ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನೋತ್ಸವ ಉದ್ಘಾಟನೆಗೆ ಇಂದು ಹುಬ್ಬಳ್ಳಿಗೆ ಮೋದಿ: ಸಿಂಗಾರಗೊಂಡ ವಾಣಿಜ್ಯ ನಗರಿ

Last Updated 12 ಜನವರಿ 2023, 5:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರೈಲ್ವೆ ಮೈದಾನದಲ್ಲಿ ಜ. 12ರಂದು ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ಸವಕ್ಕೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ಬ್ಯಾನರ್‌, ಕಟೌಟ್‌, ಫ್ಲೆಕ್ಸ್‌ಗಳು ನಗರದಾದ್ಯಂತ ರಾರಾಜಿಸುತ್ತಿವೆ.

ಕಾರ್ಯಕ್ರಮ ನಡೆಯಲಿರುವ ವೇದಿಕೆಯ ಅಕ್ಕಪಕ್ಕ ಎರಡು ಹಾಗೂ ಸಾರ್ವಜನಿಕರ ಗ್ಯಾಲರಿಯಲ್ಲಿ ನಾಲ್ಕು ಬೃಹತ್‌ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಪ್ರಧಾನಿ ಅವರ ವಿಶ್ರಾಂತಿಗೆ ವೇದಿಕೆ ಹಿಂಭಾಗದಲ್ಲಿ ಎರಡು ಪ್ರತ್ಯೇಕ ಕೊಠಡಿ ಸಿದ್ಧಪಡಿಸಲಾಗಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ವೇದಿಕೆ ಎದುರಿನ ಬಲಭಾಗದಲ್ಲಿ ಒಂದು ಸಾವಿರ ಗಣ್ಯರಿಗೆ, ಎಡ ಭಾಗದಲ್ಲಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ಎಂಟು ಸಾವಿರ ಯುವಜನರಿಗೆ ಹಾಗೂ ಪಾಲಿಕೆ ಸದಸ್ಯರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಯುವ ಜನತೆಗೆ ಮೊದಲ ಪ್ರಾಶಸ್ತ್ಯ ನೀಡಿ, ಆಸನಗಳು ಉಳಿದರೆ ಸಾರ್ವಜನಿಕರಿಗೆ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕಲಾ ಪ್ರದರ್ಶನ: ಉದ್ಘಾಟನಾ ಸಮಾರಂಭದ ವೇಳೆ ಧಾರವಾಡ ಕೆಲಗೇರಿಯ ಶ್ರೀ ದುರ್ಗಾದೇವಿ ಜಾನಪದ ಜಗ್ಗಲಗಿ ಮೇಳ, ಸಾಗರದ ಬೂದಿಯಪ್ಪ ಡೊಳ್ಳಿನ ತಂಡ, ಹರ್ಲಾಪುರದ ಜಾನಪದ ಕಲಾವಿದರು, ಶೆರೆವಾಡದ ವೆಂಕಪ್ಪ ಭಜಂತ್ರಿ ಕರಡಿ ಮಜಲು–ಶಹನಾಯಿ ತಂಡ, ಉಡುಪಿಯ ಲಕ್ಷ್ಮೀ ನಾರಾಯಣ ಚಂಡೆ ಮದ್ದಳೆ ತಂಡ, ಮೈಸೂರಿನ ನಗಾರಿ ತಂಡಗಳು ಸಾಂಕೇತಿಕವಾಗಿ ಕಲಾ ಪ್ರದರ್ಶನ ನಡೆಸಲಿವೆ.

ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಸ್ಫೋಟಕ ವಸ್ತುಗಳ ಪತ್ತೆ ದಳದ ಸಿಬ್ಬಂದಿ ಕಾರ್ಯಕ್ರಮ ನಡೆಯುವ ಸ್ಥಳವನ್ನು ಬುಧವಾರ ತಪಾಸಣೆಗೆ ಒಳಪಡಿಸಿದರು. ವೇದಿಕೆ ಮೇಲೆ ಹಾಕಿರುವ ಆಸನಗಳನ್ನು ಹಾಗೂ ಪ್ರಧಾನಿ ವಿಶ್ರಾಂತಿ ಪಡೆಯುವ ಕೊಠಡಿಗಳನ್ನು ಮೆಟಲ್‌ ಡಿಟೆಕ್ಟರ್‌ ಮೂಲಕ ಸೂಕ್ಷ್ಮವಾಗಿ ಪರೀಕ್ಷಿಸಿದರು. ಪೆಂಡಾಲ್‌ ಹಾಗೂ ವೇದಿಕೆ ಸುತ್ತಮುತ್ತ 100ಕ್ಕೂ ಹೆಚ್ಚು ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಹದ್ದಿನ ಕಣ್ಣು ಇಡಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವೇದಿಕೆ ಮೇಲೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಅಗತ್ಯ ಮುನ್ನೆಚ್ಚರಿಕೆ ಕೈಗೊಂಡರು. ಪ್ರಧಾನಿ ಸಂಚರಿಸುವ ಗೋಕುಲ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೂ ಪೊಲೀಸರು ಭದ್ರತೆ ಒದಗಿಸುವ ಕುರಿತು ಪೂರ್ವಾಭ್ಯಾಸ ನಡೆಸಿದರು.

ಕ್ರೀಡಾ ಸಚಿವ ಡಾ. ಕೆ. ನಾರಾಯಣಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್‌ ಕಮಿಷನರ್‌ ರಮನ್‌ ಗುಪ್ತಾ, ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ. ಸೇರಿ ಇತರ ಅಧಿಕಾರಿಗಳು ಮೈದಾನದಲ್ಲಿ ಬೀಡು ಬಿಟ್ಟು, ಸಿಬ್ಬಂದಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು. ಪ್ರಧಾನಿ ವೇದಿಕೆಗೆ ಆಗಮಿಸುತ್ತಿದ್ದಂತೆ ಯಾವೆಲ್ಲ ಶಿಷ್ಟಾಚಾರ ಪಾಲಿಸಬೇಕು ಎನ್ನುವ ಕುರಿತು ತಿಳಿಸಿದರು.

ಸಚಿವ ನಾರಾಯಣಗೌಡ ಪರಿಶೀಲನೆ: ವೇದಿಕೆ ಪೂರ್ವ ಸಿದ್ಧತೆ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಕ್ರೀಡಾ ಸಚಿವ ಡಾ. ನಾರಾಯಣಗೌಡ, ‘ದೇಶದ ವಿವಿಧ ಭಾಗಗಳಿಂದ ಎಂಟು ಸಾವಿರಕ್ಕೂ ಹೆಚ್ಚು ಯುವಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅವರಲ್ಲಿ ಹಾಗೂ ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ತುಂಬಲು ಪ್ರತಿ ಗ್ರಾಮದಲ್ಲೂ ಕ್ರೀಡಾಂಗಣಗಳ ಅವಶ್ಯಕತೆಯಿದ್ದು, ಮೊದಲ ಹಂತದಲ್ಲಿ ₹4 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಸ್ವಾಮಿ ವಿವೇಕಾನಂದರರ 12 ಸಾವಿರಕ್ಕೂ ಹೆಚ್ಚು ಸಂಘಗಳನ್ನು ಸ್ಥಾಪಿಸಲಾಗುವುದು’ ಎಂದು ಹೇಳಿದರು.

ಒಂದುಕಾಲು ಗಂಟೆ ಕಾರ್ಯಕ್ರಮ: ಸಂಜೆ 4ಕ್ಕೆ ಜೆ.ಸಿ. ನಗರದ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಗಣ್ಯರಿಗೆ ಸ್ವಾಗತ ಮತ್ತು ಸನ್ಮಾನದ ನಂತರ ಪ್ರಧಾನಿ ಮೋದಿ ಯುವಜನೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಅನುರಾಗ್ ಠಾಕೂರ್ ತಲಾ ಐದು ನಿಮಿಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಳು ನಿಮಿಷ ಅತಿಥಿ ಭಾಷಣ ಮಾಡಲಿದ್ದಾರೆ. 10 ನಿಮಿಷ ಕೇಂದ್ರಾಡಳಿತ ಹಾಗೂ ವಿವಿಧ ರಾಜ್ಯಗಳ 35 ಕಲಾ ತಂಡಗಳ ಪಥಸಂಚಲನ ನಡೆಯಲಿದೆ. ನಂತರ ಐದು ನಿಮಿಷ ಮಹಾರಾಷ್ಟ್ರದ ಅಹ್ಮದ್‌ನಗರದ ಧೃವ ಗ್ಲೋಬಲ್‌ ಸ್ಕೂಲ್‌ನ 19 ವಿದ್ಯಾರ್ಥಿಗಳು ನೃತ್ಯದ ಮೂಲಕ ಯೋಗ ಪ್ರದರ್ಶನ ನೀಡಲಿದ್ದಾರೆ. ಸಂಜೆ 4.45ರಿಂದ 5.15ರವರೆಗೆ ಪ್ರಧಾನಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

‘ಸಂಚಾರ ನಿರ್ವಹಣೆಗೆ ಬೆಂಗಳೂರು ಪೊಲೀಸರು’: ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ 2,900 ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ವಾಹನಗಳ ಸಂಚಾರ ನಿರ್ವಹಣೆಗೆ ಬೆಂಗಳೂರಿನ ಸಂಚಾರ ಪೊಲೀಸರು ಬಂದಿದ್ದಾರೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ತೊಂದರೆಯಾಗದಂತೆ, ವಾಹನಗಳ ಸಂಚಾರದ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಪ್ರಧಾನಿ ಬರುವ ಮತ್ತು ತೆರಳುವ ಪೂರ್ವದ ಅರ್ಧ ಗಂಟೆ ಮಾತ್ರ ಅವರು ಸಂಚರಿಸುವ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗುತ್ತದೆ’ ಎಂದರು

‘ಪ್ರತಿಭಟನೆಗೆ, ಕಪ್ಪು ಬಟ್ಟೆ ಪ್ರದರ್ಶನಕ್ಕೆ ಅವಕಾಶವಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಕಮಿಷನರ್‌ ಅವರಿಗೆ ಮನವಿ ಸಲ್ಲಿಸಬೇಕು. ಸಮಾರಂಭದ ವೇಳೆ ಯಾರಾದರೂ ಪ್ರತಿಭಟನೆಗೆ ಮುಂದಾದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಮೋದಿ ನೋಡಲು ಸಾರ್ವಜನಿಕರಿಗೆ ಅವಕಾಶ’: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೇರವಾಗಿ ನೋಡಬೇಕೆಂದು ಸಾರ್ವಜನಿಕರು ಇಚ್ಛೆ ವ್ಯಕ್ತಪಡಿಸಿದ್ದರಿಂದ, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೋಂದಣಿ ಮಾಡಿಕೊಂಡ ಯುವಕರಿಗೆ ಮಾತ್ರ ಮೈದಾನದ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗಿನ ರಸ್ತೆಯ ಅಕ್ಕಪಕ್ಕ ಸಾರ್ವಜನಿಕರಿಗೆ ಪ್ರಧಾನಿಯವರನ್ನು ನೋಡಲು ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿಯವರು ಎರಡು–ಮೂರು ಸ್ಥಳಗಳಲ್ಲಿ ಕಾರಿನಿಂದ ಇಳಿದು ಜನರನ್ನು ಭೇಟಿಯಾಗುವ ಸಾಧ್ಯತೆಯಿದೆ’ ಎಂದರು.

ಮುಖಂಡರಾದ ಲಿಂಗರಾಜ ಪಾಟೀಲ, ಸಂತೋಷ ಚವ್ಹಾಣ್‌, ಸಂಜಯ ಕಪಟಕರ, ರವಿ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT