ಸಾಹಿತ್ಯ ಪ್ರೇಮಿ ನಿರಂಜನ ವಾಲಿಶೆಟ್ಟರ ಇನ್ನಿಲ್ಲ

ಭಾನುವಾರ, ಮೇ 26, 2019
28 °C
ಸಾವಿನಲ್ಲೂ ಸಾರ್ಥಕತೆ ಮೆರೆದರು, ದೇಹದಾನ ಮಾಡಿದ ವಾಲಿಶೆಟ್ಟರ

ಸಾಹಿತ್ಯ ಪ್ರೇಮಿ ನಿರಂಜನ ವಾಲಿಶೆಟ್ಟರ ಇನ್ನಿಲ್ಲ

Published:
Updated:
Prajavani

ಹುಬ್ಬಳ್ಳಿ: ಡಾ.ಡಿ.ಎಸ್‌. ಕರ್ಕಿ ಅವರ ಹೆಸರಿನಲ್ಲಿ ಸಾಹಿತ್ಯ ವೇದಿಕೆ ಸ್ಥಾಪಿಸಿ ನಿರಂತರವಾಗಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದ ನಿರಂಜನ ವಾಲಿಶೆಟ್ಟರ (80) ಗುರುವಾರ ನಿಧನರಾದರು.

ಅವರಿಗೆ ಪತ್ನಿ ಪೂರ್ಣಿಮಾ, ಪುತ್ರಿ ಪ್ರೀತಿ ಇದ್ದಾರೆ. ಎಂ.ಎಂ. ಜೋಶಿ ಆಸ್ಪತ್ರೆಗೆ ನೇತ್ರದಾನ ಮಾಡಿದ್ದು, ಸಂಜೆ ಐದು ಗಂಟೆಗೆ ಎಸ್‌ಡಿಎಂ ಆಸ್ಪತ್ರೆಗೆ ದೇಹದಾನ ಮಾಡಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಶಾಸಕ ಜಗದೀಶ ಶೆಟ್ಟರ್ ಅವರ ವಿದ್ಯಾಗುರುಗಳು ಆದ ವಾಲಿಶೆಟ್ಟರು ನಗರದ ಬಾಸೆಲ್‌ ಮಿಷನ್‌ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

ನಿರಂಜನ ವಾಲಿಶೆಟ್ಟರ 1939ರ ಮಾರ್ಚ್‌ 31ರಂದು ಬ್ಯಾಡಗಿಯಲ್ಲಿ ಜನಿಸಿದರು. ತಂದೆ ಚಂಬಣ್ಣ ಹತ್ತಿ ವ್ಯಾಪಾರಸ್ಥರು. ತಾಯಿ ಪಾರ್ವತಿಬಾಯಿ. ರಾಣೆಬೆನ್ನೂರು ಮುನಿಸಿಪಲ್‌ ಹೈಸ್ಕೂಲಿನಲ್ಲಿ ಮ್ಯಾಟ್ರಿಕ್‌ ಪಾಸಾಗಿ, ನಂತರ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ 1965ರಲ್ಲಿ ಬಿ.ಎ. ಪಾಸಾಗಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1970ರಲ್ಲಿ ಬಿಇಡಿ ಪದವಿ ಗಳಿಸಿದರು.

ಕಾಲೇಜು ಶಿಕ್ಷಣದ ಜೊತೆಗೆ ಪಾಟೀಲ ಪುಟ್ಟಪ್ಪ ಅವರ ವಿಶ್ವವಾಣಿ ಪತ್ರಿಕೆಯಲ್ಲಿ ಕರಡುಪ್ರತಿ ತಿದ್ದುವ ಕೆಲಸ ಮಾಡಿದ್ದರು. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. 30 ವರ್ಷ ಶಿಕ್ಷಕರಾಗಿ ಕೆಲಸ ಮಾಡಿ 1997ರಲ್ಲಿ ನಿವೃತ್ತಿಯಾದರು.

‘ನಿರಂಜನ ವಾಲಿಶೆಟ್ಟರು ಮೊದಲಿನಿಂದಲೂ ಸಾಹಿತ್ಯದ ಬಗ್ಗೆ ಒಲವು ಹೊಂದಿದ್ದರು. ಸ್ನೇಹಿತರ ಜೊತೆಗೂಡಿ ನಿರಂತರವಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. 2014–15ರಲ್ಲಿ ನಡೆದ ಹುಬ್ಬಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ತಮಗೆ ಸರಿ ಅನಿಸಿದ್ದನ್ನು ನೇರವಾಗಿ ಹೇಳಲು ಅವರು ಹಿಂಜರಿಯುತ್ತಿರಲಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನೆನಪಿಸಿಕೊಂಡರು.

‘ವಾಲಿಶೆಟ್ಟರು ಪ್ರತಿತಿಂಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಕಾವ್ಯವಾಚನ, ವಿಮರ್ಶೆ, ಉಪನ್ಯಾಸ, ಕವನ ಸಂಕಲನ ಬಿಡುಗಡೆ ಹೀಗೆ ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸಾಹಿತ್ಯಾಸಕ್ತರಿಗೆ ಅದು ಜನಪ್ರಿಯ ಕೂಟವಾಗಿರುತ್ತಿತ್ತು. ಯುವಕವಿಗಳಿಗೆ ಪಾಠಶಾಲೆಯಂತೆ ಇತ್ತು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !