ರಾಷ್ಟ್ರೋತ್ಥಾನ ರಕ್ತಕೇಂದ್ರದಲ್ಲಿ ಪ್ಲಾಸ್ಮಾ ಬ್ಯಾಂಕ್

ಹುಬ್ಬಳ್ಳಿ: ನಗರದ ನೀಲಿಜನ್ ರಸ್ತೆಯಲ್ಲಿರುವ ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದಲ್ಲಿ ಶನಿವಾರ ಪ್ಲಾಸ್ಮಾ ಬ್ಯಾಂಕ್ ಮತ್ತು ರಕ್ತ ಪರೀಕ್ಷೆಯ ಸುಧಾರಿತ ವಿಧಾನ ಕ್ಲಿಯಾ ಸೌಲಭ್ಯವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಕೋವಿಡ್ ಪೀಡಿತರಾಗಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಪ್ಲಾಸ್ಮಾ ನೀಡಲಾಗುತ್ತದೆ. ಸೋಂಕಿನಿಂದ ಗುಣಮುಖರಾದ 40 ದಿನಗಳ ಬಳಿಕ ಪ್ಲಾಸ್ಮಾ ಪಡೆಯಲಾಗುತ್ತದೆ. ನಗರದಲ್ಲಿ ಆರಂಭವಾದ ನಾಲ್ಕನೇ ಪ್ಲಾಸ್ಮಾ ಬ್ಯಾಂಕ್ ಇದು. ಕಿಮ್ಸ್, ಲೈಫ್ ಲೈನ್ ಆಸ್ಪತ್ರೆ ಮತ್ತು ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಈಗಾಗಲೇ ಈ ಸೌಲಭ್ಯವಿದೆ.
’ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಈಗಾಗಲೇ 30 ಜನ ಕೋವಿಡ್ ಗುಣಮುಖರು ಪ್ಲಾಸ್ಮಾ ನೀಡಿದ್ದಾರೆ. ಶನಿವಾರ ಮೂರು ಜನ ಪ್ಲಾಸ್ಮಾ ದಾನ ಮಾಡಿದರು. ಇದನ್ನು ಒಂದು ವರ್ಷದ ತನಕ –40 ಡಿಗ್ರಿಯಲ್ಲಿ ರೆಫ್ರಿಜರೇಟರ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಒಂದು ವರ್ಷದ ತನಕ ಬಳಸಬಹುದು’ ಎಂದು ರಕ್ತನಿಧಿ ಕೇಂದ್ರದ ಆಡಳಿತಧಿಕಾರಿ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.
ರಕ್ತ ಕೇಂದ್ರದ ವೈದ್ಯಾಧಿಕಾರಿ ಎಸ್.ಎಸ್. ಸಂಗೊಳ್ಳಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿಯ ಮಾಧ್ಯಮ ವಕ್ತಾರ ರವಿ ನಾಯ್ಕ, ಉದ್ಯಮಿ ಸುಧಾಕರ ಶೆಟ್ಟಿ, ವಿಜಯ ಮಹಾಂತೇಶ, ಕಿರಣ ಘರ್ ಪಾಲ್ಗೊಂಡಿದ್ದರು.
ಸ್ವಯಂಪ್ರೇರಿತ ಕಾರ್ಯಾಚರಣೆಗೆ ಜೋಶಿ ಸೂಚನೆ
ಹುಬ್ಬಳ್ಳಿ: ಅವಳಿ ನಗರಗಳಲ್ಲಿ ಗಾಂಜಾ ಸಾಗಾಟದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಆದ್ದರಿಂದ ಕಮಿಷನರ್ ಸ್ವಯಂಪ್ರೇರಿತ ಕಾರ್ಯಾಚರಣೆ ನಡೆಸಬೇಕು ಎಂದು ಪ್ರಲ್ಹಾದ ಜೋಶಿ ಸೂಚಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ’ವಿದ್ಯಾಕಾಶಿ ಎಂದು ಹೆಸರು ಪಡೆದ ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಘಟಿಸಬಾರದು’ ಎಂದರು.
ಗಾಂಜಾ ವಿವಾದದಲ್ಲಿ ರಾಜಕಾರಣಿಗಳು ಕೂಡ ಸಿಲುಕಿದ್ದಾರಲ್ಲ ಎನ್ನುವ ಪ್ರಶ್ನೆಗೆ ’ರಾಜಕಾರಣಿಗಳ ಪಾತ್ರದ ಬಗ್ಗೆ ಖಚಿತವಾಗಿಲ್ಲ. ಯಾರೇ ಇದ್ದರೂ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಯಾವುದೇ ರಂಗದಲ್ಲಿ ನಾಯಕರಾದವರು ಮಾದರಿಯಾಗಿರಬೇಕು. ಅವರ ಪ್ರತಿ ನಡೆಯೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.
ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಬಗ್ಗೆ ಪ್ರತಿಕ್ರಿಯಿಸಿ ’ಕೋವಿಡ್‌ನಿಂದ ಆಗಿರುವ ಆರ್ಥಿಕ ಸಂಕಷ್ಟ ತಾತ್ಕಾಲಿಕವಷ್ಟೇ. ಮುಂದಿನ ವರ್ಷ ಭಾರತದ ಜಿಡಿಪಿ ಶೇ 6ರಿಂದ 7ಕ್ಕೆ ಏರಿಕೆಯಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗಟ್ಟಾಗಿ ಈ ಬಿಕ್ಕಟ್ಟು ಎದುರಿಸಬೇಕಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.