ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಳದಲ್ಲಿ ಹೊಸ ತಳಿಗಳ ನೋಡಾ...

ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳ ಹಲವು ವರ್ಷಗಳ ಸಾಹಸ: ಶೇಂಗಾ, ಸೋಯಾ, ಕಬ್ಬಿನಲ್ಲಿ ಆವಿಷ್ಕಾರದ ಹೆಜ್ಜೆ
Last Updated 19 ಜನವರಿ 2020, 9:57 IST
ಅಕ್ಷರ ಗಾತ್ರ

ಧಾರವಾಡ: ಪ್ರತಿ ವರ್ಷ ನಡೆಯುವ ಕೃಷಿ ಮೇಳದಲ್ಲಿ ಹೊಸ ಬಗೆಯ ತಳಿಗಳನ್ನು ಸಂಶೋಧಿಸಿ ರೈತರಿಗೆ ಪರಿಚಯಿಸುವುದು‌ವಾಡಿಕೆ. ಅದರಂತೆ ಈ ಬಾರಿಯೂ ಕೃಷಿ ವಿಶ್ವವಿದ್ಯಾಲಯ ಏಳುವಿವಿಧ ಬಗೆಯ ಹೊಸ ತಳಿ ಪರಿಚಯಿಸುತ್ತಿದೆ.

ಶೇಂಗಾ ಡಿಎಚ್–256, ಸೋಯಾ ಅವರೆ ಡಿಎಸ್‌ಬಿ–31, ನೆಪಿಯರ್‌ ಸಜ್ಜೆ ಡಿಎಚ್‌ಎನ್‌–15, ಗೋವಿನಜೋಳ ಬಿಆರ್‌ಎಂಎಚ್‌–1, ಹೈಬ್ರಿಡ್‌ ಸಜ್ಜೆ ವಿಪಿಎಂಎಚ್‌–7, ಕಡಲೆ ಡಿಬಿಜಿವಿ–204, ಕಬ್ಬು ಎಸ್‌ಎನ್‌ಕೆ–09211 ಆವಿಷ್ಕಾರಗೊಂಡ ತಳಿಗಳು.

ಕಡಿಮೆ ಅವಧಿ, ಹೆಚ್ಚು ಇಳುವರಿ, ಕೀಟ ಬಾಧೆಯಿಂದ ರಕ್ಷಿಸಿಕೊಳ್ಳುವ ಸಾಮರ್ಥ್ಯ, ಹೆಚ್ಚಿನ ರೋಗ ನಿರೋಧಕ ಶಕ್ತಿ ಸೇರಿದಂತೆ ವಿವಿಧ ಗುಣಗಳನ್ನು ಹೊಂದಿರುವ ಈ ತಳಿಗಳು ರೈತ ಸ್ನೇಹಿಯಾಗಿವೆ. ರೈತರ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿವೆ ಎನ್ನುತ್ತಾರೆ ಕೃಷಿ ವಿ.ವಿ ವಿಜ್ಞಾನಿಗಳು.

‘ಹಲವು ವರ್ಷಗಳ ಸತತ ಶ್ರಮದಿಂದ ಈ ಹೊಸ ತಳಿಗಳನ್ನು ಸಂಶೋಧಿಸಲಾಗಿದೆ’ ಎಂದು ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇಂಗಾ ಡಿಎಚ್–256

ಈ ಬೆಳೆಯನ್ನು 105 ರಿಂದ 110 ದಿನಗಳಲ್ಲಿ ಬೆಳೆಯಬಹುದಾಗಿದೆ. ಮುಂಗಾರು ಮತ್ತು ಹಿಂಗಾರಿನ ಬೆಳೆಯಾಗಿದೆ. ಹೆಕ್ಟೇರಿಗೆ 25 ರಿಂದ 30 ಕ್ವಿಂಟಲ್‌ ಇಳುವರಿ.ಅಧಿಕ ಇಳುವರಿಯ ಗೆಜ್ಜೆ ಶೇಂಗಾ ತಳಿ ಇದಾಗಿದೆ.

ಸೋಯಾ ಅವರೆ ಡಿಎಸ್‌ಬಿ–31

ಇದು ಅಲ್ಪಾವಧಿ ತಳಿಯಾಗಿದ್ದು, ಪ್ರತಿ ಹೆಕ್ಟೇರ್‌ಗೆ 25 ರಿಂದ 30 ಟನ್‌ ಇಳುವರಿ ನೀಡಲಿದೆ. 80 ರಿಂದ 85 ದಿನಗಳ ಕಾಲಾವಧಿಯಲ್ಲಿ ಬೆಳೆಯಲಿದೆ. ಈ ತಳಿಯು ನಾಲ್ಕು ಕಾಳಿನ ಕಾಯಿಗಳನ್ನು ಹೊಂದಿದ ವಿಶಿಷ್ಟ ತಳಿಯಾಗಿದೆ. ತುಕ್ಕು ನಿರೋಧಕ ಶಕ್ತಿಯೂ ಇದು ಹೊಂದಿದೆ.

ನೇಪಿಯರ್‌ ಸಜ್ಜೆ ಡಿಎಚ್‌ಎನ್‌–15

ಇದೊಂದು ಬಹುವಾರ್ಷಿಕ ಬೆಳೆಯಾಗಿದೆ. ರುಚಿಕರ, ಶೇ 8–9 ರಷ್ಟು ಸಸಾರಜನಕದ ಪ್ರಮಾಣ ಒಳಗೊಂಡಿದೆ ಹಾಗೂ ಹೆಚ್ಚು ತಾಪಮಾನವಿರುವ ಪ್ರದೇಶಗಳಿಗೆ ಸೂಕ್ತವಾದ ಬೆಳೆ. ಪ್ರತಿ ಹೆಕ್ಟೇರಿಗೆ 250 ಟನ್ ಇಳುವರಿ ಸಿಗಲಿದೆ.

ಗೋವಿನಜೋಳ ಬಿಆರ್‌ಎಂಎಚ್‌–1

ಈ ತಳಿಯ ಗೋವಿನಜೋಳವನ್ನು 118 ರಿಂದ 120 ದಿನಗಳಲ್ಲಿ ಬೆಳೆಯಬಹುದಾಗಿದ್ದು, ಹೆಕ್ಟೇರ್‌ಗೆ 70 ರಿಂದ 75 ಕ್ವಿಂಟಲ್‌ ಇಳುವರಿ ನೀಡಲಿದೆ. ಉರಿಜಿಂಗಿ ರೋಗಕ್ಕೆ ಮಧ್ಯಮ ನಿರೋಧಕ ಶಕ್ತಿ ಹೊಂದಿದ್ದು, ಕಿತ್ತಳೆ ಬಣ್ಣದ ಕಾಳುಗಳು ಇದರ ವಿಶೇಷ.

ಹೈಬ್ರಿಡ್‌ ಸಜ್ಜೆ ವಿಪಿಎಂಎಚ್‌–7

ಈ ತಳಿಯು ಪ್ರತಿ ಹೆಕ್ಟೇರ್‌ಗೆ 30 ರಿಂದ 32 ಕ್ವಿಂಟಲ್ ಇಳುವರಿ ನೀಡಲಿದೆ. 80 ರಿಂದ 85 ದಿನಗಳ ಕಾವಲಾವಧಿ. ಬದಲಾದ ವಾತಾವರಣಕ್ಕೆ ತಕ್ಕಂತೆ ತಡವಾದ ಬಿತ್ತನೆಗೆ ಅಂತರ ಬೆಳೆ ಪದ್ಧತಿಗೆ ಮತ್ತು ಬಹುಬೆಳೆ ಪದ್ಧತಿಗೆ ಸೂಕ್ತ ತಳಿ.

ಕಡಲೆ ಡಿಬಿಜಿವಿ–204

ಈ ಬೆಳೆಯನ್ನು 95 ರಿಂದ 98 ದಿನಗಳಲ್ಲಿ ಬೆಳೆಯಬಹುದಾಗಿದೆ. ಪ್ರತಿ ಹೆಕ್ಟೇರ್‌ಗೆ 20 ಕ್ವಿಂಟಲ್‌ ಇಳುವರಿ ನೀಡುತ್ತದೆ. ಯಾಂತ್ರೀಕೃತ ಕೊಯ್ಲಿಗೆ ಸೂಕ್ತವಾದ ತಳಿ. ಚಿನ್ನದ ಕಂದು ಬಣ್ಣದ ಮಧ್ಯಮ ಗಾತ್ರದ ಕಾಳುಗಳನ್ನು ಹೊಂದಿದೆ. ಸೊರಗು ಮತ್ತು ಒಣಬೇರು ಕೊಳೆ ರೋಗಕ್ಕೆ ಮಧ್ಯಮ ಸಹಿಷ್ಣುತೆ ಹೊಂದಿದೆ.

ಕಬ್ಬು ಎಸ್‌ಎನ್‌ಕೆ–09211

ಈ ತಳಿಯ ಕಬ್ಬನ್ನು 8 ರಿಂದ 10 ತಿಂಗಳಲ್ಲಿ ಬೆಳೆಯಬಹುದು. ಪ್ರತಿ ಹೆಕ್ಟೇರ್‌ಗೆ 130 ರಿಂದ 140 ಟನ್ ಇಳುವರಿ ಪಡೆಯಬಹುದು. ತಡವಾಗಿ ಹೂ ಬಿಡುವ ಮುಳ್ಳುಗಳಿಲ್ಲದ ತಳಿಯಾಗಿದ್ದು, ಬೇಗನೆ ಕೊಯ್ಲು ಮಾಡಬಹುದಾಗಿದೆ. ಕಬ್ಬು ಮಧ್ಯಮ ದಪ್ಪ ಗಾತ್ರದಾಗಿದ್ದು, ತಿಳಿ ಗುಲಾಬಿ ಹಳದಿ ಬಣ್ಣವನ್ನು ಹೊಂದಿದೆ. ರವದಿ ಸುಲಭವಾಗಿ ಸುಲಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT