ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜಿಲ್ಲೆಯ ಏಳು ಕೇಂದ್ರಗಳಲ್ಲಿ ಇಂದು ಕೋವಿಡ್ ಲಸಿಕೆ

ನಗರದ ಕಿಮ್ಸ್‌ನಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ
Last Updated 16 ಜನವರಿ 2021, 7:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್ ತಡೆಯಲು ಶನಿವಾರ ದೇಶದಾದ್ಯಂತ ಪ್ರಾರಂಭವಾದ ಲಸಿಕಾಕರಣ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಚಾಲನೆ ದೊರೆಯಿತು.

ನವದೆಹಲಿಯ ನಿರ್ಮಾಣ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣವನ್ನು ವರ್ಚುವಲ್ ವೇದಿಕೆಯ ಮೂಲಕ ವೀಕ್ಷಿಸಲಾಯಿತು.

ಬೃಹತ್, ಮಧ್ಯಮ ಕೈಗಾರಿಕೆ ,ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕಿಮ್ಸ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಹೋರಾಡಲು ಲಸಿಕಾಕರಣಕ್ಕೆ ಚಾಲನೆ ದೊರೆತಿದೆ. ಕೊರೊನಾ ವೈರಾಣು ಮೊದಲ ಬಾರಿಗೆ ದೇಶದಲ್ಲಿ ಕಾಣಿಸಿಕೊಂಡ ಕೂಡಲೇ ಲಾಕ್ ಡೌನ್ ಮೂಲಕ ಈ ಬೃಹತ್ ದೇಶದಲ್ಲಿ ಜನಜಾಗೃತಿ ಮೂಡಿಸಲಾಯಿತು. ದೇಶದ ವೈದ್ಯಕೀಯ ವಿಜ್ಞಾನಿಗಳು ಈ ಕಾರ್ಯವನ್ನು ಸವಾಲಿನಂತೆ ಸ್ವೀಕರಿಸಿ ಲಸಿಕೆ ಅಭಿವೃದ್ಧಿ ಪಡಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಸಾವಿರ ಕೋವಿಡ್ ಲಸಿಕೆಗಳು ಬಂದಿವೆ. 25,366 ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರನ್ನು ಲಸಿಕಾಕರಣಕ್ಕೆ ಗುರುತಿಸಲಾಗಿದೆ. ಮೊದಲ ದಿನ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಸುಮಾರು 560 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಸೋಮವಾರದಿಂದ ಜಿಲ್ಲೆಯ 70 ಕೇಂದ್ರಗಳಲ್ಲಿ ಲಸಿಕಾಕರಣ ನಡೆಯಲಿದೆ.ಚುನಾವಣೆ ಕರ್ತವ್ಯದ ಮಾದರಿಯಲ್ಲಿ ಅತ್ಯಂತ ಶಿಸ್ತಿನಿಂದ ಈ ಪ್ರಕ್ರಿಯೆ ನಡೆಯಲಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ವಯೋಮಾನದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಬಂದ ಬಳಿಕ ಕೋವಿಡ್ ಶೂನ್ಯಕ್ಕೆ ಇಳಿಯುವವರೆಗೂ ಸುರಕ್ಷತಾ ಕ್ರಮಗಳು ಮುಂದುವರೆಯಬೇಕು ಎಂದರು.

ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ,ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಅಪ್ಪಾಸಾಹೇಬ ನರಹಟ್ಟಿ, ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ, ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ಗೀತಾ ಬಾಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ , ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಎಸ್.ಎಂ.ಹೊನಕೇರಿ,ಡಾ.ಜಿ.ಬಿ.ಸತ್ತೂರ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಚವ್ಹಾಣ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಸಮುದಾಯ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಲೋಕರೆ, ಉಪವೈದ್ಯಕೀಯ ಅಧೀಕ್ಷಕರಾದ ಡಾ.ರಾಜಶೇಖರ ದ್ಯಾಬೇರಿ, ಡಾ.ಎಸ್.ವೈ.ಮುಲ್ಕಿಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡ ಪಾಟೀಲ, ಹುಬ್ಬಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಎಸ್.ಹಿತ್ತಲಮನಿ , ತಹಶೀಲ್ದಾರ್ ಶಶಿಧರ ಮಾಡ್ಯಾಳ, ಜಿಲ್ಲಾ ಎನ್ ಐ ಸಿ ಅಧಿಕಾರಿ ಮೀನಾಕುಮಾರಿ ಪಾಲ್ಗೊಂಡಿದ್ದರು.

ಶ್ರೀನಿವಾಸ ಬಳ್ಳಾರಿ ಹಾಗೂ ಡಾ.ನಾರಾಯಣ ಹೆಬಸೂರ ಅವರಿಗೆ ಮೊದಲ ಲಸಿಕೆ
ಮೊದಲ ಹಂತದಲ್ಲಿ ಲಸಿಕಾಕರಣಕ್ಕೆ ಪ್ರಥಮ ಫಲಾನುಭವಿಯಾಗಿ ಗುರುತಿಸಿದ ಕಿಮ್ಸ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಬಳ್ಳಾರಿ ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ.ನಾರಾಯಣ ಹೆಬಸೂರ ಅವರಿಗೆ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಲಸಿಕೆ ನೀಡಲಾಯಿತು.

ಲಸಿಕೆ ಪಡೆದವರ ಅಭಿಪ್ರಾಯಗಳು

ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ವಿರುದ್ಧ ಹೋರಾಡಿದ್ದೇವೆ. ಇದೀಗ ಮೊದಲ ಹಂತದಲ್ಲಿಯೇ ಲಸಿಕೆ ನೀಡಲು ನಮ್ಮನ್ನು ಗುರುತಿಸಿರುವುದು ಸಂತಸ ತಂದಿದೆ. ಮೊದಲಿಗೆ ಒಂದು ಸಣ್ಣ ಮಟ್ಟದ ಆತಂಕ ಇತ್ತು. ಕಿಮ್ಸ್ ವೈದ್ಯರು ತಿಳಿವಳಿಕೆ ನೀಡಿ ,ಭರವಸೆ ನೀಡಿದರು. ಲಸಿಕೆ ಪಡೆದು ಅರ್ಧಗಂಟೆಯಾಗಿದೆ ಯಾವುದೇ ಸಮಸ್ಯೆ ಇಲ್ಲ ಆರಾಮವಾಗಿದ್ದೇನೆ .
-ಶ್ರೀನಿವಾಸ ಬಳ್ಳಾರಿ, ಹುಬ್ಬಳ್ಳಿ ಕಿಮ್ಸ್ ನಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಹೊರಗುತ್ತಿಗೆ ನೌಕರ

*
ಲಸಿಕೆಯು ಕೊರೊನಾ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಂಪೂರ್ಣ ಪೂರಕವಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಾತೃ ಸಂಸ್ಥೆಯಲ್ಲಿಯೇ ಲಸಿಕೆ ಪಡೆದಿರುವುದು ಹೆಮ್ಮೆ ಮೂಡಿಸಿದೆ.ವೈದ್ಯನಾಗಿ ಸ್ವತಃ ಲಸಿಕೆ ಹಾಕಿಸಿಕೊಂಡಾಗ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಬರಲಿದೆ ಆದ್ದರಿಂದ ಸ್ವ ಇಚ್ಛೆಯಿಂದ ಇಂದು ಲಸಿಕೆ ಹಾಕಿಸಿಕೊಂಡಿರುವೆ.
-ಡಾ.ನಾರಾಯಣ ಹೆಬಸೂರ, ಪ್ರಾಧ್ಯಾಪಕರು, ಶಸ್ತ್ರಚಿಕಿತ್ಸೆ ವಿಭಾಗ ಕಿಮ್ಸ್, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT