ಬುಧವಾರ, ಮಾರ್ಚ್ 29, 2023
23 °C
ನೀರು ಪೂರೈಕೆ ಅವ್ಯವಸ್ಥೆ ಸರಿಪಡಿಸಲು ಕಂಪನಿಗೆ ಒಂದು ವಾರ ಗಡುವು

ಎಲ್‌ ಆ್ಯಂಡ್ ಟಿ ಕಪ್ಪುಪಟ್ಟಿಗೆ ಶಿಫಾರಸು: ಮೇಯರ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಳಿನಗರದಲ್ಲಿ 24X7 ಕುಡಿಯುವ ನೀರು ಪೂರೈಕೆ ಅನುಷ್ಠಾನ ಮತ್ತು ನಿರ್ವಹಣೆ ಹೊಣೆ ಹೊತ್ತಿರುವ ಎಲ್‌ ಆ್ಯಂಡ್ ಟಿ ಕಂಪನಿಯು, ನೀರು ಪೂರೈಕೆಯ ಅವ್ಯವಸ್ಥೆಯನ್ನು ವಾರದೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ, ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಮೇಯರ್ ಈರೇಶ ಅಂಚಟಗೇರಿ ಎಚ್ಚರಿಕೆ ನೀಡಿದರು.

ನೀರಿನ ಸಮಸ್ಯೆ ಕುರಿತು ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಕಂಪನಿ, ಕೆಯುಐಡಿಎಫ್‌ಸಿ, ಜಲಮಂಡಳಿ ಅಧಿಕಾರಿಗಳು ಹಾಗೂ ವಲಯ ಸಹಾಯಕ ಆಯುಕ್ತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕನಿಷ್ಠ 5 ದಿನಕ್ಕೊಮ್ಮೆ ನೀರು ಕೊಡಬೇಕೆಂಬ ಸಾಮಾನ್ಯ ಸಭೆಯ ಸೂಚನೆಯನ್ನು ಕಂಪನಿ ಪಾಲಿಸಿಲ್ಲ. ಬೆಂಗಳೂರಿನಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ನಡೆದ, ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ಕೊಟ್ಟರೂ, ಸಮಸ್ಯೆ ಬಗೆಹರಿದಿಲ್ಲ. ಈ ನಿರ್ಲಕ್ಷ್ಯ ಹಾಗೂ ವೈಫಲ್ಯಗಳ ವರದಿ ನೀಡುವಂತೆ ಸಚಿವರು ಸೂಚಿಸಿದ್ದಾರೆ. ಅದರಂತೆ ವರದಿ ಸಲ್ಲಿಸಿ, ಕಂಪನಿಯ ಗುತ್ತಿಗೆ ರದ್ದುಪಡಿಸಲು ಶಿಫಾರಸು ಮಾಡಲಾಗುವುದು’ ಎಂದರು.

‘ನೀರಿಗೆ ಸಂಬಂಧಿಸಿದ ದೂರು ಸ್ವೀಕರಿಸುವ ಜಾಲವನ್ನು ಕಂಪನಿ ಬಲಪಡಿಸಬೇಕು. ದಿನವಿಡೀ ದೂರು ಆಲಿಸಿ ಸ್ಪಂದಿಸಬೇಕು’ ಎಂದು 24X7 ನೀರು ಪೂರೈಕೆ ಯೋಜನೆ ಅನುಷ್ಠಾನದ ವೀಕ್ಷಕರ ತಂಡ ಸಲಹೆ ನೀಡಿತು. ‘ಯೋಜನೆಯ ಸಾಕಾರಕ್ಕೆ ಕಂಪನಿಯವರೇ ಸಹಕಾರ ನೀಡುತ್ತಿಲ್ಲ’ ಎಂದು ಕೆಯುಐಡಿಎಫ್‌ಸಿ ಅಧಿಕಾರಿ ಎಂ.ಕೆ. ಮನಗೊಂಡ ದೂರಿದರು.

ನೀರು ಪೂರೈಕೆಯ ಮೇಲ್ವಿಚಾರಣೆಗೆ ವಲಯ ಸಹಾಯಕ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಯಿತು. ನಿತ್ಯ ವಾರ್ಡ್‌ವಾರು ನೀರು ಪೂರೈಕೆ ಮಾಹಿತಿ ಸಂಗ್ರಹಿಸಿ, ನಿಗಾ ಇಡುವಂತೆ ಸೂಚಿಸಲಾಯಿತು. ಕಂಪನಿ ಅಧಿಕಾರಿಗಳು ಸಭೆಗೆ ಅಗತ್ಯ ಮಾಹಿತಿ ನೀಡಲಾಗದೆ ಪರದಾಡಿದರು. ಕನ್ನಡದ ಬದಲು ಹಿಂದಿಯಲ್ಲೇ ಮಾತನಾಡಿ, ಕೆಂಗಣ್ಣಿಗೆ ಗುರಿಯಾದರು.

ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ರಾಧಾಬಾಯಿ ಸಫಾರೆ ಹಾಗೂ ಪಾಲಿಕೆಯ ಕೆಲ ಸದಸ್ಯರು ಇದ್ದರು.

‘ಸಿಬ್ಬಂದಿಯನ್ನೇ ಸರಿಯಾಗಿ ನಡೆಸಿಕೊಂಡಿಲ್ಲ’

‘ನಿರೀಕ್ಷೆಯಂತೆ ಕಂಪನಿ ಕೆಲಸ ಮಾಡಿಲ್ಲ. ನಿಮ್ಮ ತಂಡವನ್ನೇ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಸಂಬಳ ಕೊಡದಿದ್ದರಿಂದ, ಕೆಲವರು ಕೆಲಸ ಬಿಟ್ಟು ಹೋಗಿದ್ದಾರೆಂಬ ಆರೋಪ ಕೇಳಿಬಂದಿದೆ. ನೀರು ಪೂರೈಸುವ ಟ್ಯಾಂಕರ್‌ಗಳ ಮೇಲ್ವಿಚಾರಕರು, ವಾಲ್‌ಮನ್‌ಗಳು ಹಾಗೂ ಎಂಜಿನಿಯರ್‌ಗಳ ಮಾಹಿತಿಯನ್ನು ನಾಳೆಯೊಳಗೆ ಪಾಲಿಕೆ ಸದಸ್ಯರಿಗೆ ನೀಡಬೇಕು. ಯಾವಾಗ ಕರೆ ಮಾಡಿದರೂ ಸ್ವೀಕರಿಸಬೇಕು’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ತಾಕೀತು ಮಾಡಿದರು.

ನೀರು ಪೂರೈಕೆ ನೋಡಲ್ ಅಧಿಕಾರಿಗಳು

ವಲಯ:ಅಧಿಕಾರಿ:ಸಂಪರ್ಕ ಸಂಖ್ಯೆ

1: ಫಕ್ಕೀರಪ್ಪ ಇಂಗಳಗಿ: 94801 79801

2: ಎಂ.ಬಿ. ಸಬರದ: 94481 03754

3: ಪಿ.ಬಿ.ಎಂ. ಮಹೇಶ ಶಾಸ್ತ್ರಿ: 63625 05231

4: ರಮೇಶ ನೂಲ್ವಿ: 98803 71894

5: ಶರಣಬಸಪ್ಪ ಕೆಂಬಾವಿ: 86606 42844

6: ಎಸ್‌.ಸಿ. ಬೇವೂರ: 99459 56676

7: ಗಿರೀಶ ತಳವಾರ: 81230 45672

8: ಮಲ್ಲಿಕಾರ್ಜುನ ಬಿ.ಎಂ.: 80196 42908

9: ಆನಂದ ಕಾಂಬಳೆ: 86608 20945

10: ಬಿ.ಕೆ. ಲಮಾಣಿ: 94487 39454

11: ಮನೋಜ್: 98455 89606

12: ಶಂಕರ ಪಾಟೀಲ: 99862 38570

ಪಾಲಿಕೆಯ ನೀರು ಸರಬರಾಜು ಸಹಾಯವಾಣಿ: 0836 2351955

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು