ಬುಧವಾರ, ಆಗಸ್ಟ್ 4, 2021
29 °C

ಯಾವುದೇ ಒತ್ತಡದಿಂದ ರಾಜೀನಾಮೆ ನೀಡಿಲ್ಲ: ಬಾಪುಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಕೆಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯರ ಸೂಚನೆಯಂತೆ ರಾಜಿನಾಮೆ ನೀಡಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಒತ್ತಡದಿಂದಲ್ಲ’ ಎಂದು ಬಾಪುಗೌಡ ಪಾಟೀಲ ಹೇಳಿದರು.

‘2018ರಲ್ಲಿ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನವಲಗುಂದ ತಾಲ್ಲೂಕು ಪ್ರತಿನಿಧಿಸಿ ನಿರ್ದೇಶಕನಾಗಿ ಆಯ್ಕೆಯಾದೆ. ನಂತರ ಹಿತೈಷಿಗಳ ಮಾರ್ಗದರ್ಶನದಂತೆ ಬ್ಯಾಂಕ್ ಅಧ್ಯಕ್ಷನಾದೆ. ಈ 30 ತಿಂಗಳು ಅಧ್ಯಕ್ಷಾವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಉತ್ತಮ ಹಾದಿಯಲ್ಲಿ ನಡೆದು ಲಾಭ ಗಳಿಸುವಂತೆ ಮಾಡಿದ್ದೇನೆ. ಬ್ಯಾಂಕಿನಲ್ಲಿ ಎರಡು ದಶಕಗಳಿಂದ ವಸೂಲಾಗದೇ ಬಾಕಿ ಉಳಿದಿರುವ ವಿವಿಧ ಸಂಸ್ಕರಣ ಘಟಕಗಳ ಸಾಲ ವಸೂಲಾತಿಗೆ ವಿಶೇಷ ಯೋಜನೆ ಜಾರಿಗೆ ತಂದು, ರಾಣೆಬೆನ್ನೂರಿನ ತುಂಗಭದ್ರಾ ರೈತರ ಸಹಕಾರಿ ನೂಲಿನ ಗಿರಣಿ, ಮಲಪ್ರಭಾ ಸಹಕಾರಿ ಎಣ್ಣೆ ಗಿರಣಿ, ವರದಾ ಶುಗರ್ಸ್‌ನಿಂದ ಅಸಲು ಹಾಗೂ ಬಡ್ಡಿ ಸೇರಿ ಸುಮಾರು ₹26 ಕೋಟಿ ವಸೂಲಿ ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರದ ಶೇ 3ರ ಬಡ್ಡಿ ದರದಲ್ಲಿ ನೀಡುವ ಕೃಷಿ ಮಾಧ್ಯಮಿಕ ಯೋಜನೆಗಳಿಗೆ ₹60 ಕೋಟಿ ಸಾಲ ನೀಡಿ ಶೇ 100 ರಷ್ಟು ವಸೂಲಿ ಮಾಡಲಾಗಿದೆ. ಕಿಸಾನ್ ಬಳಕೆ ಸಾಲದ ಯೋಜನೆ, 16 ಸಾವಿರ ರೈತ ಸದಸ್ಯರಿಗೆ ₹43 ಕೋಟಿ ಸಾಲ ವಿತರಣೆ, ₹60 ಕೋಟಿ ಕೃಷಿ ಬೆಳೆಸಾಲ ವಿತರಣೆ ಮಾಡಲಾಗಿದೆ’ ಎಂದು ಬಾಪುಗೌಡ ತಿಳಿಸಿದರು.

‘ನನ್ನ ರಾಜೀನಾಮೆಗೆ ಯಾವುದೇ ತಪ್ಪು ಅರ್ಥ ಕಲ್ಪಿಸುವುದು ಬೇಡ. ಇನ್ನೂ ಎರಡು ವರ್ಷಗಳ ಕಾಲ ನಾನು ಬ್ಯಾಂಕಿನ ಸಾಮಾನ್ಯ ನಿರ್ದೇಶಕರನಾಗಿ ಸೇವೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು