ಶನಿವಾರ, ಫೆಬ್ರವರಿ 27, 2021
19 °C

ಮಳೆಯ ಅಬ್ಬರ: ರೈಲುಗಳ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾರಾಷ್ಟ್ರದ ಗಡಿ ಭಾಗ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದ ಕಾರಣ ರೈಲು ಸಂಚಾರದಲ್ಲಿ ಅಸ್ತವ್ಯಸ್ಥವಾಗಿದೆ.

ಬುಧವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬೆಂಗಳೂರು– ಬೆಳಗಾವಿ ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲುಗಳು ಗುರುವಾರ ಬೆಳಗಿನ ಜಾವ ಹುಬ್ಬಳ್ಳಿಯಲ್ಲಿಯೇ ನಿಲುಗಡೆಯಾದವು.

ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ರೈಲ್ವೆ ನಿಲ್ದಾಣದಿಂದಲೇ ಬೆಳಗಾವಿಗೆ 14 ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಿತು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಖುದ್ದು ರೈಲ್ವೆ ನಿಲ್ದಾಣದಲ್ಲಿದ್ದು, ಪ್ರಯಾಣಿಕರಿಗೆ ಬಸ್ಸಿನ ಸೌಲಭ್ಯ ಕಲ್ಪಿಸಿಕೊಟ್ಟರು.

ಆದ್ದರಿಂದ ಗುರುವಾರ ರಾತ್ರಿ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿಯಿಂದ ಸಂಚಾರ ಆರಂಭಿಸಿತು. ಇದು ಕೊಲ್ಹಾಪುರದಿಂದ ಸಂಚಾರ ಆರಂಭಿಸಬೇಕಿತ್ತು. ಬೆಳಗಾವಿ ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಎಂದಿನಂತೆ ಕುಂದಾನಗರಿಯಿಂದ ಸಂಚರಿಸಿತು.

ಗೋಕಾಕ್–ಪಾಶ್ಚಾಪುರ ಬಳಿ ರೈಲಿನ ಹಳಿ ಮೇಲೆ ಮಾರ್ಕಂಡೇಯ ನದಿ ನೀರು ಹರಿದ ಕಾರಣ ಗುರುವಾರ ಕೆಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. 

ಯಶವಂತಪುರ–ಜೈಪುರ ಎಕ್ಸ್‌ಪ್ರೆಸ್‌, ವಿಜಯಪುರ–ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ (ಎಸ್‌ಎಂಟಿಎಂ), ಮೀರಜ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌, ಮೀರಜ್‌–ಕ್ಯಾಸಲ್‌ರಾಕ್‌ ಪ್ಯಾಸೇಂಜರ್‌, ಮೀರಜ್‌–ಹುಬ್ಬಳ್ಳಿ ಪ್ಯಾಸೇಂಜರ್‌, ಕೊಲ್ಹಾಪುರ–ಹೈದರಾಬಾದ್‌ ಎಕ್ಸ್‌ಪ್ರೆಸ್‌ ಮತ್ತು ಹುಬ್ಬಳ್ಳಿ–ಲೋಂಡಾ  ಹಜರತ್‌ ನಿಜಾಮುದ್ದೀನ್‌ ಲಿಂಕ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿಲ್ಲ.

ಆ. 10ರಂದು ಯಶವಂತಪುರ–ಜೈಪುರ ಎಕ್ಸ್‌ಪ್ರೆಸ್‌,  8ರಿಂದ 11ರ ತನಕ ಹುಬ್ಬಳ್ಳಿ–ಲೋಕಮಾನ್ಯ ತಿಲಕ್‌, 9ರಿಂದ 12ರ ತನಕ ಲೋಕಮಾನ್ಯ ತಿಲಕ್‌–ಹುಬ್ಬಳ್ಳಿ, 9ರಂದು ಬರ್ಮೆಲ್‌–ಯಶವಂತಪುರ ಎಕ್ಸ್‌ಪ್ರೆಸ್‌, 12ರಂದು ಯಶವಂತಪುರ–ಬರ್ಮೆರ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಈ. ವಿಜಯಾ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು