ಭಾನುವಾರ, ಜೂನ್ 20, 2021
20 °C
ಜನರನ್ನು ಆಕರ್ಷಿಸುತ್ತಿರುವ ನೀರಿನ ಹರಿವಿನ ಸೊಗಸಾದ ನೋಟ

ಅಳ್ನಾವರ: ಉಕ್ಕಿ ಹರಿದ ಇಂದಿರಮ್ಮನ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಎರಡು ದಿನಗಳಿಂದ ಕಿತ್ತೂರು ಭಾಗದಲ್ಲಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ನೀರು ಹೂಲಿಕೇರಿ ಇಂದಿರಮ್ಮನ ಕೆರೆಗೆ ಹರಿದು ಬಂದು ಕೆರೆ ಸಂಪೂರ್ಣ ಭರ್ತಿಯಾಗಿದೆ. ಹೆಚ್ಚುವರಿ ನೀರು ಕಾಲುವೆ ಹಾಗೂ ಕೋಡಿ ಕಟ್ಟೆ ಮೇಲಿಂದ ಹರಿದಿದೆ.

ಕೆರೆ ಭಾನುವಾರ ರಾತ್ರಿ ಕೋಡಿ ಬಿದ್ದಿತ್ತು. ಸೋಮವಾರ ಬೆಳಿಗ್ಗೆ ಕೋಡಿ ಕಟ್ಟೆಯಿಂದ ರಭಸವಾಗಿ ಹರಿದ ನೀರು ಜಲಪಾತದಂತೆ ಕಂಡು ನೋಡುಗರನ್ನು ಆಕರ್ಷಿಸಿತು. ನೀರಿನ ರಭಸಕ್ಕೆ ಹಳೆಯ ಕೋಡಿ ಕಟ್ಟೆದ ಮಧ್ಯಭಾಗ ತುಂಡಾಗಿದೆ. ಸಂಜೆ ವೇಳೆಗೆ ನೀರು ಹರಿವಿನ ಪ್ರಮಾಣ ಕಡಿಮೆಯಾಗಿತ್ತು.

ಕಳೆದ ವರ್ಷ ವ್ಯಾಪಕ ಮಳೆಗೆ ಕೋಡಿ ಕಟ್ಟೆ ಕುಸಿದಿತ್ತು. ಈ ಬಾರಿ ಇಂಥ ಅಪಾಯ ಮರುಕಳಿಸಬಾರದೆಂದು ಕೋಡಿ ಕಟ್ಟೆ ಪಕ್ಕ ತಡೆಗೋಡೆ ನಿರ್ಮಿಸಲಾಗಿದೆ. ಇದರಿಂದ ಅನಾಹುತ ತಪ್ಪಿದೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ನಟೇಶ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಯೋಜನಾಧಿಕಾರಿ ವಿನಾಯಕ ಪಾಲನಕರ ಮಾತನಾಡಿ 'ನೀರಿನ ಮಟ್ಟ ಹಾಗೂ ಒಳಹರಿವಿನ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಅತಿವೃಷ್ಟಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಕೆರೆಯ ಸೊಬಗು ಕಣ್ತುಂಬಿಕೊಳ್ಳಲು ಸಾಕಷ್ಟು ಜನ ಬಂದಿದ್ದರು. ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡು, ಕೆರೆಯ ದೃಶ್ಯಾವಳಿ ಚಿತ್ರೀಕರಿಸಿಕೊಂಡರು. ತಹಶೀಲ್ದಾರ್ ಅಮರೇಶ ಪಮ್ಮಾರ, ಡಿವೈಎಸ್‌ಪಿ ರವಿ ನಾಯಕ, ಪಿಎಸ್‌ಐ ಎಸ್.ಆರ್. ಕಣವಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.