ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳ ನವೀಕರಣ | ಸೌಲಭ್ಯವಿದ್ದರೂ ತರಬೇತಿಗೆ ಕೋಚ್‌ ಇಲ್ಲ!

ಸ್ಮಾರ್ಟ್‌ ಸಿಟಿ ಯೋಜನೆಯಡಿ ಪಾಲಿಕೆಯ ಈಜುಕೊಳ ನವೀಕರಣ
Published 21 ಮಾರ್ಚ್ 2024, 5:33 IST
Last Updated 21 ಮಾರ್ಚ್ 2024, 5:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ತಾಪ‍ಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯಲು ಮತ್ತು ಈಜಿನ ಮೋಜಿಗಾಗಿ ಇಲ್ಲಿನ ಮಹಾನಗರ ಪಾಲಿಕೆಯ ಈಜುಕೊಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಗ್ಗೆ ಇಡುತ್ತಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಈಜುಕೊಳವನ್ನು ನವೀಕರಣ ಮಾಡಲಾಗಿದ್ದು, ಶೌಚಾಲಯ, ಶವರ್‌, ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಬೇಬಿ ಈಜುಕೊಳ ಸಹ ಇಲ್ಲಿದೆ.

ಒಂದೆಡೆ ಉತ್ತಮ ಸೌಲಭ್ಯಗಳಿದ್ದರೂ ಇಲ್ಲಿ ತರಬೇತಿ ಪಡೆದ ಕೋಚ್‌ಗಳಿಲ್ಲ. ಹೀಗಾಗಿ ಹೊಸದಾಗಿ ಈಜು ಕಲಿಯಲು ಬರುವವರಿಗಿಂತ ಈಗಾಗಲೇ ಈಜು ಕಲಿತವರು, ವೃತ್ತಿಪರ ಈಜುಪಟುಗಳು ಮಾತ್ರ ಇಲ್ಲಿಗೆ ಬರುತ್ತಾರೆ.

ಕಳೆದ ಫೆಬ್ರುವರಿಯಲ್ಲಿ 1,802 ಜನ ಮತ್ತು ಈ ತಿಂಗಳ 18ರವರೆಗೆ 1,645 ಜನ ಈಜುಕೊಳಕ್ಕೆ ಭೇಟಿ ನೀಡಿದ್ದಾರೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಲಿದೆ ಎನ್ನುತ್ತಾರೆ ಈಜುಕೊಳದ ಸಿಬ್ಬಂದಿ.

ಉತ್ತರ ಕರ್ನಾಟಕ ಭಾಗದಲ್ಲಿ ಡೈವಿಂಗ್ ಮತ್ತು 50 ಮೀ. ಉದ್ದದ ಸೌಲಭ್ಯ ಇರುವ ಏಕೈಕ ಈಜುಕೊಳ ಇದಾಗಿದ್ದು, ಇಲ್ಲಿ ಏಕಕಾಲಕ್ಕೆ ಈಜು ಮತ್ತು ಡೈವಿಂಗ್ ಸ್ಪರ್ಧೆಗಳನ್ನು ಏರ್ಪಡಿಸಬಹುದು. ವಾಟರ್‌ಪೋಲೊ ಸ್ಪರ್ಧೆಯನ್ನು ಸಹ ನಡೆಸಬಹುದು. ಇಲ್ಲಿ ನುರಿತ ಎನ್‌ಐಎಸ್‌ ಕೋಚ್‌ ಮತ್ತು ಡೈವಿಂಗ್‌ ಕೋಚ್‌ಗಳು ಇಲ್ಲದಿರುವುದರಿಂದ ವೃತ್ತಿಪರ ಪಟುಗಳಿಗೆ ತೊಂದರೆಯಾಗುತ್ತಿದೆ.

‘ಈಜುಕೊಳ ನವೀಕರಣಗೊಂಡಿದ್ದರೂ ಇನ್ನೂ ಲೇನ್‌ ಟ್ರ್ಯಾಕ್ ಅಳವಡಿಸಿಲ್ಲ. ಹೀಗಾಗಿ  ಕರ್ನಾಟಕ ವಿ.ವಿಯ ಅಂತರ ಕಾಲೇಜುಗಳ ಈಜು ಸ್ಪರ್ಧೆಯನ್ನು ಖಾಸಗಿ ಈಜುಕೊಳದಲ್ಲಿ ನಡೆಸಬೇಕಾಯಿತು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಪ್ರಾಧ್ಯಾಪಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ತರಗತಿಗಳ ಮಕ್ಕಳಿಗೆ ಈಗಾಗಲೇ ಪರೀಕ್ಷೆ ಮುಗಿದಿದ್ದು, ರಜೆಯೂ ಆರಂಭವಾಗಿದೆ. ಈ ಅವಧಿಯಲ್ಲಿ ಮಕ್ಕಳಿಗೆ ಈಜು ತರಬೇತಿ ಕೊಡಿಸಬೇಕೆಂದರೆ ಪಾಲಿಕೆಯ ಈಜುಕೊಳದಲ್ಲಿ ಅದಕ್ಕೆ ವ್ಯವಸ್ಥೆ ಇಲ್ಲ ಎಂಬುದು ಪಾಲಕರ ದೂರು. 

‘ಇಲ್ಲಿ ಈಜು ತರಬೇತಿಗೆ ಅವಕಾಶ ಇಲ್ಲದಿರುವುದರಿಂದ ಖಾಸಗಿ ಈಜುಕೊಳಕ್ಕೆ ಹೋಗಬೇಕು. ಅಲ್ಲಿ ಹೆಚ್ಚು ಶುಲ್ಕ ಭರಿಸಬೇಕು. ಇಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ’ ಎಂದು ಪಾಲಕ ಚಂದ್ರಶೇಖರ್ ಒತ್ತಾಯಿಸಿದರು.

‘ನಗರದಲ್ಲಿ 15ಕ್ಕೂ ಹೆಚ್ಚು ಖಾಸಗಿ ಈಜುಕೊಳಗಳಿವೆ. ಅಲ್ಲಿ ದುಬಾರಿ ಶುಲ್ಕ ನೀಡಬೇಕು. ಆದರೆ, ಪಾಲಿಕೆಯ ಈಜುಕೊಳದಲ್ಲಿ ಒಂದು ಗಂಟೆಗೆ ಕೇವಲ ₹50 ಶುಲ್ಕ ನಿಗದಿಪಡಿಸಲಾಗಿದೆ. ಇಲ್ಲಿ ಆದಾಯಕ್ಕಿಂತ ಜನರ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು’ ಎಂಬುದು ಪಾಲಕರ ಒತ್ತಾಯ.

ಸ್ವಚ್ಛತೆಗೆ ಕ್ರಮ; ಈಜುಕೊಳವು 12 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ನೀರು ಶುದ್ಧೀಕರಣಕ್ಕಾಗಿ 10 ಎಚ್‌ಪಿ ಸಾಮರ್ಥ್ಯದ ನಾಲ್ಕು ಪಂಪ್‌ಗಳನ್ನು ಅಳವಡಿಸಲಾಗಿದೆ.

ಪ್ರತಿ  ಆರು ತಿಂಗಳಿಗೊಮ್ಮೆ ಈ ನೀರು ಬದಲಾಯಿಸಲಾಗುತ್ತದೆ. ಪ್ರತಿ ದಿನ ಶುದ್ಧೀಕರಣಕ್ಕಾಗಿ 3 ಕೆ.ಜಿ ಕ್ಲೋರಿನ್, 2 ಕೆ.ಜಿ. ಅಲೂಮ್ ಜೆಲ್ ಬಳಸಲಾಗುತ್ತದೆ. ಹೆಚ್ಚು ಜನ ಭೇಟಿ ನೀಡಿದರೆ ಹೆಚ್ಚು ಕ್ಲೋರಿನ್ ಮತ್ತು ಅಲೂಮ್ ಜೆಲ್ ಬಳಸಲಾಗಿತ್ತದೆ ಎನ್ನುತ್ತಾರೆ ಈಜುಕೊಳದ ಸಿಬ್ಬಂದಿ.

ಈಜುಕೊಳದ ವೇಳಾಪಟ್ಟಿ:

ಬೆಳಿಗ್ಗೆ 6.30ರಿಂದ 10.30ರವರೆಗೆ ನಾಲ್ಕು ಬ್ಯಾಚ್‌ ಮತ್ತು ಮಧ್ಯಾಹ್ನ 2ರಿಂದ 4 ಗಂಟೆವರೆಗೆ ಪುರುಷರಿಗೆ ಪ್ರವೇಶ, ಸಂಜೆ 4 ರಿಂದ 6ವರೆಗೆ ಮಹಿಳೆಯರಿಗೆ ಮಾತ್ರ ಪ್ರವೇಶ ಇದೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2ವರೆಗೆ ಸ್ವಚ್ಛತೆ ಕಾರಣಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ.

ಈಜುಕೊಳದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ 11 ಜನ ಸಿಬ್ಬಂದಿ ಇದ್ದು, ನಾಲ್ವು ಜೀವರಕ್ಷಕರಿದ್ದಾರೆ.

ಈಜುಕೊಳದಲ್ಲಿ ಕಾಯಂ ಕೋಚ್‌ಗಳಿಲ್ಲದಿರುವುದು ಗಮನಕ್ಕೆ ಬಂದಿದೆ. ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಅದು ಮುಗಿದ ನಂತರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ನಿರ್ವಹಣೆಗೆ ಶೀಘ್ರ ಟೆಂಡರ್
ದಿನದಿಂದ ದಿನಕ್ಕೆ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಈಜುಕೊಳದ ನಿರ್ವಹಣೆಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಈಜುಕೊಳ ಆವರಣದಲ್ಲಿ ಸ್ವಚ್ಛತೆ ನೀರು ಶುದ್ಧೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಅನುಕೂಲಕ್ಕಾಗಿ ಪಾಲಿಕೆ ಆಯುಕ್ತರ ಜತೆ ಚರ್ಚಿಸಿ ಶೀಘ್ರ ಶಿಬಿರವನ್ನು ಏರ್ಪಡಿಸಲಾಗುವುದು. ಫಕೀರಪ್ಪ ಇಂಗಳಗಿ ಆಯುಕ್ತ ವಲಯ–8

ದೂಳು ನಿವಾರಣೆಗೆ ಕ್ರಮ ಕೈಗೊಳ್ಳಿ’

ಈಜುಕೊಳದ ಪಕ್ಕದಲ್ಲಿಯೇ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ದೂಳಿನ ಸಮಸ್ಯೆ ವಿಪರೀತವಾಗಿದ್ದು, ಇದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಈಜುಪಟುಗಳ ಒತ್ತಾಯ.

‘ಪ್ರತಿ ದಿನ ವಾಟರ್‌ ವ್ಯಾಕ್ಯೂಮ್ ಕ್ಲೀನರ್‌ ಮೂಲಕ ಸ್ವಚ್ಛಗೊಳಿಸಲಾಗುತ್ತಿದೆ. ಆದರೂ ಹೆಚ್ಚಿನ ಪ್ರಮಾಣದಲ್ಲಿ ಬರುವ ದೂಳು ನೀರಿನೊಂದಿಗೆ ಸೇರುತ್ತಿದೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT