ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಮುನಿ ಹತ್ಯೆ ಪ್ರಕರಣ| ಉತ್ತರ ಪ್ರದೇಶ ಮಾದರಿಯಲ್ಲಿ ಶಿಕ್ಷೆ ವಿಧಿಸಿ: ಮುತಾಲಿಕ್‌

Published 12 ಜುಲೈ 2023, 7:50 IST
Last Updated 12 ಜುಲೈ 2023, 7:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚಿಕ್ಕೋಡಿಯ ಕಾಮಕುಮಾರ ನಂದಿ ಮಹರಾಜರ ಹತ್ಯೆ ಮಾಡಿದ ಮೂವರು ಆರೋಪಿಗಳ ಮನೆಯ ಮೇಲೆ ಬುಲ್ಡೋಜರ್ ಹತ್ತಿಸಿ, ಉತ್ತರ ಪ್ರದೇಶದ ಮಾದರಿಯಲ್ಲಿ ಶಿಕ್ಷೆ ನೀಡಬೇಕು’ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ವರೂರಿನ ನವಗೃಹ ತೀರ್ಥಕ್ಷೇತ್ರದಲ್ಲಿ ಗುಣಧರನಂದಿ ಮಹಾರಾಜರನ್ನು ಮಂಗಳವಾರ ಭೇಟಿ ಮಾಡಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿ ನಾಯಕರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಅವರ ಅಧಿಕಾರದ ಅವಧಿಯಲ್ಲಿ ನಡೆದ ಹಿಂದೂಗಳ ಹತ್ಯೆಗಳ ಪ್ರಕರಣ ಸಿಬಿಐಗೆ ನೀಡಲಾಗಿತ್ತು. ಈವರೆಗೆ ಒಂದೂ ಪ್ರಕರಣಕ್ಕೂ ನ್ಯಾಯಸಿಕ್ಕಿಲ್ಲ. ಇದರಲ್ಲಿ ರಾಜಕೀಯ ಮಾಡದೆ ಬಾಯಿಮುಚ್ಚಿಕೊಂಡು ಇರಬೇಕು’ ಎಂದು ಹೇಳಿದರು.

‘ನಮ್ಮ ಕಾನೂನು ವ್ಯವಸ್ಥೆಯೇ ದುರ್ಬಲ. ವರ್ಷದೊಳಗೆ ಮುನಿಯನ್ನು ಹತ್ಯೆ ಮಾಡಿದ ಮೂವರು ಆರೋಪಿಗಳು ಜಾಮೀನು ಪಡೆದು ಹೊರಗೆ ಬರುತ್ತಾರೆ. ಕಠಿಣ ಶಿಕ್ಷೆಯ ಬದಲು, ಉತ್ತರ ಪ್ರದೇಶದ ಮಾದರಿಯಂತೆ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿ, ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಆಗ ಮಾತ್ರ ಇಂತಹ ಪ್ರಕರಣ ನಡೆಯದಂತೆ ತಡೆಯಬಹುದು. ಕ್ರೌರ್ಯಕ್ಕೆ ಯಾವ ಧರ್ಮ, ಜಾತಿಯೂ ಇಲ್ಲ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂ ವಿರೋಧಿ ವಾತಾವರಣ ಸೃಷ್ಟಿಯಾಗಿರುವುದು ಸತ್ಯ. ಆದರೆ, ಬಿಜೆಪಿ ಅಧಿಕಾರದ ಅವಧಿಯಲ್ಲೂ ಅಂತಹ ವಾತಾವರಣ ಇತ್ತು. ಆಗಲೂ, ಗೋ ಹತ್ಯೆ, ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿವೆ. ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತರ ಜೊತೆ ಗಟ್ಟಿಯಾಗಿ ನಿಂತಿದ್ದರೆ, ಅವರನ್ನು ತಲೆಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದರು. ಕಾರ್ಯಕರ್ತರನ್ನು ನಿರ್ಲಕ್ಷಿಸಿದ ಪರಿಣಾಮ ರಾಜ್ಯದಲ್ಲಿ ಸೋಲುವಂತಾಗಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT