ತೌಸಿಫ್, ಶ್ರೀಕಾಂತ, ಪ್ರವೀಣ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹850 ನಗದು ಹಾಗೂ ಜೂಜಿಗೆ ಬಳಕೆ ಮಾಡುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಂಡ ವಸೂಲಿ:

ಅವಳಿ ನಗರದಲ್ಲಿ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಮಾಡಿದ 1692 ಮಂದಿ ವಿರುದ್ಧ ದೂರು ದಾಖಲಿಸಿ, ₹2,82,250 ದಂಡ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT