ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಎನ್‌ಆರ್‌ಎಲ್‌ಎಂ: ಐದು ತಿಂಗಳಿಂದ ಸಂಬಳವೇ ಇಲ್ಲ

ಎನ್‌ಆರ್‌ಎಲ್‌ಎಂ: ಹೊರಗುತ್ತಿಗೆ ನೌಕರರ ಬವಣೆ
Published 14 ಆಗಸ್ಟ್ 2024, 5:19 IST
Last Updated 14 ಆಗಸ್ಟ್ 2024, 5:19 IST
ಅಕ್ಷರ ಗಾತ್ರ

ಧಾರವಾಡ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಹೊರಗುತ್ತಿಗೆ ನೌಕರರಿಗೆ ಐದು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ಸಂಬಳಕ್ಕಾಗಿ ಈ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿಗೆ ಅಲೆಯುವಂತಾಗಿದೆ.

ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ (ಟಿಪಿಎಂ), ವಲಯ ಮೇಲ್ವಿಚಾರಕರು (ಸಿಎಸ್‌) ಹಾಗೂ ಯುವ ವೃತ್ತಿಪರರು (ವೈಪಿ) ನೌಕರರಿಗೆ ಪಗಾರ ನೀಡಿಲ್ಲ. ಪದವಿ (ಬಿ.ಎ.), ಸ್ನಾತಕೋತ್ತರ ಪದವಿ (ಎಂ.ಎಸ್ಸಿ ಕೃಷಿ...), ಪಿಎಚ್‌.ಡಿ ಮುಗಿಸಿದವರು ಕಾರ್ಯನಿರ್ವಹಿಸುತ್ತಿದ್ದಾರೆ. 15ಕ್ಕೂ ಹೆಚ್ಚು ನೌಕರರು ಇದ್ಧಾರೆ. ಸಂಬಳ ನಂಬಿಯೇ ಬದುಕುತ್ತಿರುವ ಈ ನೌಕರರಿಗೆ ಜೀವನ ನಿರ್ವಹಣೆ ದುಸ್ತರವಾಗಿದೆ. ನೌಕರರೊಬ್ಬರು ಕೆಲಸ ಬಿಟ್ಟು ಪಕ್ಕದ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದ್ದಾರೆ.

‘ಕೃಷಿ ಜೀವನೋಪಾಯ, ಸಮಗ್ರ ಕೃಷಿ ವಿಷಯಗಳನ್ನು ನಿರ್ವಹಿಸುತ್ತೇವೆ. ಐದು ತಿಂಗಳಿನಿಂದ ಸಂಬಳ ನೀಡಿಲ್ಲ. ಅಪ್ರೈಸಲ್‌ ಸಹ ಮಾಡಿಲ್ಲ. ಸಂಬಳವಿಲ್ಲದೆ ‌ಜೀವನ ನಿರ್ವಹಣೆಗೆ ತೊಂದರೆಯಾಗಿದೆ’ ಎಂದು ಯುವ ವೃತ್ತಿಪರರೊಬ್ಬರು ಸಂಕಷ್ಟ ತೋಡಿಕೊಂಡರು.

ವೈಪಿಗೆ ₹35 ಸಾವಿರ, ಟಿಪಿಎಂಗೆ ₹27,800 ಹಾಗೂ ಸಿಎಸ್‌ಗೆ ₹17,665 ಮಾಸಿಕ ಸಂಬಳ ನಿಗದಿಪಡಿಸಲಾಗಿದೆ. ತಾಲ್ಲೂಕು, ಗ್ರಾಮೀಣ ಹಂತದಲ್ಲಿ ಈ ನೌಕರರು ಕಾರ್ಯನಿರ್ವಹಿಸುತ್ತಾರೆ. ಸ್ವ ಉದ್ಯೋಗ, ತರಬೇತಿ, ಯೋಜನೆ ಮಾಹಿತಿ ನೀಡುವುದು ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತಾರೆ.

‘ಪಂಚಾಯಿತಿಗಳಲ್ಲಿನ ಮುಖ್ಯ ಪುಸ್ತಕ ಬರಹಗಾರ (ಎಂಬಿಕೆ), ಸಮುದಾಯ ಸಂಪನ್ಮೂಲ ವ್ಯಕ್ತಿ (ಎಲ್‌ಸಿಆರ್‌ಪಿ), ಕೃಷಿ ಸಖಿ (ಕೆಎಸ್‌), ಪಿಎಸ್‌ (ಪಶು ಸಖಿ) ಕಾರ್ಯಚಟುವಟಿಕೆಗಳ ಉಸ್ತುವಾರಿ ನಿರ್ವಹಿಸುತ್ತೇವೆ. ಸಂಬಳ ಪಾವತಿಸದಿರುವ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ. ಸಾಲ ಮಾಡಿ ಜೀವನ ನಿಭಾಯಿಸುವಂತಾಗಿದೆ’ ಎಂದು ವಲಯ ಮೇಲ್ವಿಚಾರಕರೊಬ್ಬರು ಅಳಲು ತೋಡಿಕೊಂಡರು.

'ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದೆ. ಈಗ ಪಕ್ಕದ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದ್ದೇನೆ. ಧಾರವಾಡದಲ್ಲಿ ಕೆಲಸ ಮಾಡಿದ ಕ್ಷೇತ್ರ ಪ್ರವಾಸ, ತರಬೇತಿ ಭತ್ಯೆ ಮೊದಲಾದವುಗಳನ್ನು ಈವರೆಗೆ ನೀಡಿಲ್ಲ. ಬಿಲ್‌ಗಳನ್ನು ಸಲ್ಲಿಸಿದ್ದೇನೆ’ ಎಂದು ನೌಕರರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT