ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಪರಿಣಾಮ: ಬಳಸಿದ ವಾಹನಗಳ ಕೇಳೋರಿಲ್ಲ

ಗ್ರಾಹಕರಿಲ್ಲದೆ ಬಿಕೊ ಎನ್ನುತ್ತಿರುವ ಮಾರಾಟ ಸೆಂಟರ್‌ಗಳು
Last Updated 10 ಜುಲೈ 2021, 8:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಬಳಸಿದ ವಾಹನಗಳ ಮಾರಾಟ ಮತ್ತು ಖರೀದಿಯ ತಾಣವಾಗಿದೆ. ಉತ್ತರ ಕರ್ನಾಟಕದಲ್ಲೇ ಬಳಸಿದ ವಾಹನಗಳ ದೊಡ್ಡ ಮಾರುಕಟ್ಟೆ ಎಂಬ ಖ್ಯಾತಿ ಈ ನಗರದ್ದು. ಆದರೆ, ಕೋವಿಡ್ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಬಳಸಿದ ವಾಹನಗಳನ್ನು ಕೇಳುವವರೇ ಇಲ್ಲವಾಗಿದೆ.

ಪ್ರತಿಷ್ಠಿತ ಕಂಪನಿಗಳ ಬಳಿಸಿದ ಕಾರುಗಳು ಹಾಗೂ ಎಲ್ಲಾ ಬಗೆಯ ದ್ವಿಚಕ್ರ ವಾಹನಗಳ ಮಾರಾಟದ ಸೆಂಟರ್‌ಗಳು ನಗರದಲ್ಲಿವೆ. ಹಳೇ ಪಿ.ಬಿ. ರಸ್ತೆ, ಡಾಕಪ್ಪ ವೃತ್ತ ಸೇರಿದಂತೆ ವಿವಿಧೆಡೆ ಇರುವ ಈ ಸೆಂಟರ್‌ಗಳು ಕೋವಿಡ್‌ ವಕ್ಕರಿಸಿದಾಗಿನಿಂದಲೂ ಗ್ರಾಹಕರ ಬರ ಎದುರಿಸುತ್ತಿವೆ. ಇತ್ತೀಚೆಗೆ ಲಾಕ್‌ಡೌನ್ ತೆರವಾಗಿ ಅಂಗಡಿಗಳ ಬಾಗಿಲು ತೆರೆದಿದ್ದರೂ ಗ್ರಾಹಕರ ಸಂಖ್ಯೆ ಬೆರಳೆಣಿಕೆಯನ್ನು ದಾಟಿಲ್ಲ.

ಜನರಲ್ಲಿ ದುಡ್ಡಿಲ್ಲ

‘ಕೋವಿಡ್‌ ಬಂದಾಗಿನಿಂದ ಜನರ ಕೈಯಲ್ಲಿ ಹಣದ ಹರಿವು ಕಡಿಮೆಯಾಗಿದೆ. ಖರೀದಿ ಸಾಮರ್ಥ್ಯವೂ ಕುಗ್ಗಿದೆ. ಮೊದಲ ಅಲೆಯ ಬಳಿಕ, ಮೂರು ತಿಂಗಳು ಚೇತರಿಸಿಕೊಂಡಿದ್ದ ಮಾರಾಟ, ಎರಡನೇ ಅಲೆಯಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಲಾಕ್‌ಡೌನ್ ಸಡಿಲಗೊಂಡರೂ ಚೇತರಿಸಿಕೊಂಡಿಲ್ಲ’ ಎಂದು ಪಿ.ಬಿ. ರಸ್ತೆಯಲ್ಲಿರುವ ಶಕ್ತಿ ಮೋಟಾರ್ಸ್‌ನ ಜಿ. ಗುಂಡೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹಿಂದೆ ವಾರಕ್ಕೆ ಎಂಟತ್ತು ವಾಹನಗಳನ್ನು ಮಾರಾಟ ಮಾಡುತ್ತಿದ್ದೆವು. ಈಗ ಮೂರ್ನಾಲ್ಕು ವಾಹನಗಳು ಮಾರಾಟವಾದರೆ ಹೆಚ್ಚು. ಕೋವಿಡ್‌ ಭಯದಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಹಿಂಜರಿಯುವವರು ಅತಿ ಕಡಿಮೆ ಬಜೆಟ್‌ನ ಕಾರುಗಳಿಗೆ ಹುಡುಕಾಡುತ್ತಿದ್ದಾರೆ. ಬಾಡಿಗೆ, ಕೆಲಸಗಾರರಿಗೆ ಸಂಬಳ ಸೇರಿದಂತೆ ಇತರ ನಿರ್ವಹಣೆಯ ವೆಚ್ಚ ಭರಿಸುವುದು ಸವಾಲಾಗಿದೆ’ ಎಂದು ಹೇಳಿದರು.

ವಾರಾಂತ್ಯವೂ ಗ್ರಾಹಕರಿಲ್ಲ

‘ಬಳಸಿದ ವಾಹನಗಳ ಮಾರುಕಟ್ಟೆಗೆ ವಾರಾಂತ್ಯದಲ್ಲಿ ಬರುವ ಗ್ರಾಹಕರೇ ಹೆಚ್ಚು. ಕುಲಬುರ್ಗಿ, ಬೀದರ್, ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಕಡೆಯಿಂದ ಗ್ರಾಹಕರು ಕಾರು ಖರೀದಿಸಲು ಬರುತ್ತಿದ್ದರು. ಎರಡು ವಾರಗಳಿಂದ ವಾರಾಂತ್ಯದಲ್ಲಿ ಬೆರಳೆಣಿಕೆಯ ಮಂದಿಯೂ ಇತ್ತ ಸುಳಿದಿಲ್ಲ’ ಎಂದು ವಿದ್ಯಾನಗರದ ಅರ್ಬನ್ ಕಾರ್ಸ್ ಷೋರೂಂನ ಮಾರಾಟ ಪ್ರತಿನಿಧಿ ಮಂಜುನಾಥ ಬೇಸರ ವ್ಯಕ್ತಪಡಿಸಿದರು.

‘ಸ್ಕೋಡಾ, ಆಡಿ, ಫೋರ್ಡ್‌ನಂತಹ ಪ್ರತಿಷ್ಠಿತ ಕಾರುಗಳಿಗೆ ಬೇಡಿಕೆ ತಗ್ಗಿದೆ.ವಾಹನಗಳನ್ನು ಮಾರಾಟಕ್ಕೆ ತಂದು ಬಿಡುವವರ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಕಡಿಮೆ ಬಜೆಟ್‌ನಲ್ಲಿ ಸಿಗುವ ಹಾಗೂ ನಿರ್ವಹಣೆ ವೆಚ್ಚ ಕಡಿಮೆ ಇರುವ ಮಾರುತಿ ಕಂಪನಿಗಳ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಬಹುತೇಕರು ₹2 ರಿಂದ ₹3 ಲಕ್ಷದೊಳಗಿನ ಬಜೆಟ್‌ನಲ್ಲಿ ಕಾರು ನೋಡಲು ಬರುತ್ತಾರೆ’ ಎಂದು ಹೇಳಿದರು.

‘ದೂಳು ಒರೆಸಿ ನಿಲ್ಲಿಸೋದು ಕೆಲಸ’

‘ಕೋವಿಡ್‌ನಿಂದಾಗಿ ಬಳಸಿದ ಬೈಕ್‌ಗಳ ಮಾರಾಟ ನೆಲ ಕಚ್ಚಿದೆ. ಲಾಕ್‌ಡೌನ್ ತೆರವಾದರೂ ಉದ್ಯಮ ಚೇತರಿಸಿಕೊಂಡಿಲ್ಲ. ನಿತ್ಯ ವಾಹನಗಳ ದೂಳು ಒರೆಸಿ ನಿಲ್ಲಿಸುವುದೇ ಕಾಯಕವಾಗಿದೆ. ಬಾಡಿಗೆ ಕಟ್ಟುವುದು ಸೇರಿದಂತೆ ಜೀವನ ನಿರ್ವಹಣೆಯೇ ಸವಾಲಾಗಿದೆ’ ಎಂದು ಹಳೇ ಹುಬ್ಬಳ್ಳಿಯ ಡಾಕಪ್ಪ ವೃತ್ತದಲ್ಲಿರುವ ಸಿದ್ಧೇಶ್ವರ ಆಟೊ ಲಿಂಕ್ಸ್‌ ಮಾಲೀಕ ರಾಜು ಅಣ್ಣಿಗೇರಿ ಪರಿಸ್ಥಿತಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT