ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಸ ಸಂಗ್ರಹಕ್ಕೆ ತಳ್ಳುಗಾಡಿ, ಕೈಬಂಡಿ

ಮಹಾನಗರ ಪಾಲಿಕೆಯಿಂದ ತಲಾ ₹20 ಲಕ್ಷ ವೆಚ್ಚದಲ್ಲಿ ಖರೀದಿ
Last Updated 16 ಸೆಪ್ಟೆಂಬರ್ 2021, 20:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮನೆ ಮನೆಯಿಂದ ಕಸ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲು ಮುಂದಾಗಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು 175 ತಳ್ಳುಗಾಡಿ ಮತ್ತು 197 ಕೈಬಂಡಿ(ವೀಲ್‌ಬ್ಯಾರೊ)ಗಳನ್ನು ಖರೀದಿಸಿದೆ.

ಸದ್ಯ ಪಾಲಿಕೆಯಲ್ಲಿ ಮನೆಗಳಿಂದ ಕಸ ಸಂಗ್ರಹಿಸಲು 193 ಆಟೊ ಟಿಪ್ಪರ್‌ಗಳಿವೆ. ಆದರೆ, ಈ ವಾಹನಗಳು ಎಲ್ಲಾ ರಸ್ತೆಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಹಳೇ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕೆಲ ಓಣಿಗಳ ರಸ್ತೆಗಳು ಕಿರಿದಾಗಿವೆ. ಇದರಿಂದಾಗಿ ಮನೆಗಳಿಂದ ಸಂಗ್ರಹಿಸುವ ವಾಹನಗಳು ನಮ್ಮ ಓಣಿಗೆ ಬರುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಇದಕ್ಕೆ ಪರಿಹಾರವಾಗಿ ಪಾಲಿಕೆಗೆ ತಳ್ಳುಗಾಡಿ ಮತ್ತು ಕೈಬಂಡಿಗಳು ಬಂದಿವೆ.

ತಲಾ ₹20 ಲಕ್ಷ ವೆಚ್ಚ: ‘ಪಾಲಿಕೆಯ ಹದಿನೈದನೇ ಹಣಕಾಸು ಯೋಜನೆಯಡಿ 175 ತಳ್ಳುಗಾಡಿ ಹಾಗೂ 197 ಕೈಬಂಡಿಗಳನ್ನು ಖರೀದಿಸಲಾಗುತ್ತಿದೆ. ಎರಡಕ್ಕೂ ತಲಾ ₹20 ಲಕ್ಷದಂತೆ ಒಟ್ಟು ₹40 ಲಕ್ಷದ ಟೆಂಡರ್ ಕರೆಯಲಾಗಿತ್ತು. ಹುಬ್ಬಳ್ಳಿ ಮತ್ತು ಅಹಮದಾಬಾದ್‌ ಮೂಲದ ಕಂಪನಿಗಳು ಟೆಂಡರ್‌ ಪಡೆದಿವೆ. ಈಗಾಗಲೇ ಒಂದಷ್ಟು ಪೂರೈಕೆಯಾಗಿವೆ. ಉಳಿದವು ಹಂತ–ಹಂತವಾಗಿ ಬರಲಿವೆ’ ಎಂದು ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್‌ ಟಿ.ಎನ್. ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಗುಡಿಸುವವರಿಗೆ, ಚರಂಡಿ ಸ್ವಚ್ಛಗೊಳಿಸುವವರಿಗೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಗ್ರಹವಾಗುವ ಮಣ್ಣು ತೆಗೆಯುವ ಪೌರ ಕಾರ್ಮಿಕರಿಗೆ ಕೈಬಂಡಿಗಳನ್ನು ನೀಡಲಾಗುವುದು. ಇದಕ್ಕೂ ಮುಂಚೆ 2017ರಲ್ಲಿ ಎರಡನ್ನೂ ಖರೀದಿಸಲಾಗಿತ್ತು. ಸದ್ಯ ಹಳೆಯವು ತಲಾ 50 ಇವೆ’ ಎಂದರು.

ಕಸ ವಿಂಗಡಣೆ ವ್ಯವಸ್ಥೆ: ‘ತಳ್ಳುಗಾಡಿಯಲ್ಲಿ ವಿಂಗಡಿತ ಕಸ ಸಂಗ್ರಹದ ವ್ಯವಸ್ಥೆ ಇರಲಿದೆ. ಅದರೊಳಗೆ ನಾಲ್ಕು ಬಕೆಟ್‌ಗಳು ಇರಲಿವೆ. ಎರಡು ನೀಲಿ ಬಕೆಟ್‌ಗಳಲ್ಲಿ ಒಣ ಕಸ ಹಾಗೂ ಇನ್ನೆರಡು ಹಸಿರು ಬಕೆಟ್‌ಗಳಲ್ಲಿ ಹಸಿ ಕಸವನ್ನು ಪೌರ ಕಾರ್ಮಿಕರು ಸಂಗ್ರಹಿಸಬೇಕು. ಬಳಿಕ, ಕಸವನ್ನು ಆಟೊ ಟಿಪ್ಪರ್‌ಗಳಿಗೆ ಹಾಕಿ, ಸಮೀಪದ ಕಾಂಪ್ಯಾಕ್ಟರ್ ಘಟಕಕ್ಕೆ ಸಾಗಿಸುತ್ತಾರೆ’ ಎಂದು ಹೇಳಿದರು.

ಸಮರ್ಪಕ ಕಸ ಸಂಗ್ರಹ: ‘ಅವಳಿ ನಗರದ ಪ್ರತಿ ಮನೆಯಿಂದಲೂ ಸಮರ್ಪಕವಾಗಿ ಕಸ ಸಂಗ್ರಹವಾಗಬೇಕು ಎಂಬ ಉದ್ದೇಶದಿಂದ 175 ತಳ್ಳುಗಾಡಿಗಳನ್ನು ಖರೀದಿಸಿದ್ದೇವೆ. ಆಟೊ ಟಿಪ್ಪರ್‌ಗಳು ಹೋಗದ ಕಡೆಗೆ ತಳ್ಳುಗಾಡಿಗಳನ್ನು ಹಂಚಲಾಗುವುದು’ ಎಂದು ಘನತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT