ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಂ ಸಭೆ: ಪರಿಹಾರ ಹಂಚಿಕೆಯಲ್ಲಿ ತಾರತಮ್ಯ, ಸದಸ್ಯರ ಆಕ್ರೋಶ

Last Updated 18 ಫೆಬ್ರುವರಿ 2020, 9:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅತಿವೃಷ್ಟಿಯಿಂದ ಕುಸಿದ ಮನೆಗಳಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿಯಲ್ಲಿ ಸೋಮವಾರ ನಡೆದ ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯಿಂದಾಗಿ ನೂಲ್ವಿ ಗ್ರಾಮದಲ್ಲಿ ನೂರಾರು ಮನೆಗಳು ನೆಲಸಮವಾಗಿದೆ. ಅಧಿಕಾರಿಗಳು ಪರಿಶೀಲಿಸಿ, ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಮನೆ ಕಳೆದುಕೊಂಡ ಶೇ 60ರಷ್ಟು ಕುಟುಂಬದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಕೆಲವು ಕುಟುಂಬದವರಿಗೆ ಯಾವುದೇ ಮಾನದಂಡ ಅನುಸರಿಸದೆ ಪರಿಹಾರ ನೀಡಲಾಗಿದೆ ಎಂದು ಸದಸ್ಯ ಪರ್ವೇಜ್‌ ಬ್ಯಾಹಟ್ಟಿ ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಶಿರಸ್ತೆದಾರ ದಾನರೆಡ್ಡಿ ಎನ್‌, ಸಮೀಕ್ಷೆ ನಡೆಸಿ ಸರ್ಕಾರದ ಮಾರ್ಗಸೂಚಿಯನ್ವಯ ಪರಿಹಾರ ವಿತರಣೆ ಮಾಡಲಾಗಿದೆ. ಕೆಲವರ ಪಡಿತರ ಚೀಟಿಗಳು ದಾಖಲಾತಿಗಳಿಗೆ ಹೊಂದಾಣಿಕೆಯಾಗದ ಕಾರಣ ಸಮಸ್ಯೆಯಾಗಿದೆ ಎಂದರು.

ತಾಲ್ಲೂಕಿನಲ್ಲಿ 2,998 ಕುಸಿದ ಮನೆಗಳನ್ನು ಸಿ ವಿಭಾಗದಲ್ಲಿ ಗುರುತಿಸಲಾಗಿದೆ. ಅವುಗಳಲ್ಲಿ ಕೇವಲ 167 ಮನೆಗಳ ಮಾಹಿತಿ ಮಾತ್ರ ಆನ್‌ಲೈನ್‌ಲ್ಲಿ ಅಪ್‌ಲೋಡ್‌ ಆಗಿವೆ. ಇನ್ನುಳಿದ ಮನೆಗಳ ಮಾಲೀಕರು ಆದಷ್ಟು ಬೇಗ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ಸೂಚಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ, ದೇವರ ಗುಡಿಹಾಳ, ಪರಸಾಪುರ, ತಿಮ್ಮಸಾಗರದಲ್ಲಿ ವಾಲ್ಮೀಕಿ ಸಭಾ ಭವನ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ನೂಲ್ವಿ, ಅದರಗುಂಚಿ ಗ್ರಾಮದಲ್ಲಿ ತಾಂತ್ರಿಕ ಕಾರಣಗಳಿಂದ ಕೈಗೊಂಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಅಧಿಕಾರಿ ಎಸ್‌.ಟಿ. ಗೌಡರ್ ಹೇಳಿದರು.

ಕೆಲವು ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಐದಾರು ವರ್ಷಗಳಾದರೂ ಮುಕ್ತಾಯವಾಗಿಲ್ಲ. ಕೇಳಿದರೆ ತಾಂತ್ರಿಕ ತೊಂದರೆ, ಹಣ ಮಂಜೂರಾಗಿಲ್ಲ ಎನ್ನುತ್ತೀರಿ? ಹಣವೇ ಮಂಜೂರಾಗಿಲ್ಲ ಎಂದಾದರೆ, ಕಾಮಗಾರಿಯ ಅಂದಾಜು ಪಟ್ಟಿ ಯಾಕೆ ತಯಾರಿಸುತ್ತೀರಿ? ಅದನ್ನು ಕೈಬಿಡಿ. ಸಾರ್ವಜನಿಕರಲ್ಲಿ ನಾವೇ ಗೊಂದಲ ಸೃಷ್ಟಿಸಿದಂತಾಗುತ್ತದೆ ಎಂದು ಉಪಾಧ್ಯಕ್ಷ ಗುರಪಾದಪ್ಪ ಕಮಡೊಳ್ಳಿ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚನ್ನಮ್ಮ ಗೊರ್ಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ಹಣಾ ಅಧಿಕಾರಿ ಎಂ.ಎಂ. ಸವದತ್ತಿ, ಸದಸ್ಯರಾದ ಬಸಪ್ಪ ಬೀರಣ್ಣವರ, ಫಕ್ಕೀರಪ್ಪ ಚಾಕಲಬ್ಬಿ, ದಾವಲ್‌ಸಾಬ್‌ ಕಾಶಿಮ್‌ಸಾಬ್‌, ಫಕ್ಕೀರಪ್ಪ ಹುಲ್ಲುಂಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT