ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಂತ್ರಜ್ಞಾನದ ಸ್ಪರ್ಶ: ಸಚಿವೆ ಜೊಲ್ಲೆ

ಹುಬ್ಬಳ್ಳಿಯಲ್ಲಿ ಅಂಧ ಮಕ್ಕಳ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
Last Updated 21 ಸೆಪ್ಟೆಂಬರ್ 2019, 10:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ನನ್ನ ಇಲಾಖೆಗೆ ಹೊಸ ಸ್ಪರ್ಶ ನೀಡಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕವೂ ಸಾರ್ವನಿಕರಿಂದ ಸಲಹೆ ಸ್ವೀಕರಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರು ಹೇಳಿದರು.

ಆನಂದನಗರದ ಮೇದಾರ ಪ್ಲಾಟ್‌ನಲ್ಲಿ ₹2.82 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಂಧಮಕ್ಕಳ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಗವಿಕಲರಿಗೆ ಅನುಕಂಪ ತೋರುವ ಬದಲು, ಅವರಿಗೆ ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಬೇಕು’ ಎಂದರು.

‘1955ರಲ್ಲಿ ಬಾಂಬೆ ಪ್ರೆಸಿಡೆನ್ಸಿ ಕಾಲದಲ್ಲಿ ಆರಂಭವಾಗಿ, ಇದೀಗ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿದೆ. ಈ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಶಾಲೆಗೆ ಏನೇ ಸೌಲಭ್ಯಗಳು ಬೇಕಿದ್ದರೂ ಅಧಿಕಾರಿಗಳು ನನ್ನನ್ನು ಸಂಪರ್ಕಿಸಬೇಕು’ ಎಂದು ಹೇಳಿದರು.

6 ಕೋಟಿ ಅಂಗವಿಕಲರು:

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ದೇಶದಾದ್ಯಂತ ಅಂದಾಜು 6 ಕೋಟಿ ಅಂಗವಿಕಲರಿದ್ದಾರೆ. 2016ರಲ್ಲಿ ಕೇಂದ್ರ ಸರ್ಕಾರವು ಅಂಗವಿಕಲರ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 4ಕ್ಕೆ ಏರಿಕೆ ಮಾಡಿದೆ. ಹಿಂದೆ ಕೇವಲ 7 ಮಾತ್ರ ಇದ್ದ ಅಂಗವಿಕಲತೆ ಪ್ರಕಾರವನ್ನು, ನಮ್ಮ ಸರ್ಕಾರ 21ಕ್ಕೆ ಹೆಚ್ಚಿಸಿದೆ’ ಎಂದರು.

‘ಅಂಗವಿಕಲರಿಗೆ ದೇವರ ವಿಶೇಷ ಶಕ್ತಿಯನ್ನು ಕೊಟ್ಟಿದ್ದಾರೆ. ಹಾಗಾಗಿ, ಅವರೆಂದೂ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ತಮ್ಮ ಅಂಗವಿಕಲತೆಯನ್ನು ಮೀರಿ ಬದುಕುವ ಶಕ್ತಿ ಅವರಿಗಿದೆ. ಎಲ್ಲಾ ಇದ್ದವರೇ ಸಣ್ಣ ಕಾರಣಕ್ಕಾಗಿ ಜೀವನ ಕೊನೆಗೊಳಿಸಿಕೊಳ್ಳುತ್ತಾರೆ. ಅಂತಹವರು ಇವರನ್ನು ನೋಡಿ ಕಲಿಯಬೇಕು’ ಎಂದು ಹೇಳಿದರು.

ಆರೂಢ ಶಾಲೆಗೆ ವಾಹನ:

‘ಆರೂಢ ಅಂಗವಿಕಲರ ಶಿಕ್ಷಣ ಸಂಸ್ಥೆಯ ಅಂಧ ಮಕ್ಕಳ ವಸತಿ ಪ್ರೌಢಶಾಲೆಯ ಮಕ್ಕಳ ಓಡಾಟಕ್ಕೆ ₹18 ಲಕ್ಷ ವೆಚ್ಚದ ವಾಹನವನ್ನು ಶೀಘ್ರವೇ ನೀಡಲಾಗುವುದು. ಅಂಗವಿಕಲರ ಶಾಲೆಗೆ ಕೇಂದ್ರ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ‘ಅಂಗವಿಕಲರು ಹಾಗೂ ಅಂಧ ಮಕ್ಕಳು ಸಮಾಜಕ್ಕೆ ಹೊರೆಯಲ್ಲ. ಉತ್ತಮ ಮಾನವ ಸಂಪನ್ಮೂಲವಾಗಬಲ್ಲ ಶಕ್ತಿ ಅವರಿಗಿದೆ. ಸರ್ಕಾರ, ಸಮಾಜ ಹಾಗೂ ಸಂಘ– ಸಂಸ್ಥೆಗಳು ಅವರಿಗೆ ಬೆನ್ನೆಲುಬಾಗಿ ನಿಲ್ಲಬೇಕು’ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಂ. ಅಮರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಅಂಗವಿಕಲರ ಕಲ್ಯಾಣ ಇಲಾಖೆಯ ನಿರ್ದೇಶಕಿ ಕೆ. ಲೀಲಾವತಿ, ನಿವೃತ್ತ ನಿರ್ದೇಶಕ ಜಯವಿಭವ ಸ್ವಾಮಿ, ಶ್ರೀರಾಮುಲು, ಸದಾನಂದ ಬೆಂಡಿಗೇರಿ, ಶಿವಾಚಾರ್ಯ ಸ್ವಾಮೀಜಿ ಇದ್ದರು. ರಂಜನಾ ನಾರಾಯಣ ಬಾದ್ರಿ ಕಾರ್ಯಕ್ರಮ ನಿರೂಪಿಸಿದರು.

ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ 12 ಮಕ್ಕಳು ಪ್ರದರ್ಶಿಸಿದ ಮಲ್ಲಕಂಬ ಸಾಹಸ ಪ್ರದರ್ಶನ ಮೈ ನವಿರೇಳಿಸಿತು.

‘ನನಗೂ ಅಂಗವಿಕಲ ಮಗನಿದ್ದಾನೆ’

‘ಸಚಿವೆಯಾದ ಮೊದಲ ಬಾರಿಗೆ ಅಂಧ ಮಕ್ಕಳ ಸರ್ಕಾರಿ ಶಾಲೆ ಉದ್ಘಾಟಿಸಿರುವುದು ಹಾಲು ಕುಡಿದಷ್ಟು ಸಂತಸ ತಂದಿದೆ. ಯಾಕೆಂದರೆ, ನನಗೂ ಒಬ್ಬ ಅಂಗವಿಕಲ ಮಗನಿದ್ದಾನೆ. ಇದೀಗ, ನನ್ನ ಇಲಾಖೆ ವ್ಯಾಪ್ತಿಯಲ್ಲಿ ಸಾವಿರಾರು ಅಂಗವಿಕಲ ಮಕ್ಕಳಿಗೆ ತಾಯಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಹೇಳಿದರು.

‘ಅಂಗವಿಕಲ ಮಕ್ಕಳ ಪಾಲನೆ ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿದೆ. ನಾನು ಕೂಡ ಅಂಗವಿಕಲ ಮಕ್ಕಳ ಶಾಲೆಯೊಂದನ್ನು ನಡೆಸುತ್ತಿದ್ದೇನೆ. ಹಾಗಾಗಿ, ಅಂಗವಿಕಲ ಶಾಲೆಗಳ ಮತ್ತು ಅಲ್ಲಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT