ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಾಕಾರರ ವಶ; ಪ್ರಕರಣ ದಾಖಲು

ಪೌರತ್ವ (ತಿದ್ದುಪಡಿ) ಕಾಯ್ದೆಗೆ ದಲಿತ, ರೈತ, ಎಡಪಂಥೀಯ ಸಂಘಟನೆಗಳ ವಿರೋಧ
Last Updated 19 ಡಿಸೆಂಬರ್ 2019, 15:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪೌರತ್ವ(ತಿದ್ದುಪಡಿ)ಕಾಯ್ದೆ ವಿರೋಧಿಸಿ, ನಗರದಲ್ಲಿ ಗುರುವಾರ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗೆ ಮುಂದಾದ ದಲಿತ, ರೈತ, ಎಡಪಂಥೀಯ ಹಾಗೂ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ಬಳಿಕ ಬಿಡುಗಡೆ ಮಾಡಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಡಿಸಿಪಿ ಡಿ.ಎಲ್‌ ನಾಗೇಶ್‌ ನೇತೃತ್ವದಲ್ಲಿ ಪೊಲೀಸರು ಬೆಳಿಗ್ಗೆಯಿಂದಲೇ ಬಿಗಿ ಭದ್ರತೆ ಕೈಗೊಂಡಿದ್ದರು. ಈ ನಡುವೆ ಸ್ಥಳಕ್ಕೆ ಆಗಮಿಸಿದ ವಿವಿಧ ಸಂಘಟನೆಗಳ ಮುಖಂಡರನ್ನು ತಡೆದ ಪೊಲೀಸರು ಪ್ರತಿಭಟನೆ ನಡೆಸದಂತೆ ತಡೆದರು.

ಪ್ರತಿಭಟನೆಗೆ ಅವಕಾಶ ಸಿಗದ ಕಾರಣಕ್ಕೆ ಮುಖಂಡರು, ‘ಪೌರತ್ವ ತಿದ್ದುಪಡಿ ಕಾಯ್ದೆಗೆ ಧಿಕ್ಕಾರ, ಕೇಂದ್ರ ಸರ್ಕಾರಕ್ಕೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ, ಸಂಘಪರಿವಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ವಿವಿಧ ಸಂಘಟನೆಗಳ 55ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು, ಗೋಕುಲ ರಸ್ತೆಯಲ್ಲಿರುವ ಹೊಸ ಸಿಎಆರ್‌ ಮೈದಾನಕ್ಕೆ ಕರೆದೊಯ್ದು, ರಾತ್ರಿ ಬಿಡುಗಡೆ ಮಾಡಿದರು. ಸಬ್‌ ಅರ್ಬನ್‌ ಠಾಣೆಗೆ ಕರೆದೊಯ್ದಿದ್ದ ವಿವಿಧ ದಲಿತ ಪರ ಸಂಘಟನೆಗಳ ಸುಮಾರು 15ಕ್ಕೂ ಹೆಚ್ಚು ಮುಖಂಡರನ್ನು ಮಧ್ಯಾಹ್ನವೇ ಬಿಟ್ಟು ಕಳುಹಿಸಿದರು.

ಆಕ್ರೋಶ:

‘ಪ್ರಜಾಸತ್ತಾತ್ಮಕ ಹೋರಾಟವನ್ನು ರಾಜ್ಯ ಸರ್ಕಾರ ಪೊಲೀಸರ ಮುಖಾಂತರ ದಮನ ಮಾಡುತ್ತಿರುವುದು ಖಂಡನೀಯ’ ಎಂದು ಸಿಐಟಿಯು ಮುಖಂಡ ಮಹೇಶ ಪತ್ತಾರ ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆ ಹಿಂಪಡೆಯಲು ಆಗ್ರಹ:

ವಿವಿಧ ದಲಿತ ಸಂಘಟನೆಗಳ ಮಹಾಮಂಡಳಿಯ ಅಧ್ಯಕ್ಷ ಪೀತಾಂಬರಪ್ಪ ಬಿಳಾರ ಮತ್ತು ಕಾರ್ಯದರ್ಶಿ ಗುರುನಾಥ ಉಳ್ಳಿಕಾಶಿ ಮಾತನಾಡಿ, ಧರ್ಮದ ಆಧಾರದ ಮೇಲೆ ದೇಶದ ಜನರ ಪೌರತ್ವ ನಿರ್ಧರಿಸಿರುವುದು ಕಾನೂನು ಬಾಹಿರ. ತಕ್ಷಣ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಕಾಯ್ದೆಯ ಸಾಧಕ–ಬಾಧಕದ ಕುರಿತು ತಜ್ಞರೊಂದಿಗೆ ಚರ್ಚಿಸದೇ ಏಕಾಏಕಿ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆ ಖಂಡನೀಯ ಎಂದರು.

ಜನ ವಿರೋಧಿ ಕಾಯ್ದೆ:

ಕಾಂಗ್ರೆಸ್‌ ಮುಖಂಡ ಅನ್ವರ್‌ ಮುಧೋಳ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಒಂದೊಂದೆ ಜನ ವಿರೋಧಿ ಕಾಯ್ದೆಗಳನ್ನು ಒತ್ತಾಯ ಪೂರ್ವಕವಾಗಿ ಜಾರಿಗೆ ತರುತ್ತಿದೆ. ಜನರ ಮೂಲಭೂತ ಹಕ್ಕನ್ನು ದಮನ ಮಾಡುವುದು ಖಂಡನೀಯ ಎಂದರು.

ಬಿಜೆಪಿ, ಸಂಘ ಪರಿವಾರ ಸಂಚು:

ಭಾರತ ಮೂಲ ನಿವಾಸಿಗಳ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಪೌರತ್ವ ತಿದ್ದುಪಡಿ ಕಾಯ್ದೆಯು ಅಪಾಯಕಾರಿ ಅಂಶಗಳನ್ನು ಒಳಗೊಂಡಿದೆ. ದೇಶದ ಮೂಲ ನಿವಾಸಿಗಳನ್ನು ಭಾರತ ಬಿಟ್ಟು ಓಡಿಸಲು ಬಿಜೆಪಿ, ಸಂಘ ಪರಿವಾರ ಸಂಚು ರೂಪಿಸಿದೆ. ಭವಿಷ್ಯದಲ್ಲಿ ದೇಶದ ನಾಗರಿಕರ ಮೇಲೆ ನಡೆಯಬಹುದಾದ ಅಪಾಯಕಾರಿ ದಾಳಿಯ ಮುನ್ಸೂಚನೆ ಈ ಕಾಯ್ದೆಯಾಗಿದೆ ಎಂದು ಹೇಳಿದರು.

ಅಧಿಕಾರ ದುರುಪಯೋಗ:

ಕಳಸಾ–ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸರ ಮೂಲಕ ಜನರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದೆ. ದೇಶಕ್ಕೆ ಮಾರಕವಾದ, ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಐ.ಕೆ.ಬೆಳಗಲಿ, ದೇವಾನಂದ ಜಗಾಪುರ, ಬಸವಂತಪ್ಪ ಸೊಪ್ಪಿನ, ಬಾಬಾಜಾನ್‌ ಮುಧೋಳ, ಶಂಕರ ಬೋಜಗಾರ, ಗಂಗಾಧರ ಪೆರೂರ, ರವಿ ಕದಂ, ದೇವೇಂದ್ರಪ್ಪ ಇಟಗಿ, ವಿನಾಯಕ ಅಮರಗೋಳ, ರಾಜು ಗಾಣದಾಳ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT