ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಲು ಸೂಚನೆ

ಲಾಕ್‌ಡೌನ್‌ ಮೇಲೆ ನಿಗಾ ವಹಿಸಲು ನಿರ್ಮಿಸಿರುವ ವಾರ್‌ ರೂಮ್ ಪರಿಶೀಲಿಸಿದ ಶೆಟ್ಟರ್‌
Last Updated 16 ಜುಲೈ 2020, 13:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಲಾಕ್‌ಡೌನ್‌ ಮೇಲೆ ನಿಗಾ ವಹಿಸಲು ಆಧುನಿಕ ತಂತ್ರಜ್ಞಾನ ಬಳಸಿ ಹೊಸೂರಿನ ಬಿ.ಆರ್.ಟಿ.ಎಸ್ ಮುಖ್ಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವಾರ್‌ ರೂಮ್‌ಗೆ ಭೇಟಿ ನೀಡಿ ಮಾತನಾಡಿದ ಅವರು ‘ಲಭ್ಯವಿರುವ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಕೇಂದ್ರಗಳು, ಹಾಸಿಗೆಗಳು, ಅಂಬುಲೆನ್ಸ್‌, ವೈದ್ಯರು ಮತ್ತು ಚಿಕಿತ್ಸಾ ಸೌಕರ್ಯಗಳ ಬಗ್ಗೆ ಜನರಿಗೆ ಮುಕ್ತವಾಗಿ ಗೊತ್ತಾಗಬೇಕು. ಆದ್ದರಿಂದ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಿ’ ಎಂದು ಸೂಚಿಸಿದರು.

ಬಿಆರ್‌ಟಿಎಸ್‌ ಉಪಪ್ರಧಾನ ವ್ಯವಸ್ಥಾಪಕ ಗಣೇಶ ರಾಠೋಡ್ ‘ಅವಳಿ ನಗರಗಳಲ್ಲಿ ಬಿಆರ್‌ಟಿಎಸ್‌ನ 50, ಪೊಲೀಸ್ ಹಾಗೂ ಮಹಾನಗರ ಪಾಲಿಕೆಯ 250 ಸೇರಿ ಒಟ್ಟು 300 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ಕೇಂದ್ರಿಕೃತ ನಿಗಾ ವ್ಯವಸ್ಥೆಗೆ ವಾರ್‌ ರೂಮ್‌ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಕ್ವಾರಂಟೈನ್‌ ಕೇಂದ್ರಗಳು, ಆಸ್ಪತ್ರೆಗಳು, ಸೋಂಕಿತರ ನಿವಾಸದ ವಿಳಾಸ ಮೊದಲಾದ ಮಾಹಿತಿಗಳನ್ನು ಜಿಪಿಎಸ್‌ ಮೂಲಕ ಸುಲಭವಾಗಿ ಗುರುತಿಸಬಹುದು’ ಎಂದು ಸಚಿವರಿಗೆ ವಿವರಿಸಿದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಮಾತನಾಡಿ ‘ಜಿಲ್ಲಾಡಳಿತ ಹೊರಡಿಸುವ ಎಲ್ಲಾ ಸಾರ್ವಜನಿಕ ಪ್ರಕಟಣೆ, ಸುತ್ತೋಲೆ, ಈ ಪಾಸ್, ಟೆಲಿಮೆಡಿಸಿನ್, ಸಹಾಯವಾಣಿ ಸೇರಿದಂತೆ ಅನೇಕ ಸೌಕರ್ಯಗಳನ್ನು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ’ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಆರ್ ದಿಲೀಪ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಬಿ.ಆರ್.ಟಿ.ಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಸ್ಮಾರ್ಟ್ ಸಿಟಿ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್, ಸಿಬ್ಬಂದಿ ಮಂಜುನಾಥ್ ಇದ್ದರು.

ಪರಿಶೀಲನೆ: ಶೆಟ್ಟರ್‌ ಅವರು ಗೋಕುಲ ರಸ್ತೆ, ಅಕ್ಷಯ ಪಾರ್ಕ್‌, ಸಿದ್ಧಾರೂಢ ಮಠ ನಗರ, ಹೆಗ್ಗೇರಿ, ಇಂಡಿ ಪಂಪ್, ಹಳೇ ಹುಬ್ಬಳ್ಳಿ, ನ್ಯೂ ಇಂಗ್ಲಿಷ್‌, ಚಿತ್ರಕಾರ ಓಣಿ, ದುರ್ಗದ ಬೈಲ್‌ನಲ್ಲಿ ಸುತ್ತಾಡಿ ಲಾಕ್‌ಡೌನ್‌ ಸ್ಥಿತಿ ಪರಿಶೀಲಿಸಿದರು.

ಹಾಸಿಗೆ ಸೌಲಭ್ಯ ಹೆಚ್ಚಿಸಲು ನಿರ್ದೇಶನ

ಸೋಂಕಿತರ ಸಂಖ್ಯೆಗಳಿಗೆ ಅನುಗುಣವಾಗಿ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಕೇಂದ್ರ, ಐಸಿಯು ಮತ್ತು ವೆಂಟಿಲೇಟರ್‌ಗಳ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಶೆಟ್ಟರ್‌ ಹೇಳಿದರು.

ನಗರದ ಸರ್ಕಿಟ್‌ ಹೌಸ್‌ನಲ್ಲಿ ಜಿಲ್ಲಾಧಿಕಾರಿ, ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌, ಪಾಲಿಕೆ ಆಯುಕ್ತರ ಜೊತೆ ಸಭೆ ನಡೆಸಿದ ಅವರು ‘ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಲಾಗಿದ್ದು, ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಕೈಗಾರಿಕೆ, ವಾಣಿಜ್ಯ, ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವ ವಹಿವಾಟಿಗೂ ಅವಕಾಶ ಕೊಡಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಬೇಕು’ ಎಂದರು.

ಪಾಲಿಕೆಯಿಂದ ಸಹಾಯವಾಣಿ ಆರಂಭ

ಜಿಲ್ಲೆಯಲ್ಲಿ ಕೋವಿಡ್ -19 ನಿರ್ವಹಣೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ವತಿಯಿಂದ 24X7 ಸಹಾಯವಾಣಿ ಆರಂಭಿಸಲಾಗಿದೆ.

ಸಾರ್ವಜನಿಕರ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ತ್ವರಿತಗತಿಯಲ್ಲಿ ನೆರವಾಗಲು ಸಹಾಯವಾಣಿ ಕೆಲಸ ಮಾಡಲಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು 0836-2351955, ಮೊ. 9141051611 ಅಥವಾ covid19.hdmc@gmail.com ಮೇಲ್‌ಗೆ ಮಾಹಿತಿ ನೀಡಬಹುದು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT