ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರುಸಾವಿರ ಮಠದ ಜಾಗ: ಭೂ ಬಾಡಿಗೆದಾರರ ತೆರವು

Last Updated 21 ಡಿಸೆಂಬರ್ 2019, 9:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಜೆಸಿ ನಗರದ ನೌಕರರ ಭವನದ ಹಿಂಭಾಗದ ಮೂರುಸಾವಿರ ಮಠದ ಎಂಟು ಗುಂಟೆ ಜಾಗದಲ್ಲಿ ಭೂ ಬಾಡಿಗೆ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡಿದ್ದ ಹತ್ತು ಕುಟುಂಬಗಳನ್ನು ಶ್ರೀಮಠದ ಆಡಳಿತ ಮಂಡಳಿ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಸಿತು.

ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ನೇತೃತ್ವದಲ್ಲಿ ಮಠದ ಸಿಬ್ಬಂದಿ ಮನೆಯೊಳಗಿದ್ದ ಸಾಮಾನುಗಳನ್ನು ತೆರವುಗೊಳಿಸಿದರು. ಬಾಗಿಲು ಹಾಕಲಾಗಿದ್ದ ಕೆಲವು ಮನೆಗಳ ಬೀಗ ಒಡೆದು, ತಮ್ಮ ಸುಪರ್ದಿಗೆ ಪಡೆದುಕೊಂಡರು.

ಈ ವೇಳೆ ನಿವಾಸಿಗಳು ಮಠದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು.

‘ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕು. ಇಲ್ಲಿಯೇ ಇರಲು ಅವಕಾಶ ಕೊಟ್ಟರೆ ಜೀವನ ಸಾಗಿಸುತ್ತೇವೆ ಎಂದು ಕಣ್ಣೀರಿಟ್ಟರು.

‘ಹಿಂದಿನ ಜಗದ್ಗುರು ಗಂಗಾಧರೇಶ್ವರ ಸ್ವಾಮೀಜಿ ನಮಗೆ ವಾಸಿಸಲು ಜಾಗ ನೀಡಿದ್ದರು. ಮಠಕ್ಕೆ ಬಾಡಿಗೆ ತುಂಬುತ್ತ ಇಲ್ಲಿಯೇ ಜೀವನ ಸಾಗಿಸಿ ಎಂದಿದ್ದರು. ಈಗ ತೆರವುಗೊಳಿಸಲಾಗುತ್ತಿದೆ’ ಎಂದು ಲಕ್ಷ್ಮಿ ನಾಯಕವಾಲೆ ಹೇಳಿದರು.

'ಎಂಬತ್ತು ವರ್ಷಗಳಿಂದ ಮಠಕ್ಕೆ ಭೂ ಬಾಡಿಗೆ ಹಾಗೂ ಪಾಲಿಕೆಗೆ ಕರ ಪಾವತಿಸುತ್ತ ಬಂದಿದ್ದೇವೆ. ಏಕಾಏಕಿ ಮನೆ ಖಾಲಿ ಮಾಡಿದರೆ ತೊಂದರೆಯಾಗುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಶಕುಂತಲಾ ಬಡಿಗೇರ ಆಗ್ರಹಿಸಿದರು.

‘2019ರ ಜೂನ್ ಒಳಗಾಗಿ ಮೂರುಸಾವಿರ ಮಠಕ್ಕೆ ಜಾಗ ಬಿಟ್ಟುಕೊಡಬೇಕು ಎಂದು 2018ರ ಮೇ ತಿಂಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಆದೇಶ ನೀಡಲಾಗಿತ್ತು. ಮಾನವೀಯತೆ ಹಿನ್ನೆಲೆಯಲ್ಲಿ ಐದು ತಿಂಗಳ ಕಾಲಾವಕಾಶ ನೀಡಿದ್ದೆವು. ಆದರೂ, ಮನೆ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಮೂರುಸಾವಿರ ಮಠದ ವ್ಯವಸ್ಥಾಪಕ ಎ.ಬಿ. ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT