ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೂ ಉದ್ಯೋಗ ಕೊಡಿ: ಸಾಧನಾ

ಫೆಬ್ರುವರಿಯಲ್ಲಿ ಧಾರವಾಡದಲ್ಲಿ ಉದ್ಯೋಗ ಮೇಳ ಆಯೋಜನೆಗೆ ನಿರ್ಧಾರ
Last Updated 3 ಜನವರಿ 2020, 15:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂದಿನ ತಿಂಗಳು ಜಿಲ್ಲೆಯಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಕಂಪನಿಗಳು ಹಾಗೂ ಉದ್ದಿಮೆದಾರರು ಅಂಗವಿಕಲರಿಗೂ ನೌಕರಿ ಕೊಡುವ ಬಗ್ಗೆ ಆಸಕ್ತಿ ತೋರಿಸಬೇಕು ಎಂದು ಹುಬ್ಬಳ್ಳಿ ವಿಭಾಗದ ಉದ್ಯೋಗ ಕಚೇರಿಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ಹೇಳಿದರು.

ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಮೇಳದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ಅಂಗವಿಕಲರಿಗೆ ಸ್ಥಳೀಯವಾಗಿಯೇ ಕೆಲಸ ಮಾಡಲು ಸಿಕ್ಕರೆ ಅವರ ಬದುಕಿಗೂ ಅನುಕೂಲವಾಗುತ್ತದೆ. ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳು ದಿನದ ಕೊನೆಯಲ್ಲಿ ಎಷ್ಟು ಜನರಿಗೆ ಉದ್ಯೋಗ ನೀಡಿವೆ ಎನ್ನುವ ಮಾಹಿತಿ ನೀಡಬೇಕು’ ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ ‘ಫೆಬ್ರುವರಿ ಅಂತ್ಯದಲ್ಲಿ ಮೇಳ ನಡೆಸಲು ಯೋಜಿಸಲಾಗಿದೆ. ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳಿಗಾಗಿ ಮೇಳ ಜರುಗಲಿದೆ’ ಎಂದರು.

‘ಉದ್ಯೋಗ ಹುಡುಕುವವರಿಗೆ ಹೇಗೆ ಹಾಗೂ ಎಲ್ಲಿ ಉದ್ಯೋಗ ಪಡಿಯಬೇಕು ಎನ್ನುವುದು ಗೊತ್ತಿಲ್ಲ. ಆದರೆ, ಉದ್ಯಮಿದಾರರಿಗೆ ಉದ್ಯೋಗಿಗಳ ಕೊರತೆ ಕಾಡುತ್ತಿದೆ. ಈ ಕೊರತೆ ದೂರ ಮಾಡಿ ಇಬ್ಬರಿಗೂ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಗದುಗಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ಜಯದೇವ ಮೆಣಸಗಿ ‘ಸ್ಥಳೀಯ ಉದ್ಯಮಿಗಳು ಮತ್ತು ಉದ್ಯೋಗದ ಆಕಾಂಕ್ಷಿಗಳು ವಲಸೆ ಹೋಗಬಾರದು. ಸ್ಥಳೀಯವಾಗಿ ಉದ್ಯೋಗ ಲಭ್ಯವಾದರೆ ಪ್ರದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಉದ್ಯೋಗ ಹಾಗೂ ಉದ್ಯಮ ಎಂದರೆ ಬೆಂಗಳೂರು ಮಾತ್ರ ಎನ್ನುವಂತಾಗಿದೆ. ಮುಂಬರುವ ವರ್ಷಗಳಿಂದ ನಮ್ಮ ಭಾಗದ ಜಿಲ್ಲೆಗಳು ಕೂಡ ಬೆಂಗಳೂರಿನ ರೀತಿ ಆಗಬೇಕು’ ಎಂದರು.

ಹಾವೇರಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ವಿ. ಹೊಂಬಾರ್ಡಿ, ಹುಬ್ಬಳ್ಳಿ ಕೆಸಿಸಿಸಿಐ ಅಧ್ಯಕ್ಷ ಮಹೇಂದ್ರ ಲಡ್ಡದ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಜಂಟಿ ನಿರ್ದೇಶಕ ಎನ್‌.ಎಂ. ಭೀಮಪ್ಪ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಾ. ಚಂದ್ರಪ್ಪ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ವಾಣಿಜ್ಯೋದ್ಯಮ ಸಂಸ್ಥೆ ಪ್ರಮುಖರಾದ ಜಿ.ಜಿ. ಹೊಟ್ಟಿಗೌಡರ, ಶಂಕರಣ್ಣ ಮುನವಳ್ಳಿ, ವಸಂತ ಲಡ್ಡದ, ಮನೋಹರ, ರಾಜಣ್ಣ ಪಾಲ್ಗೊಂಡಿದ್ದರು.

ಫಲಕದ ಮೇಲೆ ಉದ್ಯೋಗದ ಸಮಗ್ರ ಮಾಹಿತಿ

ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳು, ಆಕಾಂಕ್ಷಿಗಳಿಗೆ ಇರಬೇಕಾದ ಅರ್ಹತೆ, ವಿದ್ಯಾಭ್ಯಾಸ, ವೇತನ ಹೀಗೆ ಎಲ್ಲ ಪ್ರಮುಖ ಮಾಹಿತಿಗಳನ್ನು ಆಯಾ ಕಂಪನಿಗಳು ದೊಡ್ಡ ಫಲಕಗಳ ಮೇಲೆ ಪ್ರದರ್ಶಿಸಬೇಕು. ಇದರಿಂದ ಉದ್ಯೋಗ ಅರಿಸಿ ಬರುವವರಿಗೆ ಅನುಕೂಲವಾಗುತ್ತದೆ ಎಂದು ದೀಪಾ ಚೋಳನ್‌ ಹೇಳಿದರು.

‘ಉದ್ಯೋಗ ಮೇಳ ಜಾತ್ರೆ ಆಗಬಾರದು. ಆದ್ದರಿಂದ ಮೇಳದ ವೇಳೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು’ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪಡೆದವರಿಗೆ ಪ್ರತ್ಯೇಕವಾಗಿ ಒಂದೊಂದು ದಿನ ಮೇಳ ನಡೆಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT