ಶನಿವಾರ, ಜನವರಿ 18, 2020
21 °C
ಉದ್ಯಮಿಗಳ ಜತೆಗಿನ ಪೂರ್ವಭಾವಿ ಸಭೆಯಲ್ಲಿ ಸಚಿವ ಜಗದೀಶ ಶೆಟ್ಟರ್

ಕೈಗಾರಿಕೆಗೆ ಭೂಮಿ ನೀಡಲು ಸದಾ ಸಿದ್ಧ: ಸಚಿವ ಜಗದೀಶ್ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಳಿನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಭೂಮಿ ನೀಡಲು ಸದಾ ಸಿದ್ಧವಿದ್ದೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಸಮಾವೇಶದ ನಿಮಿತ್ತ ಹುಬ್ಬಳ್ಳಿಯಲ್ಲಿ ಸೋಮವಾರ ಸ್ಥಳೀಯ ಉದ್ಯಮಿಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಮುಮ್ಮಿಗಟ್ಟಿ, ಬೇಲೂರು, ಕೋಟೂರ, ಇಟಿಗಟ್ಟಿ, ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಅಂದಾಜು 3 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇಲ್ಲಿ ಭೂ ಬ್ಯಾಂಕ್ ಸ್ಥಾಪಿಸಿ ಉದ್ಯಮಿಗಳಿಗೆ ಭೂಮಿ ನೀಡಲು ಕೆಐಎಡಿಬಿ ಸಿದ್ಧವಿದೆ. ಹೂಡಿಕೆದಾರರು ಮುಂದೆ ಬರಬೇಕು’ ಎಂದರು.

ಎಕ್ಸ್‌ಪ್ರೆಸ್‌ ವೇ ಪರಿವರ್ತನೆಗೆ ಕೋರಿಕೆ:

‘ಮುಂಬೈ–ಬೆಂಗಳೂರು ಮಾರ್ಗವನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗಾರಿಕಾ ಕಾರಿಡಾರ್ ಎಂದು ಘೋಷಿಸಿದೆ. ಅದೇ ರೀತಿ ಪುಣೆ– ಬೆಂಗಳೂರು ರಸ್ತೆಯನ್ನು ಅಷ್ಟಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಅನುದಾನ ನೀಡಿದೆ. ಈ ರಸ್ತೆಯನ್ನು ಎಕ್ಸ್ ಪ್ರೆಸ್ ವೇ ಆಗಿ ಪರಿವರ್ತಿಸಲು ಕೋರಲಾಗಿದೆ’ ಎಂದರು.

‘ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಮತ್ತು ಕೆಐಎಡಿಬಿ ಪ್ರತ್ಯೇಕವಾಗಿ ಆಕರಿಸುತ್ತಿರುವ ತೆರಿಗೆ ವಿಧಾನದ ಬಗ್ಗೆ ಉದ್ಯಮಿಗಳಲ್ಲಿ ತೀವ್ರ ಅಸಮಾಧಾನವಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಸರಕುಗಳ ರಫ್ತಿಗೆ ಅನುಕೂಲವಾಗುವಂತೆ ಬೇಲೆಕೆರಿ ಬಂದರು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಹಿಂದೆ ಶೇ 70ರಷ್ಟು ಇತ್ತು. ಈಗ ಅದು ಶೇ 14ಕ್ಕೆ ಇಳಿದಿದೆ. ಪಿಎಸ್‌ಯುನಿಂದಲೂ (ಸಾರ್ವಜನಿಕ ಸ್ವಾಮ್ಯದ ಉದ್ಯಮಗಳು) ಸರ್ಕಾರ ಕೈ ನಷ್ಟ ಅನುಭವಿಸಿದೆ. ಹಾಗಾಗಿ, ಕೈಗಾರಿಕೆ ಚಟುವಟಿಕೆಗಳಿಂದಲೇ ದೇಶದ ಆರ್ಥಿಕತೆಯನ್ನು ಸರಿದೂಗಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಾವೇಶಕ್ಕೆ ಸಂಬಂಧಿಸಿದಂತೆ, ಉದ್ಯಮಿಗಳು ನೀಡುವ ಸಲಹೆಗಳನ್ನು ಸ್ವೀಕರಿಸುವುದಕ್ಕಾಗಿಯೇ ಅಧಿಕಾರಿಯೊಬ್ಬರನ್ನು ನೇಮಿಸಿ’ ಎಂದು ಜೋಶಿ ಅವರು, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಸೂಚಿಸಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷ್ ಸದಸ್ಯರಾದ ಪ್ರದೀಪ ಶೆಟ್ಟರ್, ಶ್ರೀನಿವಾಸ ಮಾನೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣನ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕಿರಣ ಅಡವಿ, ಉಪ ನಿರ್ದೇಶಕ ಮೋಹನ್ ಭರಮಕ್ಕನವರ, ಸಹಾಯಕ ನಿರ್ದೇಶಕರಾದ ಎನ್.ಎಂ. ಭೀಮಪ್ಪ, ಶಿವಪುತ್ರಪ್ಪ ಇದ್ದರು.

ಹೈದರಾಬಾದ್, ದೆಹಲಿಗೆ ಶೀಘ್ರ ವಿಮಾನ ಸಂಚಾರ: ಜೋಶಿ

‘ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಾಯು ಸಂಪರ್ಕವೂ ಪ್ರಮುಖವಾದುದು. ಸದ್ಯ ಹುಬ್ಬಳ್ಳಿಯಿಂದ 18 ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಇದೆ. ಶೀಘ್ರದಲ್ಲೇ ದೆಹಲಿ ಮತ್ತು ಹೈದರಾಬಾದ್ ನಡುವೆ ವಿಮಾನ ಹಾರಾಡಲಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರತಿದಿನ ಬೆಳಿಗ್ಗೆ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಜೆ ವಿಮಾನ ಸೇವೆ ಆರಂಭವಾಗಲಿದೆ’ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

‘ಕೈಗಾರಿಕೆ ಅಭಿವೃದ್ಧಿಗೆ ಹುಬ್ಬಳ್ಳಿ–ಧಾರವಾಡ ಎಲ್ಲಾ ರೀತಿಯಲ್ಲೂ ಪ್ರಶಸ್ತ ಸ್ಥಳ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ನಗರವನ್ನು ಸಂಪರ್ಕಿಸುತ್ತವೆ. ಜತೆಗೆ, ದೇಶದ ವಿವಿಧ ಭಾಗಗಳಿಗೂ ರೈಲು ಸಂಪರ್ಕವಿದೆ’ ಎಂದು ಹೇಳಿದರು.

ಸಭೆಯಲ್ಲಿ ಬಂದ ಸಲಹೆಗಳು

* ಏಕಗವಾಕ್ಷಿ ವ್ಯವಸ್ಥೆ ಎಂಬುದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಅದು ನಿಜವಾಗಿಯೂ ಕಾರ್ಯರೂಪಕ್ಕೆ ಬರುವಂತೆ ಸಚಿವರಾದ ಜಗದೀಶ ಶೆಟ್ಟರ್ ಮತ್ತು ಪ್ರಹ್ಲಾದ ಜೋಶಿ ಮುಂದಾಗಬೇಕು. ಇದರಿಂದ ಉದ್ಯಮಿಗಳ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲೇ ನಿವಾರಣೆಯಾಗುತ್ತವೆ.

* ಹುಬ್ಬಳ್ಳಿ–ಧಾರವಾಡದಲ್ಲಿ ಹೂಡಿಕೆ ಮಾಡಲು ಇರುವ ಮೂಲಸೌಕರ್ಯ, ಭೂಮಿಯ ಲಭ್ಯತೆ ಸೇರಿದಂತೆ ಹಲವು ಮಾಹಿತಿಯನ್ನೊಳಗೊಂಡ ಪುಸ್ತಿಕೆಯನ್ನು ಹೊರತಂದು ಹಂಚಬೇಕು.

* ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ವಿಶೇಷ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡಬೇಕು.

* ಉದ್ಯಮಿಗಳ ಸಮಸ್ಯೆ ಆಲಿಸುವುದಕ್ಕಾಗಿ ಅಧಿಕಾರಿಗಳು ಹಾಗೂ ಉದ್ಯಮಿಗಳನ್ನೊಳಗೊಂಡ ಸಮಿತಿ ರಚಿಸಬೇಕು.

* ಕೌಶಲ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಿ, ಈ ಭಾಗದ ಯುವಜನತೆಗೆ ಕೌಶಲ ತರಬೇತಿ ನೀಡಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು