ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಲಾಕ್‌ಡೌನ್‌ ಮುಗಿದರೂ ಗರಿಗೆದರದ ಚಟುವಟಿಕೆ; ಮಂದಗತಿಯಲ್ಲಿ ರಿಯಲ್‌ ಎಸ್ಟೇಟ್‌

Last Updated 9 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್ ಬಳಿಕ ಒಂದೂವರೆ ವರ್ಷದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ದೊಡ್ಡ ಹೊಡೆತ ಕಂಡಿದೆ. ಮಹಾನಗರಗಳಲ್ಲಿ ಬಹಳಷ್ಟು ಕಡೆಗಳಲ್ಲಿ ಬೃಹತ್‌ ವಸತಿ ಸಮುಚ್ಚಯಗಳು, ಮನೆಗಳು, ನಿವೇಶನ ಖರೀದಿ ತುಸು ಚೇತರಿಕೆ ಕಂಡರೂ ಇನ್ನೂ ಮೊದಲಿನ ಲಯಕ್ಕೆ ಬಂದಿಲ್ಲ.ಆದಾಗ್ಯೂ ಕೋವಿಡ್‌ ಸಂಕಷ್ಟದಿಂದ ಜನಜೀವನ ತುಸು ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿ, ನಿವೇಶನ ಖರೀದಿ ಹಾಗೂ ಕಟ್ಟಡ ಕೆಲಸಗಳು ಮುಂದುವರಿಯುತ್ತಿವೆ.

ಹುಬ್ಬಳ್ಳಿ ಮಹಾನಗರದಲ್ಲಿ ಬಹಳಷ್ಟು ಕಡೆಗಳಲ್ಲಿ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಹಲವೆಡೆ ನಿರ್ಮಾಣ ಕಾರ್ಯ ನಡೆಯುತ್ತಲೂ ಇದೆ. ಆದರೆ, ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಎರಡು ಲಾಕ್‌ಡೌನ್‌ ಮುಗಿದರೂ ಈಗಲೂ ಚಟುವಟಿಕೆ ಗರಿಗೆದರಿಲ್ಲ.

ಸುಳ್ಳ ರಸ್ತೆ, ಕೇಶ್ವಾಪುರ, ಗೋಕುಲ್ ರಸ್ತೆ, ವಿದ್ಯಾನಗರ ಮುಖ್ಯ ರಸ್ತೆ, ಶಿರೂರು ಪಾರ್ಕ್‌, ಧಾರವಾಡ ರಸ್ತೆ ಮತ್ತಿತರ ಕಡೆಗಳಲ್ಲಿರುವ ಹೊಸ ಮಾಲ್‌ಗಳು ನಿರ್ಮಾಣಗೊಂಡು ವರ್ಷ ಕಳೆದರೂ, ಅಲ್ಲಿನ ಮಳಿಗೆಗಳು ಬಾಡಿಗೆದಾರರಿಲ್ಲದೆ ಖಾಲಿಯಾಗಿಯೇ ಉಳಿದಿವೆ.ಕೆಲವೆಡೆ ಲಾಕ್‌ಡೌನ್‌ ಬಳಿಕ ಮುಚ್ಚಿದ್ದ ಅಂಗಡಿಗಳು ಈಗಲೂ ತೆರೆದಿಲ್ಲ. ಕೆಲ ಮಾಲ್‌ಗಳಲ್ಲಿ ಮೊದಲಿದ್ದ ಅಂಗಡಿಗಳನ್ನು ಖಾಲಿ ಮಾಡಿ ‘ಬಾಡಿಗೆಗೆ ಇವೆ’ ಎಂಬ ಬೋರ್ಡ್ ನೇತು ಹಾಕಲಾಗಿದೆ.

ನಗರದ ಬಹುತೇಕ ಬಡಾವಣೆಗಳಲ್ಲಿ ಸಣ್ಣ ವಸತಿ ಸಮುಚ್ಚಯಗಳು ನಿರ್ಮಾಣಗೊಂಡರೂ ಜನವಸತಿ ಕಾಣುತ್ತಿಲ್ಲ. ಮನೆ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಕೆಲವು ಮಧ್ಯವರ್ತಿಗಳು ಮನೆ ಖರೀದಿಸಲು ಮುಂದಾಗುವವರಿಗೆ ಹೆಚ್ಚಿನ ದರ ಹೇಳಿ, ಕಮಿಷನ್ ಹೊಡೆಯುತ್ತಿದ್ದಾರೆ ಎಂಬ ದೂರುಗಳೂ ಇವೆ.

ರಿಯಲ್ ಎಸ್ಟೇಟ್ ಪರವಾಗಿಲ್ಲ ಎನ್ನುತ್ತಾರೆ ಕೆಲವು ರಿಯಲ್‌ ಎಸ್ಟೇಟ್ ಉದ್ಯಮಿಗಳು. ಇನ್ನು ಕೆಲವರು ಮಂದಗತಿಯಲ್ಲಿ ಸಾಗುತ್ತಿದೆ ಎನ್ನುತ್ತಾರೆ. ಮಧ್ಯಮ ವರ್ಗದವರಿಗೆ ಕಷ್ಟವಾಗಿದೆ ಎನ್ನುತ್ತಾರೆ.

‘ಮೇಲ್‌ ಮಧ್ಯಮವರ್ಗದರು ನಮ್ಮಲ್ಲಿ ಮನೆ ನಿರ್ಮಾಣ ಹಾಗೂ ನಿವೇಶನ ಖರೀದಿಸುತ್ತಲೇ ಇದ್ದಾರೆ. ಮಧ್ಯಮ ಮತ್ತು ಕೆಳ ಮಧ್ಯಮವರ್ಗದವರು ತುಸು ಕಷ್ಟದಲ್ಲಿದ್ದಾರೆ. ಕೋವಿಡ್–19 ಬಳಿಕ ಅವರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ’ ಎನ್ನುತ್ತಾರೆ ನಗರದ ರಿಯಲ್ ಎಸ್ಟೇಟ್‌ ಉದ್ಯಮಿ ಫಿಲೋಮಿನ್.

‘ರಿಯಲ್ ಎಸ್ಟೇಟ್ ಮೇಲೆ ಕೋವಿಡ್‌ ಮತ್ತು ಲಾಕ್‌ಡೌನ್‌ ಪರಿಣಾಮ ಇಲ್ಲವೆಂದಲ್ಲ. ಕೆಲ ತಿಂಗಳು ಉದ್ಯಮ ಹಲವು ಸವಾಲುಗಳನ್ನು ಎದುರಿಸಿದೆ. ಬಳಿಕ ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದೆ’ ಎನ್ನುತ್ತಾರೆ ವಿದ್ಯಾನಗರದ ರೇಣುಕಾ ಪ್ರಾಪರ್ಟಿಸ್‌ನ ಎಸ್‌.ಬಿ. ಬೆಳಗಲಿ.

ಲಾಕ್‌ಡೌನ್ ಬಳಿಕ ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವುದು, ಹೊಸದಾಗಿ ಮನೆ ನಿರ್ಮಾಣ ಮಾಡುವವರಿಗೂ ಹೊರೆಯಾಗಿ ಪರಿಣಮಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ವೆಚ್ಚವೂ ಅಧಿಕವಾಗಿದೆ. ಸಿಮೆಂಟ್‌, ಮರಳು, ಕಬ್ಬಿಣ, ಪೇಯಿಂಟ್ ಸೇರಿದಂತೆ ಹಲವು ಸಾಮಗ್ರಿಗಳ ಬೆಲೆ ಗಗನಮುಖಿಯಾಗಿವೆ. ಹೀಗಾಗಿ ನಿವೇಶನ ಖರೀದಿ ಮಾಡಿದವರಿಗೂ ಮನೆ ಕಟ್ಟಿಕೊಳ್ಳಲು ಕಷ್ಟವಾಗಿದೆ.

‘2019ರಲ್ಲೇ ಮನೆ ಕಟ್ಟಲು ಆರಂಭಿಸಿದ್ದೆ. ಆದರೆ, ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಕಾಮಗಾರಿಗೆ ಬೇಕಾದ ಅಗತ್ಯ ವಸ್ತುಗಳು ಸಿಗಲಿಲ್ಲ. ಕಾರ್ಮಿಕರು ಗುಳೆ ಹೋಗಿದ್ದರಿಂದ ಮನೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ’ ಎನ್ನುತ್ತಾರೆ ವಿಜಯನಗರ ಬಡಾವಣೆಯ ಗುರುಸಿದ್ದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT