ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ: ಗೆಲುವಿನ ಫುಳಕ; ಆನಂದದ ಕಣ್ಣೀರು

ಫಲಿತಾಂಶಕ್ಕೆ ಕಾತರದಿಂದ ಕಾದ ಅಭ್ಯರ್ಥಿಗಳು, ಕಾರ್ಯಕರ್ತರು
Last Updated 7 ಸೆಪ್ಟೆಂಬರ್ 2021, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ಬೆಳಿಗ್ಗೆಯಿಂದ ಕುತೂಹಲ ಮನೆಮಾಡಿತ್ತು.

ಯಾರು ಗೆಲ್ಲುತ್ತಾರೆ? ಯಾವ ಪಕ್ಷಕ್ಕೆ ಬಹುಮತ? ಎನ್ನುವ ಚರ್ಚೆ ಅಭ್ಯರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಜೋರಾಗಿ ನಡೆಯುತ್ತಿತ್ತು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುವ ಮೊದಲೇ ನೂರಾರು ಜನ ವಿಶ್ವವಿದ್ಯಾಲಯದ ಮುಂಭಾಗದಲ್ಲಿ ನೆರೆದಿದ್ದರು. ಜಿಲ್ಲಾಡಳಿತದಿಂದ ಪಾಸ್‌ ಪಡೆದವರಿಗೆ ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತಿತ್ತು.

ಎಣಿಕೆ ಆರಂಭವಾದ ಒಂದು ತಾಸಿನಲ್ಲೇ ಒಂದಾದ ಮೇಲೊಂದು ಫಲಿತಾಂಶ ಬರುತ್ತಿದ್ದಂತೆ ಗೆಲುವು ಪಡೆದ ಅಭ್ಯರ್ಥಿಗಳು ಸಂಭ್ರಮಿಸಿದರು. ಸೋಲು ಕಂಡವರು ನಿರಾಸೆಯಿಂದ ಹೊರನಡೆದರು.

ಕಣ್ಣೀರಾದ ಅಸುಂಡಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಕ್ಷತಾ ಅವರು ಗೆಲುವು ಪಡೆಯುತ್ತಿದ್ದಂತೆ, ಅವರ ಪತಿ ಮೋಹನ ಅಸುಂಡಿ ಮತ ಎಣಿಕೆ ಕೇಂದ್ರದಿಂದ ಸಂತೋಷದಿಂದ ಕಣ್ಣೀರು ಹಾಕಿತ್ತಲೇ ಹೊರಬಂದರು. ತಮ್ಮ ಆಪ್ತರಿಗೆ ಆಲಿಂಗನ ಮಾಡಿ ಖುಷಿ ಹಂಚಿಕೊಂಡರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ ‘ರಾಷ್ಟ್ರೀಯ ಪಕ್ಷಗಳನ್ನು ಎದುರು ಹಾಕಿಕೊಂಡು ಪತ್ನಿಯನ್ನು ಕಣಕ್ಕಿಳಿಸಿದ್ದರಿಂದ ಸಾಕಷ್ಟು ಒತ್ತಡವಿತ್ತು. ಗೆಲ್ಲಲೇಬೇಕಾದ ಸವಾಲು ಕೂಡ ಇತ್ತು. ಅತ್ಯಂತ ಕಷ್ಟದ ಸಮಯದಲ್ಲಿ ಕೈ ಹಿಡಿದ ಕ್ಷೇತ್ರದ ಮತದಾರರಿಗೆ ಋಣಿ’ ಎಂದು ಭಾವುಕರಾದರು.

ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ರೂಪಾ ಶೆಟ್ಟಿ ಭಾವುಕರಾಗಿ ಆನಂದ ಭಾಷ್ಪ ಸುರಿಸುತ್ತಾ ಎಣಿಕೆ ಕೇಂದ್ರದಿಂದ ಹೊರಬಂದರು. ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡರು.

‘ವಾರ್ಡ್‌ ಜನ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ. ನಂಬಿಕೆಯಿಟ್ಟು ಅವಕಾಶ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗಿದೆ’ ಎಂದು ಕಣ್ಣೀರಾದರು.

ಗಾಳಿಗೆ ತೂರಿದ ಕೋವಿಡ್‌ ನಿಯಮ

ತಮ್ಮ ನೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ರಸ್ತೆ ಮೇಲೆ ಪಟಾಕಿ ಸಿಡಿಸಿ, ಬಣ್ಣ ಎರಚಿ ಸಂಭ್ರಮಿಸಿದರು. ಕೆಲವರು ಬೈಕ್‌ ರ್‍ಯಾಲಿ ಕೂಡ ಮಾಡಿದರು. ಈ ವೇಳೆ ಬಹಳಷ್ಟು ಜನ ಮಾಸ್ಕ್‌ ಧರಿಸಿರಲಿಲ್ಲ. ಅಂತರದ ಪಾಲನೆಯಂತೂ ಆಗಲೇ ಇಲ್ಲ.

ಮತ ಎಣಿಕೆ ಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ಸೂಚಿಸುತ್ತಿದ್ದರು. ಇದರ ಬಗ್ಗೆ ಅವರು ನಿಗಾ ವಹಿಸಿದ್ದರು. ಆದರೆ ಹೊರಗಡೆ ಮಾತ್ರ ಬಹುತೇಕರು ಕೋವಿಡ್‌ ನಿಯಮ ಪಾಲನೆ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT