ಸೋಮವಾರ, ಜೂನ್ 27, 2022
28 °C

ಸಮಸ್ಯೆಗಳ ಸುಳಿಯಲ್ಲಿ ಹುಬ್ಬಳ್ಳಿ ಬಸ್ ನಿಲ್ದಾಣಗಳು...!

ಎಸ್‌.ಎನ್‌. ಗೋವರ್ಧನ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾ ವೂ ಸೇರಿದಂತೆ ನಗರದೊಳಗಿನ ಸಿಬಿಟಿ ಬಸ್ ನಿಲ್ದಾಣಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಇದು ಹೊಸ ವಿಷಯವಲ್ಲವಾದರೂ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆ. ಇದೆಲ್ಲ ಸರಿ ಆಗುವುದು ಯಾವಾಗ? ಎಂಬ ಯಕ್ಷಪ್ರಶ್ನೆಯೂ ಎಲ್ಲರನ್ನು ಕಾಡುತ್ತಿದೆ. 

‘ಉತ್ತರ ಕರ್ನಾಟಕ ಭಾಗಕ್ಕ ಇದೇ ದೊಡ್ಡ ಬಸ್‍ಸ್ಟಾಂಡ್ ಅಂತಾರ್ರೀ. ಆದ್ರ ಇಲ್ಲಿ ಏನೂ ಸರಿ ಇಲ್ರೀ. ದೊಡ್ ಬಸ್ ಸ್ಟಾಂಡ್ ಅನ್ನೋದ್ ಬಿಟ್ಟು ಯಾವ ಸೌಕರ್ಯನೂ ಇಲ್ರೀ...’

ಇದು ಗಂಗಾವತಿಯ ಅಬುಸಲೀಂ ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣವನ್ನು ತೆಗಳುತ್ತಾ, ಬೇಸರದಿಂದ ನುಡಿದ ಮಾತು. ಇ ಮಾತುಗಳು ಹುಬ್ಬಳ್ಳಿಯಲ್ಲಿರುವ ಬಸ್‌ಸ್ಟ್ಯಾಂಡ್‌ಗಳ ಸಮಸ್ಯೆ ಹಿಡಿದ ಕನ್ನಡಿಯೂ ಹೌದು.

ಉತ್ತರ ಕರ್ನಾಟಕದ ಪ್ರಮುಖ ತಾಣ, ವಾಣಿಜ್ಯ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಹುಬ್ಬಳ್ಳಿಯ ಹಳೆಯ ಬಸ್‍ನಿಲ್ದಾಣವನ್ನು ನೋಡಿದವರಿಗೆ ಅನಿಸುವ ಮೊದಲ ಭಾವನೆಯೇ ಇದು. ಹೊಸಬರಿಗೆ ಇಲ್ಲಿನ ಸಮಸ್ಯೆಗಳು ಅತೀವ ಬೇಸರ ತಂದರೆ, ನಿತ್ಯ ನಿಲ್ದಾಣಕ್ಕೆ ಬರುವ ಮಂದಿಗೆ ಇದೆಲ್ಲಾ ಮಾಮೂಲಿ ಆಗಿದೆ.

ಎಲ್ಲವೂ ಸರಿಯಿಲ್ಲ

ಹುಬ್ಬಳ್ಳಿಗೆ ಬರುವ ಮಂದಿ ಹಾಗೂ ಇಲ್ಲಿಂದ ಹೋಗುವವರು ಹಳೇ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಅವರನ್ನು ಸಮಸ್ಯೆಗಳ ಸರಮಾಲೆಯೇ ಆಹ್ವಾನಿಸುತ್ತದೆ. ಪ್ರಯಾಣಿಕರಿಗೆ ಸಂತೃಪ್ತ ಭಾವ ನೀಡಬೇಕಾದ ತಾಣ ಕನಿಷ್ಠ ಅಲ್ಪ ತೃಪ್ತಿಯನ್ನೂ ತರದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅದೆಷ್ಟೋ ಜನರು ‘ಇಲ್ಲಿಗೆ ಯಾಕಾದ್ರೂ ಬಂದ್ವೋ’ ಎಂದು ತಮ್ಮನ್ನೇ ಶಪಿಸಿಕೊಳ್ಳುವಂತಿದೆ ಇಲ್ಲಿನ ಪರಿಸ್ಥಿತಿ.

ಸ್ವಚ್ಛತೆಯ ಮಾತೇ ಇಲ್ಲ

ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಎಲ್ಲಿ ನೋಡಿದರಲ್ಲಿ ಕಸ, ತ್ಯಾಜ್ಯ, ಪ್ಲಾಸ್ಟಿಕ್‍ಗಳು ಕಾಣಸಿಗುತ್ತವೆ. ಕಸದಬುಟ್ಟಿಯಲ್ಲಿ ಇರಬೇಕಾದ ಕಸವೆಲ್ಲ ನಿಲ್ದಾಣದಲ್ಲೇ ಹರಡಿರುತ್ತದೆ. ಇನ್ನು ವೀಳ್ಯ ಸೇವಿಸುವ ಮಂದಿಗೆ ಬಸ್ ನಿಲ್ದಾಣ ಉಗುಳಲು ಪ್ರಶಸ್ತ ತಾಣವಾಗಿದೆಯೇನೋ ಎಂದು ಅನಿಸದಿರದು. ನಿಲ್ದಾಣದ ಗೋಡೆಗಳು, ನೆಲ ವೀಳ್ಯ ತಿಂದು ಉಗುಳುವವರಿಂದ ಕೆಂಪಗಾಗಿಬಿಟ್ಟಿವೆ.

ನಿಲ್ದಾಣದಲ್ಲಿ ‘ಸಕಲಂ ದೂಳುಮಯಂ’ ಎಂಬಂತಹ ವಾತಾವರಣವಿದೆ. ಬಸ್ ಹಾಗೂ ಇತರೆ ವಾಹನಗಳಿಂದ ಹೊಗೆ ಸೇರಿದಂತೆ ಇಲ್ಲಿನ ದೂಳು ಇಡೀ ವಾತಾವರಣವನ್ನು ಕಲುಷಿತವನ್ನಾಗಿಸಿದೆ. ಜನರು ಮುಖಗವಸು ಇಲ್ಲವೇ ಮೂಗನ್ನು ಬಟ್ಟೆಯಿಂದ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಬಹುತೇಕರು ಅನಿವಾರ್ಯವಾಗಿ ಇದೆಲ್ಲವನ್ನು ಸಹಿಸಿಕೊಳ್ಳುತ್ತಿದ್ದಾರೆ.

‘ಹಳೇ ಬಸ್ ನಿಲ್ದಾಣವೆಂದರೆ ಗಲೀಜು ಕಣ್ಣೆದುರು ಬರುತ್ತದೆ. ಪ್ರತಿದಿನ ನಿಲ್ದಾಣವನ್ನು ಸ್ವಚ್ಛ ಮಾಡುತ್ತಾರೋ ಎಂಬ ಅನುಮಾನ ಕಾಡುತ್ತದೆ. ಜನರೇ ಕಸ ಹಾಕುತ್ತಾರೆ, ಉಗುಳುತ್ತಾರೆ ಎಂದು ಆರೋಪಿಸುವುದಾದರೆ, ಅಂತಹವರಿಗೆ ದಂಡ ಹಾಕಲಿ. ಆಗ ಜನರೂ ಬುದ್ಧಿ ಕಲಿಯುತ್ತಾರೆ’ ಎಂದು ಕಲಘಟಗಿಯ ಮೌಲಾಸಾಬ್ ಹೇಳಿದರು.

ಗಬ್ಬು ನಾರುವ ಶೌಚಾಲಯಗಳು

ಜನರ ತ್ಯಾಜ್ಯ ವಿಸರ್ಜನೆಯ ಸ್ಥಾನವಿತ್ತು, ಸ್ವಚ್ಛತೆ ಕಾಪಾಡಬೇಕಾದ ಇಲ್ಲಿನ ಶೌಚಾಲಯಗಳೇ ಗಬ್ಬೆದ್ದು ನಾರುತ್ತಿವೆ. ಬಯಲಲ್ಲೇ ಮೂತ್ರಾಲಯವಿದ್ದು, ಅತ್ತ ಸುಳಿದರೂ ವಾಕರಿಕೆ ಬರುವಂತಹ ದುರ್ನಾತವಿರುತ್ತದೆ. ಶೌಚಾಲಯಗಳ ಹೊರಗೂ ಮಲ-ಮೂತ್ರ ವಿಸರ್ಜನೆ ಎಗ್ಗಿಲ್ಲದೆ ನಡೆಯುತ್ತಿದೆ. ಶೌಚಾಲಯಗಳ ಹತ್ತಿರವಿರುವ ಆಸನಗಳಲ್ಲಿ ಬಸ್‍ಗಳಿಗಾಗಿ ಕಾಯುತ್ತಾ ಕೂತವರಿಗೆ ಇದು ಸಹಿಸಲಸಾಧ್ಯ.

‘ಶೌಚಾಲಯ ನಿರ್ವಹಣೆ ಮಾಡುವವರು ದುಬಾರಿ ಹಣ ಕೇಳುತ್ತಾರೆ. ಇದರಿಂದ ಕೆಲ ಮಂದಿ ಬಯಲಲ್ಲೇ ವಿಸರ್ಜನೆ ಮಾಡುತ್ತಾರೆ. ಇನ್ನು ಹೆಚ್ಚು ಹಣ ಪಡೆದರೂ ಸರಿಯಾಗಿ ಶೌಚಾಲಯ ಸ್ವಚ್ಛ ಮಾಡುವುದಿಲ್ಲ. ಶೌಚಾಲಯದೊಳಗೆ ಹೋಗಲಾಗದಷ್ಟು ಗಲೀಜಾಗಿರುತ್ತದೆ’ ಎಂದು ಧಾರವಾಡದ ಶಿವಮೂರ್ತಿ ತಿಳಿಸಿದರು.

ಆಸನಗಳ ಕೊರತೆ

ಪ್ರಯಾಣಿಕರಿಗೆ ಆಸನಗಳ ಕೊರತೆ ಉಂಟಾಗುತ್ತಿದೆ. ಇದರಿಂದ ಬಸ್ ನಿಲ್ಲುವ ಜಾಗದಿಂದ ಬೇರೆಂದು ಕಡೆ ಹುಡುಕಿಕೊಂಡು ಕೂರಬೇಕಾಗಿದೆ. ಬಸ್ ಬಂದಾಗ ಅಲ್ಲಿಂದ ಓಡಿಬರಬೇಕು ಎಂಬುದು ಪ್ರಯಾಣಿಕರ ಅಳಲು.
‘ಬಸ್ ನಿಲ್ದಾಣದಲ್ಲಿ ಕೆಲವೆಡೆ ಆಸನಗಳು ಹಾಳಾಗಿವೆ, ಇನ್ನು ಕೆಲವೆಡೆ ಗಲೀಜಾಗಿವೆ. ಇನ್ನು ಕೆಲ ಬಸ್‍ಗಳ ಒಳಗೂ ಆಸನಗಳು ಸರಿಯಾಗಿಲ್ಲ. ನಿಲ್ದಾಣದಂತೆಯೆ ಬಸ್‍ಗಳಲ್ಲೂ ಸ್ವಚ್ಚತೆ ಎಂಬುದಿಲ್ಲ’ ಎಂದು ವಿದ್ಯಾರ್ಥಿ ಮೆಹಬೂಬ್ ನದಾಫ್ ಹೇಳಿಕೊಂಡರು.

ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಅಗತ್ಯ

‘ಹಳೆಯ ಹಾಗೂ ಸಿಬಿಟಿ ಬಸ್ ನಿಲ್ದಾಣಗಳಲ್ಲಿ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಗಲೀಜು, ದೂಳು, ಶೌಚಾಲಯದ ಸಮಸ್ಯೆ ಒಂದೆಡೆಯಾದರೆ ಬಸ್ಸಿನಲ್ಲಿ ನಾವು ಪ್ರಯಾಣಿಸಲಾಗದ ಪರಿಸ್ಥಿತಿ ಇದೆ. ಇಳಿ ವಯಸ್ಸಿನಲ್ಲಿ ಬಸ್‍ಗಳನ್ನು ಹತ್ತುವುದೇ ದುಸ್ತರವಾದರೆ, ಸೀಟ್ ಸಿಗದೆ ಪರದಾಡುತ್ತೇವೆ. ಬಸ್‍ಗಳಲ್ಲಿ ತುಂಬಿಕೊಂಡ ಜನ ಹತ್ತಲು, ಇಳಿಯಲು ಅವಕಾಶವನ್ನೇ ನೀಡುವುದಿಲ್ಲ. ಬಸ್‍ಗಳು ಸಹ ಸರಿಯಾದ ಸಮಯಕ್ಕೆ ಬರುವುದಿಲ್ಲ, ಅಗತ್ಯ ಇರುವೆಡೆ ಸ್ಟಾಪ್ ನೀಡುವುದಿಲ್ಲ. ವೃದ್ಧರು, ಅಂಗವಿಕಲರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಹಾಗೂ ಅವರಿಗೆ ದರವಿಲ್ಲದೆ ಪ್ರಯಾಣಿಸುವ ವ್ಯವಸ್ಥೆ ಜಾರಿಯಾಗಬೇಕು’ ಎಂದು ಶಿವಶಂಕರ್ ಪ್ರಸಾದ್ ಆಗ್ರಹಿಸಿದರು.

ಹೊಸ ಬಸ್ ನಿಲ್ದಾಣದ ಕತೆಯೂ ಇದೇ...

ನಗರದ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಕತೆ ಏನು ಬೇರೆ ಇಲ್ಲ. ಅಲ್ಲಿಯೂ  ಎಲ್ಲೆಂದರಲ್ಲಿ ಕಸ, ಮಲ-ಮೂತ್ರ ವಿಸರ್ಜನೆ ಕಂಡುಬರುತ್ತದೆ. ಚರಂಡಿಯಲ್ಲಿ ಕಸ ತುಂಬಿಕೊಂಡಿದೆ. ಹೊಸ ನಿಲ್ದಾಣವಾದರೂ ರಸ್ತೆಗಳು ಸಮರ್ಪಕವಾಗಿಲ್ಲ. ಬಸ್‍ಗಳು ಸಂಚರಿಸುವ ವೇಳೆ ದೂಳು ಹರಡಿ, ಪ್ರಯಾಣಿಕರು ಸಂಕಟಪಡುವಂತಾಗಿದೆ. ಬಯಲು ಹೆಚ್ಚಾಗಿದ್ದು, ಅನುಪಯುಕ್ತ ಗಿಡ-ಗಂಟಿಗಳು ಹಾಗೂ ತ್ಯಾಜ್ಯ ಹೇರಳವಾಗಿವೆ. ಹಳೆಯ ಬಸ್ ನಿಲ್ದಾಣಕ್ಕೆ ಹೋಲಿಸಿದರೆ ಜನರ ಪ್ರಮಾಣ ಕಡಿಮೆ ಅಷ್ಟೇ. ಆದರೆ ಸಮಸ್ಯೆಗಳಲ್ಲಿ ಅದು ಹಿರಿಯಣ್ಣನಾದರೆ, ಇದು ತಮ್ಮನಂತಿದೆ.

‘ಹೊಸ ಬಸ್ ನಿಲ್ದಾಣವೆಂದು ಸುಮ್ಮನೆ ಕರೆಯಬೇಕಷ್ಟೆ. ಅಂತಹ ಸವಲತ್ತುಗೇಳೇನೂ ಇಲ್ಲಿಲ್ಲ. ಕಸ, ದುರ್ವಾಸನೆ ಎರಡೂ ನಿಲ್ದಾಣಗಳಲ್ಲಿ ಸಾಮಾನ್ಯವಾಗಿವೆ’ ಎಂದು ಹುಬ್ಬಳ್ಳಿಯ ಸಮೀರ್ ಹೇಳಿದರು. ಚಿಕ್ಕೋಡಿಯ ಅಣ್ಣಾಸಾಬ್, ಚನ್ನಮ್ಮನ ಕಿತ್ತೂರಿನ ಇನಾಯತ್ ಶೇಖ್ ಇದಕ್ಕೆ ದನಿಗೂಡಿಸಿದರು.

ಸಿಬಿಟಿಯಲ್ಲಿ ಬಸ್ ಸಮಯಕ್ಕೆ ಸರಿಯಾಗಿ ಬರಲ್ಲ

ನಗರ ವ್ಯಾಪ್ತಿಯ ಪ್ರಯಾಣಿಕರ ಅನುಕೂಲತೆಗಾಗಿ ಕೇಂದ್ರೀಯ ಬಸ್ ನಿಲ್ದಾಣ (ಸಿಬಿಟಿ) ನಿರ್ಮಿಸಲಾಗಿದೆ. ಆದರೆ ಅಲ್ಲಿಯೂ ಸಮಸ್ಯೆಗಳು ತಾಂಡವವಾಡುತ್ತಿವೆ. ಹೊಸ ನಿಲ್ದಾಣವಾದರೂ ಅಸ್ವಚ್ಛತೆ ಪೆಡಂಭೂತದಂತೆ ಕಾಡುತ್ತಿದೆ. ಬಸ್‍ಗಳು ಸರಿಯಾದ ಸಮಯಕ್ಕೆ ಬರದಿರುವುದರಿಂದ ತೀರಾ ತೊಂದರೆಯಾಗುತ್ತಿದೆ ಎಂಬುದು ಪ್ರಯಾಣಿಕರ ಮಾತು.

‘ಸಿಬಿಟಿಯೊಳಗೆ ಬಸ್‍ಗಳೇ ಅಲ್ಲದೆ ಖಾಸಗಿ ವಾಹನಗಳು ಮನಬಂದಂತೆ ನುಗ್ಗುತ್ತವೆ. ಬಸ್‍ನಿಲ್ದಾಣ ಧರ್ಮಛತ್ರವಾಗಿದೆ. ಬಸ್ ಸೇವೆಯೂ ಸರಿಯಿಲ್ಲ. ಬಸ್‍ನಿಲ್ದಾಣ ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಳೆಯ ಹಾಗೂ ಸಿಬಿಟಿ ಬಸ್ ನಿಲ್ದಾಣಗಳು ಹಳ್ಳಿಗಾಡಿನ ನಿಲ್ದಾಣಗಳಿಗಿಂತ ಕಡೆಯಾಗಿವೆ’ ಎಂದು ವ್ಯಾಪಾರಿ ವಿ.ವಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

‘ಸಿಬಿಟಿಯಲ್ಲೂ ಬಸ್‍ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ಕಾಲೇಜಿಗೆ ಹೋಗಲು ಸಮಸ್ಯೆಯಾಗುತ್ತಿದೆ. ಹಲವು ಬಾರಿ ತಡವಾಗಿ ಕಾಲೇಜಿಗೆ ಹೋಗಿದ್ದೇನೆ. ಮಧ್ಯಾಹ್ನ 1.30-2.30ರವರೆಗೆ ಬಸ್‍ಗಳು ಬರುವುದೇ ಇಲ್ಲ. ಊಟದ ನೆಪ ಹೇಳುತ್ತಾರೆ. ಇಲ್ಲಿನ ಬಸ್‍ಗಳೂ ಬೇಗ ಹೊರಡುವುದಿಲ್ಲ. ಬಸ್ ಬರುವವರೆಗೂ ಅಥವಾ ಇಲ್ಲಿಂದ ಹೊರಡುವವರೆಗೂ ಕಾಯಬೇಕು’ ಎಂದು ನೆಹರು ಕಾಲೇಜಿನ ವಿದ್ಯಾರ್ಥಿನಿ ಶಾಹಿನ್ ಹೇಳಿದರು.

ಪ್ರಮುಖ ನಿಲ್ದಾಣಗಳಲ್ಲೇ ಇಷ್ಟೊಂದು ಸಮಸ್ಯೆಗಳಿದ್ದರೆ, ನಗರ ಸಾರಿಗೆಯ ವಿವಿಧ ನಿಲ್ದಾಣಗಳಲ್ಲಿನ ಸ್ಥಿತಿ ಹೇಳತೀರದಾಗಿದೆ. ಚಿಕ್ಕ ನಿಲ್ದಾಣಗಳು, ಕಡಿಮೆ ಆಸನಗಳು, ಜನರು ಹೆಚ್ಚಾದಷ್ಟು ನಿಲ್ದಾಣಗಳಿಂದ ಹೊರ ನಿಂತು ಉರಿಬಿಸಿಲನ್ನೂ ಲೆಕ್ಕಿಸದೆ ತಮ್ಮ ಮಾರ್ಗದ ಬಸ್‍ಗಳಿಗಾಗಿ ಕಾಯಬೇಕಾದ ಪರಿಸ್ಥಿತಿ... ‘ನಮ್ಮ ಗೋಳು ಕೇಳೋರ್ಯಾರು?’ ಎಂಬುದು ಪ್ರಯಾಣಿಕರ ಪ್ರಶ್ನೆ. 

5–6 ತಿಂಗಳಲ್ಲಿ ಸಮಸ್ಯೆ ನಿವಾರಣೆ!

‘ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳಲ್ಲಿ ಸಾಕಷ್ಟು ಸುಧಾರಣೆ ತರಲು ಶ್ರಮಿಸುತ್ತಿದ್ದೇವೆ. ಸ್ವಚ್ಛತೆ, ಶೌಚಾಲಯ ಮತ್ತಿತರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ. 5-6 ತಿಂಗಳಲ್ಲಿ ನಿಲ್ದಾಣಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಯತ್ನಿಸುತ್ತೇವೆ’ ಎಂದು ಎನ್‍ಡಬ್ಲ್ಯುಕೆಎಸ್‍ಆರ್‌ಟಿಸಿ ವಿಭಾಗೀಯ ನಿಯತ್ರಣಾಧಿಕಾರಿ ಎಚ್. ರಾಮನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಎರಡ್ಮೂರು ಮೀಟಿಂಗ್ ಮಾಡಲಾಗಿದೆ. ಅದಕ್ಕಾಗಿ ಸೂಪರ್‍ವೈಸರ್ ಅನ್ನೂ ನೇಮಿಸಿದ್ದೇವೆ. ಸ್ವಚ್ಛತೆ ಗುತ್ತಿಗೆ ಪಡೆದ ಗುತ್ತಿಗೆದಾರರಿಗೂ ನೋಟೀಸ್ ನೀಡಲಾಗಿದ್ದು, ಇದೇ ರೀತಿ ಮುಂದುವರೆದರೆ ದಂಡ ಹಾಕಲು ನಿರ್ಧರಿಸಿದ್ದೇವೆ’ ಎಂದರು.

‘ಶೌಚಾಲಯಗಳ ಕುರಿತು ಆಗಾಗ್ಗೆ ಕ್ರಮ ಕೈಗೊಳ್ಳುತ್ತಲೇ ಇದ್ದೇವೆ. ಶೌಚಾಲಯಗಳಲ್ಲಿನ ಸಮಸ್ಯೆ ಬಗ್ಗೆ ಜನರು ದೂರು ನೀಡಿದರೆ ಶೀಘ್ರ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಗುತ್ತಿಗೆದಾರರೊಂದಿಗಿನ ಒಪ್ಪಂದವನ್ನೂ ರದ್ದು ಮಾಡುತ್ತೇವೆ. ಇನ್ನು ಬಸ್‍ಗಳ ಸಂಖ್ಯೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಹತ್ತು ಹೊಸ ಬಸ್‍ಗಳನ್ನು ಬಿಡುಗಡೆ ಮಾಡಿದೆವು. ಈ ಹಣಕಾಸು ವರ್ಷದಲ್ಲಿ 30 ಹೊಸ ಬಸ್‍ಗಳನ್ನು ಬಿಡುಗಡೆ ಮಾಡುವ ಚಿಂತನೆ ನಡೆದಿದೆ. ಹಳೇ ಬಸ್ ನಿಲ್ದಾಣದಲ್ಲಿ ದಿನಕ್ಕೆ 3 ಸಾವಿರ ಬಸ್‍ಗಳು ಬಂದು ಹೋಗುತ್ತಿದ್ದು, ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಆಸನಗಳ ಸಮಸ್ಯೆ ಇದೆ. ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಈ ಒತ್ತಡ ನಿವಾರಣೆ ಆಗಲಿದೆ. ಗ್ರಾಮಾಂತರ ಬಸ್‍ಗಳು ಅಲ್ಲಿಗೆ ಬರಲಿವೆ. ಇದರಿಂದ ಇಲ್ಲಿನ ವಾಹನ ದಟ್ಟಣೆಯೂ ನಿವಾರಣೆಯಾಗಲಿದೆ. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಈ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಹಳೆ ಬಸ್ ನಿಲ್ದಾಣಕ್ಕೆ ಹೊಸರೂಪ ನೀಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಗೋಡೆಗೆ ಕೆಂಪು ಬಣ್ಣ

‘ಹುಬ್ಬಳ್ಳಿ ನಗರದಲ್ಲಿರುವ ನಗರ ಸಾರಿಗೆ ಬಸ್ ನಿಲ್ದಾಣ ಇನ್ನೂ ಹೊಸದು. ಜನರು ವೀಳ್ಯ ತಿಂದು ಉಗುಳಿ, ಗೋಡೆಗಳು ಕೆಂಪಗಾಗಿರುವುದನ್ನು ಮರೆಮಾಚಲು ನಾವೇ ಕೆಲವೆಡೆ ಕೆಂಪು ಬಣ್ಣವನ್ನು ಹೊಡೆಸಿದ್ದೇವೆ. ಸ್ವಚ್ಛತೆ ಕಾಪಾಡಲು ಇನ್ನಷ್ಟು ಶ್ರಮಿಸುತ್ತೇವೆ. ನಿಲ್ದಾಣದ ಬಳಿ ಇರುವ ಅಂಡರ್‌ಪಾಸ್‌ನಲ್ಲಿ ಕಸ ತುಂಬಿರುವುದು ಗಮನಕ್ಕೆ ಬಂದಿದ್ದು, ಫೆ.2ರಂದು ಅದು ಉದ್ಘಾಟನೆಗೊಂಡ ನಂತರ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನಿಲ್ದಾಣದಲ್ಲಿ ಭದ್ರತೆಗೆ ಆದ್ಯತೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗಾಧಿಕಾರಿ ವಿವೇಕಾನಂದ ಅವರು ತಿಳಿಸಿದರು.

‘ಸಮರ್ಪಕವಾಗಿ ಬಸ್ ಸಂಚರಿಸಬೇಕು ಎಂಬ ಉದ್ದೇಶದಿಂದ ಡಿಪೊ ಮ್ಯಾನೇಜರ್‍ಗಳಿಗೆ ನಿರ್ದೇಶನ ನೀಡಿದ್ದೇವೆ. ಈ ಬಗ್ಗೆ ಪ್ರತಿವಾರ ಸಭೆ ನಡೆಸುತ್ತಿದ್ದೇವೆ. ಸದ್ಯ 191 ನಗರ ಸಾರಿಗೆ ಬಸ್‍ಗಳಿದ್ದು, ಟ್ರಾಫಿಕ್ ಸಮಸ್ಯೆಯಿಂದಾಗಿ ಕೆಲ ಸಮಯ ತಡವಾಗಿ ಬರುತ್ತಿವೆ. ಹೊಸ ಬಸ್‍ಗಳನ್ನು ಕೊಳ್ಳುವ ಪ್ರಸ್ತಾವ ಇಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು