ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ತೇಜೋವಧೆಗೆ ಕುತಂತ್ರ –ಆರೋಪ

ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ
Published : 12 ಆಗಸ್ಟ್ 2024, 15:54 IST
Last Updated : 12 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಧಾರವಾಡ: ಬಿಜೆಪಿ ಮತ್ತು ಜೆಡಿಎಸ್‌ನವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿ ತೇಜೋವಧೆಗೆ ಮುಂದಾಗಿದ್ದಾರೆ. ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಒಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯವರು (ಪಶ್ಚಿಮ ಕ್ಷೇತ್ರ–74) ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆ ಸಹಿಸದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ', `ಮುಖ್ಯಮಂತ್ರಿ ಜನಪ್ರಿಯತೆ ಸಹಿಸದ ಬಿಜೆಪಿ-ಜೆಡಿಎಸ್', `ಹಿಂದುಳಿದ ವರ್ಗಗಳ ನಾಯಕನ ವಿರುದ್ಧ ಕುತಂತ್ರ', ‘ರಾಜ್ಯಪಾಲರು ಷೋಕಾಸ್ ನೋಟಿಸ್ ಹಿಂಪಡೆಯಬೇಕು’ ಭಿತ್ತಿಫಲಕಗಳನ್ನು ಹಿಡಿದಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮತ್ಡು ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ರಾಜ್ಯಪಾಲರು ಕೇಂದ್ರ ಸರ್ಕಾರದ ಅಣತಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ನೀಡಿರುವುದು ಕಾನೂನುಬಾಹಿರ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯ ಕಾಪಾಡಬೇಕು. ಕೇಂದ್ರ ಸರ್ಕಾರದ ಪರವಾಗಿ ರಾಜಕೀಯ ಮಾಡಬಾರದು' ಎಂದು ದೂರಿದರು.

‘ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಧಿಕಾರ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸುವ, ಹಿಂದುಳಿದ ವರ್ಗದ ನಾಯಕತ್ವವನ್ನು ಕೊನೆಗಾಣಿಸುವ ಕುತಂತ್ರ ನಡೆಸಿದ್ದಾರೆ' ಎಂದು ಆರೋಪಿಸಿದರು.

‘ಕಾಂಗ್ರೆಸ್‍ನ 134 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯ ಇಲ್ಲ’ ಎಂದರು. 

ಕಾಂಗ್ರೆಸ್ ಮುಖಂಡ ನಾಗರಾಜ ಗುರಿಕಾರ ಮಾತನಾಡಿ, ಹಿಂದುಳಿದ ವರ್ಗದ ನಾಯಕರಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಧರ್ಮಸಿಂಗ್ ಅಧಿಕಾರದಲ್ಲಿದ್ದಾಗಲೂ ಅವರ ವಿರುದ್ಧವೂ ಷಡ್ಯಂತ್ರ ರೂಪಿಸಲಾಗಿತ್ತು. ಈಗ ಶೋಷಿತ ಸಮುದಾಯ ಜಾಗೃತವಾಗಿದೆ. ಬಿಜೆಪಿ, ಜೆಡಿಎಸ್ ನಾಯಕರು ಕುತಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಐ.ಜಿ.ಸನದಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜ್ಯದ ಜನರ ಮನಗೆದ್ದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಗೆ ಇದನ್ನು ಸಹಿಸಲಾಗುತ್ತಿಲ್ಲ. ಸಲ್ಲದ ಆರೋಪ ಮಾಡಿ ಮುಖ್ಯಮಂತ್ರಿ ಅವರ ಹೆಸರಿಗೆ ಧಕ್ಕೆ ಉಂಟು ಮಾಡಲು ಮುಂದಾಗಿದ್ದಾರೆ' ಎಂದು ದೂರಿದರು.

ಕಾಂಗ್ರೆಸ್ ಮುಖಂಡರಾದ ದೀಪಕ್ ಚಿಂಚೋರೆ, ಇಸ್ಮಾಯಿಲ್ ತಮಾಟಗಾರ, ರಾಬರ್ಟ್ ದದ್ದಾಪುರಿ, ಕಾಂಗ್ರೆಸ್ ಉಭಯ ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಆನಂದ ಮುಶಣ್ಣವರ, ಹಬೂಬಖಾನ ಫಠಾಣ, ದಾನಪ್ಪ ಕಬ್ಬೂರ, ಸ್ವಾತಿ ಮಾಳಗಿ, ಯಾಸಿನ್ ಹಾವೇರಿಪೇಟ್, ಜೈಲಾನಿ ಜಾಲೇಗಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT