ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ 15ರ ವೇಳೆಗೆ ಕೋವಿಡ್‌ ಲಸಿಕೆ ಬಿಡುಗಡೆ ಎಂಬ ಸುದ್ದಿ ಅಧಿಕೃತವಲ್ಲ: ಜೋಶಿ

Last Updated 7 ಜುಲೈ 2020, 14:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ಪೀಡಿತರಿಗೆ ಸರ್ಕಾರ ಆಗಸ್ಟ್‌ 15ರ ವೇಳೆಗೆ ಔಷಧ ಬಿಡುಗಡೆ ಮಾಡುತ್ತಿದೆ ಎನ್ನುವ ಸುದ್ದಿ ಅಧಿಕೃತವಲ್ಲ. ಈ ಬಗ್ಗೆ ತೀರ್ಮಾನವಾಗಿಲ್ಲ ಎಂದು ಕೇಂದ್ರ ಸಚಿವಪ್ರಲ್ಹಾದ್‌ಜೋಶಿ ಸ್ಪಷ್ಟಪಡಿಸಿದರು.

ಕೋವಿಡ್‌ ಲಸಿಕೆ ಕಂಡು ಹಿಡಿಯಲು ಸಂಶೋಧನಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಆಗಸ್ಟ್‌ 15ರ ಗಡುವು ನಿಗದಿ ಮಾಡಿದೆ ಎಂಬ ಸುದ್ದಿಗಳ ನಡುವೆಯೇ,ಲಸಿಕೆಗೆ ಸಂಬಂಧಿಸಿದಂತೆ ಮಂಗಳವಾರ ಜೋಶಿ ಈ ಸ್ಪಷ್ಟನೆ ನೀಡಿದ್ದಾರೆ.

‘ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಉತ್ತಮ ಪ್ರಯತ್ನ ಮಾಡುತ್ತಿದೆ. ಕೇವಲ ಸರ್ಕಾರವಷ್ಟೇ ಅಲ್ಲ; ಜನ ಕೂಡ ಹೆಚ್ಚು ಜಾಗರೂಕರಾಗಿ ಇರಬೇಕು. ಕೊರೊನಾ ಮುಂದೆ ದೊಡ್ಡ ಕಂಟಕ ತಂದೊಡ್ಡುತ್ತದೆ. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು’ ಎಂದರು.

ಖಾಸಗಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಎಲ್ಲವನ್ನೂ ಕಾನೂನಿನ ಮೂಲಕವೇ ಮಾಡಬೇಕು ಎಂದರೆ ಆಗುವುದಿಲ್ಲ. ವೈದ್ಯರು ಕೂಡ ವೃತ್ತಿ ಬದ್ಧತೆ ಪ್ರದರ್ಶಿಸಬೇಕು. ಕೆಲ ಆಸ್ಪತ್ರೆಗಳು ‌ಒಳ್ಳೆಯ ಸಮಯದಲ್ಲಿ ಚಿಕಿತ್ಸೆ ಕೊಟ್ಟು ಲಾಭ ಗಳಿಸಿಕೊಂಡು, ಈಗ ಸಮಾಜಮುಖಿ ಕಾರ್ಯಕ್ಕೆ ಹಿಂದೇಟು ಹಾಕುವುದು ಸರಿಯಲ್ಲ’ ಎಂದರು.

ಅಂಧ ಮಕ್ಕಳಿಗೆ ಬಸ್‌

ಇಲ್ಲಿನ ಆರೂಢ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಒಎನ್‌ಜಿಸಿ ಸಿಎಸ್‌ಆರ್‌ನಿಂದ ನೀಡಿದ ₹18 ಲಕ್ಷ ಮೊತ್ತದ ಟೊಯೊಟೊ ವಾಹನವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ತಮ್ಮ ನಿವಾಸದ ಎದುರು ಶಾಲಾ ಸಿಬ್ಬಂದಿಗೆ ಹಸ್ತಾಂತರಿಸಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನಿವಾಸದ ಬಳಿ ಮಂಗಳವಾರ ಸಿ.ಎಸ್‌.ಆರ್‌. ಅನುದಾನದಡಿ ಓಎನ್‌ಜಿಸಿ ಕಂಪನಿಯಿಂದ ಆರೂಢ ಅಂಧ ಮಕ್ಕಳ ಶಾಲೆಗೆ ವಾಹನವನ್ನು ಹಸ್ತಾಂತರಿಸಿಲಾಯಿತು -ಪ್ರಜಾವಾಣಿ ಚಿತ್ರ

ಬಳಿಕ ಮಾತನಾಡಿದ ಜೋಶಿ ‘ಎರಡು ವರ್ಷಗಳ ಹಿಂದೆ ಆರೂಢ ಶಾಲೆಯ ಮಕ್ಕಳನ್ನು ಭೇಟಿಯಾದಾಗ ಅವರು ಸುಂದರವಾಗಿ ಹಾಡುತ್ತಿದ್ದ ರೀತಿಗೆ ಮನಸೋತಿದ್ದೆ. ಆಗ ನಿಮಗೇನಾದರೂ ಸೌಲಭ್ಯಗಳು ಬೇಕಾ ಎಂದು ಕೇಳಿದ ಪ್ರಶ್ನೆಗೆ; ನಿತ್ಯ ಓಡಾಡಲು ತೊಂದರೆಯಾಗುತ್ತಿದೆ. ವಾಹನ ವ್ಯವಸ್ಥೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದರು. ಅವರ ಬೇಡಿಕೆ ಈಗ ಈಡೇರಿದೆ. ಕೊರೊನಾ ಕಾರಣದಿಂದ ಹಸ್ತಾಂತರ ಕಾರ್ಯ ನಾಲ್ಕು ತಿಂಗಳು ತಡವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT