ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರ ಮೇಲೆ ರಾಮಕೃಷ್ಣ ಮಠದ ಸಾಂಸ್ಕೃತಿಕ ದಾಳಿ; ದಿಂಗಾಲೇಶ್ವರ ಸ್ವಾಮೀಜಿ

ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಆರೋಪ
Last Updated 18 ಸೆಪ್ಟೆಂಬರ್ 2021, 9:14 IST
ಅಕ್ಷರ ಗಾತ್ರ

ಧಾರವಾಡ: ‘ಎಲ್ಲಾ ಧರ್ಮದವರನ್ನೂ ಒಳಗೂಂಡು, ಎಲ್ಲರಿಗೂ ಆಶ್ರಯ ನೀಡುವ ವೀರಶೈವ ಲಿಂಗಾಯತ ಸಮಾಜದ ಮೇಲೆ ವಿವೇಕಾನಂದ ರಾಮಕೃಷ್ಣ ಮಠದವರು ಸಾಂಸ್ಕೃತಿಕ ದಾಳಿ ನಡೆಸಿದ್ದಾರೆ. ಈ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು’ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ 200 ವರ್ಷಗಳ ಹಿಂದೆ ಆರಂಭವಾದ ಲಿಂಗಾಯತ ಸಮಾಜಕ್ಕೆ ಸೇರಿದ ಶಿವಾನಂದ ಮಠದಲ್ಲಿ 1892ರಲ್ಲಿ ಕೆಲ ದಿನಗಳ ಕಾಲ ಸ್ವಾಮಿ ವಿವೇಕಾನಂದರು ತಂಗಿದ್ದರು. ಆದರೆ, ರಾಮಕೃಷ್ಣ ಮಠದವರು ಈ ಜಾಗವೇ ನಮ್ಮದು ಎಂದಿರುವುದು ‘ಇರಲು ಜಾಗ ಕೊಟ್ಟರೆ ಮನೆಯೇ ನನ್ನದು ಎಂದರಂತೆ’ ಎಂಬ ಮಾತಿನಂತಾಗಿದೆ. ಇವರ ಮಾತನ್ನು ಪುರಸ್ಕರಿಸಿದ ಅಂದಿನ ಮುಖ್ಯಮಂತ್ರಿ ಸದಾನಂದಗೌಡ, ಈ ಜಾಗದ ಜತೆಗೆ ₹5ಕೋಟಿ ಹಣವನ್ನೂ ನೀಡಿರುವುದು ಮೂರ್ಖತನದ ಪರಮಾವಧಿ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಇರುವ ಒಂದು ಇತಿಹಾಸವನ್ನು ನಾಶಮಾಡಿ ಮತ್ತೊಂದು ಇತಿಹಾಸ ಸೃಷ್ಟಿಸುವ ಇಂಥ ಆಕ್ರಮಣಗಳನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ರಾಮೃಕೃಷ್ಣ ಮಠಕ್ಕೆ ಸರ್ಕಾರ ಬೇರೆ ಜಾಗ ಕೊಡಲಿ. ಹಾಗೆಯೇ ಮಠವು ಸರ್ವಜನರ ಹಿತ ಬಯಸುವುದೇ ಆದಲ್ಲಿ ದೇಶದಲ್ಲಿರುವ ರಾಮಕೃಷ್ಣ ಮಠಗಳಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಲಿ’ ಎಂದು ಸವಾಲೆಸೆದರು.

‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದೂ ಧರ್ಮದ ದೇಗುಲಗಳು ಹಾಗೂ ವೀರಶೈವ ಲಿಂಗಾತಯ ಮಠಗಳನ್ನು ಕೆಡವುವ, ಇಲ್ಲವೇ ಇತರರಿಗೆ ಪರಭಾರೆ ಮಾಡುವ ಕೆಲಸ ಮಾಡುತ್ತಿದೆ. ಚುನಾವಣೆ ಮೊದಲು ಹಿಂದೂಧರ್ಮ ಹಾಗೂ ಸನ್ಯಾಸಿಗಳನ್ನು ಬಳಸಿಕೊಂಡ ಪಕ್ಷ, ಅಧಿಕಾರ ಸಿಕ್ಕ ನಂತರ ಪ್ರಹಾರ ಆರಂಭಿಸಿದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇಉತ್ತರ ಕೊಡುತ್ತಾರೆ’ ಎಂದು ಎಚ್ಚರಿಸಿದರು.

‘ನಂಜನಗೂಡಿನ ದೇವಾಲಯ ಕೆಡವಿದ ನಂತರ ಪುರಾತತ್ವ ಇಲಾಖೆಯ ದಾಖಲೆ ಪರಿಶೀಲಿಸಲಾಗುವುದು ಎಂದಿರುವುದನ್ನು ನೋಡಿದರೆ ಸರ್ಕಾರದಲ್ಲಿ ಬುದ್ದಿಗೇಡಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಅನುಮಾನವಿಲ್ಲ.ಒಂದೊಮ್ಮೆ ಸರ್ಕಾರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇ ಆದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಕ್ಷೇತ್ರದ ಬಂಕಾಪುರದಲ್ಲಿ ರಸ್ತೆ ಮಧ್ಯವೇ ಇರುವ ಧಾರ್ಮಿಕ ಕೇಂದ್ರವನ್ನು ತೆರವುಗೊಳಿಸಲಿ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಲಿಂಗಾಯತ ಧರ್ಮದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ಕುರಿತಂತೆ ನನ್ನ ಸಹಮತವೂ ಇದೆ. ಜತೆಗೆ ಇದರ ಉಳಿದ ಪಂಗಡಗಳಿಗೂ ಮೀಸಲಾತಿ ವಿಸ್ತರಿಸಬೇಕು ಎಂಬ ಬೇಡಿಕೆಯೂ ಇದೆ. ಹೀಗಾಗಿ ಇನ್ನು ಮುಂದೆ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುತ್ತೇವೆ’ ಎಂದರು.

ಮೊಮ್ಮನಹಳ್ಳಿಯ ಮುಳ್ಳಳ್ಳಿಯ ಶಿವಯೋಗೀಶ್ವರ ಸ್ವಾಮೀಜಿ, ಹಿರೇ ನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಗಡಿಗೌಡಗಾಂವ್‌ನ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ತಾಳಿಕೋಟೆಯ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT