ಸೋಮವಾರ, ಸೆಪ್ಟೆಂಬರ್ 27, 2021
21 °C

ಧಾರವಾಡ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ನೂರರ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಬ್ರಿಟಿಷರ ವಿರುದ್ಧ ದೇಶದಾದ್ಯಂತ ನಡೆದ ಅಸಹಾಕಾರ ಚಳವಳಿಯ ಸಂದರ್ಭದಲ್ಲಿ 1921 ಜುಲೈ 1ರಂದು ನಗರದ ಜಕಣಿಬಾವಿ ಬಳಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡಿದ ದಾಳಿ ನಡೆಸಿದ ಪರಿಣಾಮ ಮೂವರು ರಾಷ್ಟ್ರಭಕ್ತರು ಹುತಾತ್ಮರಾದರು. ಆ ನೆನಪಿಗೆ ಈಗ ನೂರು ವರ್ಷ.

ಜಕಳಿ ಬಾವಿ ಬಳಿ ಇದ್ದ ಸಾರಾಯಿ ಅಂಗಡಿ ಎದುರು ಪಿಕೆಟಿಂಗ್ ಮಾಡುತ್ತಿದ್ದ ಖಿಲಾಫತ್ ಕಾರ್ಯಕರ್ತರಾದ ಮಲ್ಲಿಕಸಾಬ್ ಮರ್ದಾನ ಸಾಬ್, ಗೌಸುಸಾಬ್ ಖಾದರ್ ಸಾಬ್, ಅಬ್ದುಲ್ ಗಫಾರ್ ಚೌಕಥಾಯಿ ಎಂಬ ಮೂವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟರು. ಅವರ ನೆನಪಿಗಾಗಿ ಇಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷ ಇಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

‘1920ರಲ್ಲಿ ಭಾರತೀಯರ ಸ್ವಾತಂತ್ರ್ಯದ ಕೂಗು ಬ್ರಿಟಿಷರ ನಿದ್ದೆಗೆಡಿಸಿತ್ತು. ಮಹಾತ್ಮಾ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಅಸಹಾಕಾರ ಆಂದೋಲನ ಹೊಸತೊಂದು ಶಕ್ತಿಯಾಗಿ ಸಂಗ್ರಾಮದ ಕಿಚ್ಚು ಹೆಚ್ಚಿಸಿತ್ತು. ಎಲ್ಲೆಡೆ ಪಿಕೆಟಿಂಗ್‌ಗಳು ನಡೆಯುತ್ತಿದ್ದವು. ಪತ್ರಿಕೆಗಳೂ ಉಗ್ರವಾಗಿ ಬರೆಯುತ್ತಿದ್ದವು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪೇಂಟರ್‌ ದಬ್ಬಾಳಿಕೆ ಆರಂಭಿಸಿದ್ದರು. ಪಿಕೆಟಿಂಗ್ ಸಂಬಂಧಿಸಿದಂತೆ ಇಬ್ಬರು ಖಿಲಾಫತ್ ಸ್ವಯಂ ಸೇವಕರಿಗೆ ಆರು ತಿಂಗಳ ಶಿಕ್ಷೆ ವಿಧಿಸಿತು. ಅದರ ವಿರುದ್ಧ ಪ್ರತಿಭಟನಾರ್ಥವಾಗಿ 1921ರ ಜುಲೈ 1ರಂದು ನಗರದಲ್ಲಿ ಸತ್ಯಾಗ್ರಹ ಆರಂಭಗೊಂಡಿದ್ದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ’ ಎಂದು ಅಡಿಕಿ ಓಣಿಯ ಉದಯ ಯಂಡಿಗೇರಿ ತಿಳಿಸಿದರು.

‘ಆಗ ಸಾರಾಯಿ ಅಂಗಡಿ ಸುಡಲು ಯತ್ನಿಸದರು, ದೊಂಬಿ ಮಾಡಿದರು ಎಂದು ಆರೋಪ ಹೊರಿಸಿದ ಪೊಲೀಸರು, ಗೋಲಿಬಾರ್ ನಡೆಸಿ ಮೂವರನ್ನು ಕೊಂದರು. ಇದರಲ್ಲಿ 39 ಜನರಿಗೆ ಗಾಯವಾಯಿತು. ಅಂದು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದ ಶಿವಲಿಂಗಯ್ಯ ಲಿಂಬೆಣ್ಣದೇವರಮಠ ಅವರಿಗೆ ಹೊಟ್ಟೆಗೆ ಗಂಡು ತಗುಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಕುರಿತು ಅಬ್ಬಾಸ್ ತಯಬ್ಜಿ, ಭವಾನಿ ಶಂಕರ್ ನಿಯೋಗಿ ಮತ್ತು ಎಸ್‌.ಎಸ್.ಸಟ್ಲೂರ್ ಅವರನ್ನು ಒಳಗೊಂಡ ವಿಚಾರಣಾ ಸಮಿತಿಯನ್ನು ಅಖಿಲ ಭಾರತ ಕಾಂಗ್ರೆಸ್ ನೇಮಿಸಿತು. ಈ ಘಟನೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿತು’ ಎಂದರು.

‘ಪ್ರಕರಣ ನಂತರ ಲಾಲಾ ಲಜಪತ್ ರಾಯ್ ಅವರು ನಗರಕ್ಕೆ ಬಂದು ಬಂಧಿತರನ್ನು ಭೇಟಿ ಮಾಡಿ ಧೈರ್ಯ ಹೇಳಿದರು. ಬಂಧಿತರಲ್ಲಿ 6ರಿಂದ 7 ಜನ ಪತ್ರಕರ್ತರೇ ಇದ್ದರು. ಜಲಿಯನ್‌ವಾಲಾ ದುರಂತಕ್ಕೆ ಕಾರಣರಾದ ಡೈಯರ್ ಜೊತೆ ಪೇಂಟರ್ ಹೋಲಿಕೆ ಮಾಡಿ ಪತ್ರಿಕೆಗಳು ಬರೆದವು. ಈ ಪ್ರಕರಣದಲ್ಲಿ ಹುತಾತ್ಮರಾದ ಮೂವರ ಸ್ಮರಣೆಗಾಗಿ ದೇಶದ 25ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಜಕಣಿ ಬಾವಿ ಬಳಿ ಸ್ಮಾರಕ ನಿರ್ಮಿಸಿತು. ಪ್ರತಿ ವರ್ಷದ ಜುಲೈ 1ರಂದು ಹುತಾತ್ಮರನ್ನು ನೆನೆಯುವ ಕಾರ್ಯ ತಪ್ಪದೇ ನಡೆಯುತ್ತಾ ಬಂದಿದೆ’ ಎಂದು ಉದಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು